ಯಾರು 52 ವರ್ಷಗಳ ದೇಶದ ಬಾವುಟ ಹಾರಿಸಿಲ್ಲವೋ, ಅವರು ಇಂದು ನಮಗೆ ದೇಶ ಭಕ್ತಿಯ ಪಾಠ ಹೇಳುತ್ತಿದ್ದಾರೆ. ನಮಲ್ಲಿ ಸಂವಿಧಾನವಿದೆ. ಆರ್‌ಎಸ್‌ಎಸ್ ಇಂದಲ್ಲ ನಾಳೆ ರಿಜಿಸ್ಟರ್ ಆಗಬೇಕು. ನಾನು ಮಾಡಿಸುತ್ತೇನೆ. ಯಾವುದೇ ಸಂಘಟನೆಯು ಸಂವಿಧಾನ, ಕಾನೂನಾತ್ಮಕವಾಗಿ ಇರಬೇಕು. ಅವರಿಗೆ ಎಲ್ಲಿಂದ ಇಷ್ಟೊಂದು ದುಡ್ಡು ಬರುತ್ತದೆ. ಅವರು ತೆರಿಗೆಯನ್ನೂ ಕಟ್ಟುತ್ತಿಲ್ಲ. RSS ಇಲ್ಲದಿದ್ದರೆ BJPಯು JDSಗಿಂತ ಕಡೆಯಾಗುತ್ತದೆ. ದೆವ್ವದ ನೆರಳ ಜತೆ ಅಲ್ಲ, ದೆವ್ವದ ಜತೆ ನಾವು ಕಾದಾಡಬೇಕು. ಇಲ್ಲಿ ದೆವ್ವ ಆರ್‌ಎಸ್‌ಎಸ್, ದೆವ್ವದ ನೆರಳು ಬಿಜೆಪಿ ಎಂದು ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರು ಬರೆದಿರುವ ‘ಕರಾವಳಿಯ ರಕ್ತಕಣ್ಣೀರು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಇಂತಹ ಪುಸ್ತಕ ಬರೆಯುವ, ಮುದ್ರಣ ಮಾಡುವ ಹಾಗೂ ಬಹಿರಂಗವಾಗಿ ಚರ್ಚಿಸುವ ಧೈರ್ಯವಿದೆ ಎಂಬುದು ಸಂತೋಷ” ಎಂದರು.
“ರಾಜ್ಯದ ಜಿಡಿಪಿಗೆ ಬೆಂಗಳೂರು 40% ಕೊಡುಗೆ ನೀಡುತ್ತಿದ್ದರೆ, ಮಂಗಳೂರು 5.4% ಕೊಡುಗೆ ನೀಡುತ್ತಿದೆ. ಕರಾವಳಿ ಪ್ರದೇಶ ಆರ್ಥಿಕವಾಗಿ ಮುಂದುವರೆಯುತ್ತಿದೆ. ಆದರೆ, ಕೋಮುಗಲಭೆಗಳು ಇಂತಹ ಸಾಧನೆಗೆ ಹಿನ್ನಡೆ ಉಂಟುಮಾಡುತ್ತಿವೆ. ಈ ರಕ್ತ ಕಣ್ಣೀರಿನಿಂದ ಜನರು ಬಂಡವಾಳ ಹಾಕಲು ಹಿಂದೇಟು ಹಾಕುತ್ತಾರೆ. ‘ಕರಾವಳಿಯಲ್ಲಿ ಹೂಡಿಕೆ ಮಾಡುತ್ತೇವೆ. ಆದರೆ, ನಮ್ಮ ಉದ್ಯೋಗಿಗಳು ರೆಸ್ಟೋರೆಂಟ್ ಹೋದರೆ ಅವರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಅವರ ರಕ್ಷಣೆಯನ್ನು ನೀವು ಖಚಿಪಡಿಸುತ್ತೀರಾ’ ಎಂಬ ಪ್ರಶ್ನೆಗಳು ಉದ್ಯಮಿಗಳಿಂದ ಬರುತ್ತಿವೆ. ಕರಾವಳಿಯು ಕೋಮುಗಲಭೆ ಮುಕ್ತವಾಗಬೇಕು” ಎಂದು ಹೇಳಿದರು.
“ವಾಲ್ಮೀಕಿ ಬರೆದ ರಾಮಾಯಣವೇ ಬೇರೆ, ಈಗ ನಡೆಯುತ್ತಿರುವುದೇ ಬೇರೆ. ರಾಜಕಾರಣಿಗಳು, ಧಾರ್ಮಿಕ ಗುರುಗಳು ತಮಗೆ ಬೇಕಾದಂತೆ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಯಾವ ಧರ್ಮವೂ ಹಿಂಸೆ ಪ್ರಚೋದಿಸಲ್ಲ. ಮೂರು-ಮೂರು ಮಕ್ಕಳನ್ನು ಹೆರಬೇಕು ಎನ್ನುವವರೇ ಮದುವೆ ಆಗಲ್ಲ” ಎಂದರು.
“ರಾಜಕಾರಣಿಗಳು ಪ್ರಭುದ್ಧತೆ ಹೊಂದಿರಬೇಕು. ವಿಷಯ ತಿಳಿದಿರಬೇಕು. ನಾಲಗೆ ಮೇಲೆ ಹಿಡಿತ ಇಟ್ಟು ಮಾತನಾಡಬೇಕು. ಯಾಕೆಂದರೆ ನಾವು ಜನರ ಮೇಲೆ ಪ್ರಭಾವ ಬೀಳುತ್ತೇವೆ. ಆದರೆ, ಕೆಲ ರಾಜಕಾರಣಿಗಳು ಧರ್ಮವನ್ನು ದಾಳ ಮಾಡಿಕೊಂಡಿದ್ದಾರೆ. ಜಾತಿ, ಧರ್ಮ ವ್ಯವಸ್ಥೆ ನಾವು ಮಾಡಿಕೊಂಡಿರುವುದು. ಧರ್ಮದ ನಶೆ ನಿಲ್ಲಬೇಕು. ನಾವು ಜಾಗರೂಕರಾಗಬೇಕು. ಪ್ರಬುದ್ಧರಾಗಬೇಕು. ‘ಧರ್ಮವು ಮನುಷ್ಯನಿಗಾಗಿ ಇದೆಯೇ ಹೊರತು. ಮನುಷ್ಯ ಧರ್ಮಕ್ಕಾಗಿ ಇರುವುದು ಅಲ್ಲ’ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಂಬೇಡ್ಕರ್ ಹೆಸರು ಹೇಳಿದರೆ ಸ್ವಾಭಿಮಾನದ ಬದುಕು ಸಿಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಶೋರ್, “ಇಂದು ಶಿವರಾತ್ರಿ. ಶಿವ ವಿಷವನ್ನು ಗಂಟಲಲ್ಲಿ ಇರಿಸಿಕೊಂಡವನು. ಶಿವನನ್ನೇ ವಿಷ ಹರಡಲು ಬಳಸಲಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಈ ಪುಸ್ತಕ ಭರವಸೆಯಾಗಿದೆ. ಸಿನಿಮಾ ನಟನಾಗಿ ಎಲ್ಲೆಲ್ಲಾ ಧನಿ ಎತ್ತಲು ಸಾಧ್ಯವೋ ಅಲ್ಲಿ ಎತ್ತುತ್ತೇನೆ. ರಕ್ತದಲ್ಲಿರುವ ಕಣ್ಣೀರನ್ನು ದಾಖಲಿಸುವುದು ಮುಖ್ಯ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಪ್ರಕಾಶಕಿ ಮಂಜುಳ ಹುಂಚದಕಟ್ಟೆ ಇದ್ದರು.




