ʼಹೈನುಗಾರಿಕೆ ಮಾಡುವುದರಿಂದ ಹೊಲ ಮನೆ ಕೆಲಸಗಳಾಗುತ್ತವೆ. ಸಗಣಿ ಗೊಬ್ಬರ ಸಿಗುತ್ತದೆ. ವರ್ಷಕ್ಕೆ 40 ಸಾವಿರ ರೂ. ಗೊಬ್ಬರದಲ್ಲೇ ಆದಾಯವಿದೆ. ಇನ್ನು ನಮ್ಮ ಜಮೀನುಗಳಿಗೂ ಸಾವಯವ ಗೊಬ್ಬರವನ್ನು ಬಳಸಬಹದು. ತೆಂಗಿನ ತೋಟ ಇದೆ. ಅದರ ಜತೆಗೆ ಹೈನುಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಅಲ್ಲದೆ ನಮ್ಮ ಆದಾಯದ ಮೂಲವೂ ಹೈನುಗಾರಿಕೆಯೇ ಆಗಿದೆʼ
ಭಾರತದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಹೈನುಗಾರಿಕೆ ಎನ್ನಲಾಗುತ್ತದೆ. ಇಲ್ಲಿ ಮಹಿಳೆಯರ ಕೊಡುಗೆ ಅತ್ಯಂತ ಮಹತ್ವದ್ದು. ರಾಷ್ಟ್ರೀಯ ಮಟ್ಟದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಸುಮಾರು ಶೇ.70ರಷ್ಟು ಮಹಿಳೆಯರೇ ಇರುವುದಾಗಿ ಅಂಕಿಅಂಶಗಳು ಹೇಳುತ್ತವೆ. ರಾಜ್ಯದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘ(ಕೆಎಂಎಫ್/ನಂದಿನಿ)ದ ಮೂಲಕ ಇದು ಮತ್ತಷ್ಟು ಬಲಗೊಂಡಿದ್ದು, 15,981 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ 4,734 ಮಹಿಳಾ ಹಾಲು ಉತ್ಪಾದಕ ಸಂಘಗಳಿವೆ. ಒಟ್ಟು 2.7 ಮಿಲಿಯನ್ ಸದಸ್ಯರಲ್ಲಿ ಶೇ.51ರಷ್ಟು ಮಹಿಳೆಯರು ಹಾಲು ಸರಬರಾಜು ಮಾಡುತ್ತಾರೆ. ಇದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಉದಾಹರಣೆಯಾಗಿದೆ.
ಬೆಳಿಗ್ಗೆ ಎದ್ದ ಕೂಡಲೇ ದನಕರುಗಳನ್ನು ಪೋಷಣೆ ಮಾಡುವುದರಿಂದ ಗ್ರಾಮೀಣ ಮಹಿಳೆಯರ ದಿನ ಆರಂಭವಾಗುತ್ತದೆ. ದನಕರುಗಳನ್ನು ಕೊಟ್ಟಿಗೆಯಿಂದ ಆಚೆಗೆ ಕಟ್ಟುವುದು, ಕಸ ಬಾಚುವುದು, ದನಕರುಗಳ ಮೈ ತೊಳೆಯುವುದು, ಹಾಲು ಕರೆಯುವುದು, ದನಗಳಿಗೆ ಮೇವು ನೀಡುವುದು, ಹಾಲು ಮಾರಾಟ ಮಾಡುವುದು, ಉಳಿದ ಹಾಲನ್ನು ಮನೆಗೆ ತಂದು ಕುದಿಸುವುದು ಸೇರಿದಂತೆ ಹೆಚ್ಚಿನ ಕೆಲಸಗಳನ್ನು ನಿರ್ವಹಿಸುತ್ತಾರೆ. ಬಳಿಕ ಮನೆಯ ಕೆಲಸಗಳನ್ನು ಆರಂಭಿಸುತ್ತಾರೆ. ಅಧ್ಯಯನಗಳ ಪ್ರಕಾರ ಶೇ.90ರಷ್ಟು ಮಹಿಳೆಯರು ಹಾಲು ಕರೆಯುವುದು ಮತ್ತು ಹಸುಗಳ ಆರೈಕೆಯಲ್ಲಿ ತೊಡಗಿದ್ದಾರೆ. ಒಟ್ಟಾರೆಯಾಗಿ ಗ್ರಾಮೀಣ ಮಹಿಳೆಯರು ಬೆಳಿಗ್ಗೆಯಿಂದ ಸಂಜೆಯವರೆಗೆ ದನಗಳ ಜತೆಯಲ್ಲೇ ಇರುತ್ತಾರೆ. ಇದು ಕುಟುಂಬದ ಆದಾಯಕ್ಕೆ ಮಾತ್ರವಲ್ಲ, ಪೋಷಣೆಗೂ ಸಹಾಯ ಮಾಡುತ್ತದೆ.
ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಗೌಡನಹಳ್ಳಿಯ ನಾಗಮಣಿ ಗಣೇಶ್ ಎಂಬುವವರು ಹೈನುಗಾರಿಕೆಯಲ್ಲಿ ತೊಡಗಿದ್ದು, ಅವರ ಬದುಕಿನಲ್ಲಿ ಹೈನುಗಾರಿಕೆ ಹೇಗೆ ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ಈ ದಿನ.ಕಾಮ್‌ನೊಂದಿಗೆ ಹಂಚಿಕೊಂಡಿದ್ದಾರೆ.

“ನಾವು ಸುಮಾರು ಆರೇಳು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದೇವೆ. ಒಂದು ಹಸುವಿನಿಂದ ಶುರುವಾದ ಈ ಉದ್ಯಮ ಈಗ ಒಂಬತ್ತರಿಂದ ಹತ್ತು ಹಸುಗಳಿಗೆ ಬಂದು ತಲುಪಿದೆ. ಒಟ್ಟು ಆರು ಹಸುಗಳು ಹಾಲು ಕೊಡುತ್ತವೆ. ಈ ಸದ್ಯ ಮೂರು ಹಸುಗಳಿಂದ ಹಾಲು ಪಡೆಯುತ್ತಿದ್ದು, ಇನ್ನು ಮೂರು ಹಸುಗಳಲ್ಲಿ ಕಾಲು ಕರೆಯುವುದನ್ನು ನಿಲ್ಲಿಸಿದ್ದೇವೆ. ಆ ಮೂರು ಹಸುಗಳಿಗೆ ಗರ್ಭಧಾರಣೆಯಾಗಿದೆ. ಹಾಗಾಗಿ ಹಾಲು ಕರೆಯುವುದನ್ನು ನಿಲ್ಲಿಸಿದ್ದೇವೆ. ಇಲ್ಲದಿದ್ದರೆ ಮತ್ತೆ ಕರು ಹಾಕಿದಾಗ ಹಾಲು ಕಡಿಮೆ ಆಗುತ್ತದೆ” ಎಂದು ತಿಳಿಸಿದರು.
ಒಟ್ಟಾರೆಯಾಗಿ ದಿನಕ್ಕೆ 60ರಿಂದ 70 ಲೀಟರ್‌ವರೆಗೂ ಹಾಲು ಮಾರಾಟ ಮಾಡಿದ್ದೇವೆ. ಈಗ ಹಾಲು ಕಡಿಮೆಯಾಗಿದೆ. ಮೂರು ಹಸುಗಳಲ್ಲಿ ಹಾಲು ಕರೆಯುತ್ತಿದ್ದು, ದಿನಕ್ಕೆ 30ರಿಂದ 35 ಲೀಟರ್‌ವರೆಗೂ ಮಾರಾಟ ಮಾಡುತ್ತೇವೆ. ಒಂದು ಲೀಟರ್ ಹಾಲಿಗೆ ₹40-₹42ರವರೆಗೆ ಸಿಗುತ್ತದೆ. ತಿಂಗಳಿಗೆ ₹90,000ದ ವರೆಗೆ ಡುಡಿಯಬಹುದು. ಇದರಲ್ಲಿ ₹45,000ನ್ನು ಹಸುಗಳಿಗಾಗಿ ಮೀಸಲಿಟ್ಟರೆ ಇನ್ನು 45 ಸಾವಿರ ರೂ. ಲಾಭ ದೊರೆಯುತ್ತದೆ.

ಹಸುಗಳಿಗೆ ಹಸಿರು ಮೇವು, ಹಿಂಡಿ, ಬೂಸ ಎಲ್ಲವನ್ನೂ ಹಾಕಬೇಕಾಗುತ್ತದೆ. ನಾವು 15 ಕೆಜಿಗೂ ಅಧಿಕ ಮೇವು ನೀಡುತ್ತೇವೆ. ಹಸಿರು ಮೇವನ್ನು ಮನೆಯಲ್ಲೇ ಉತ್ಪಾದನೆ ಮಾಡಿಕೊಳ್ಳುತ್ತೇವೆ. ಹಿಂಡಿ, ಬೂಸಾವನ್ನು ಹೊರಗಿನಿಂದ ಖರೀದಿಸುತ್ತೇವೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ನಮ್ಮ ಮನೆಯ ಹಸಿರು ಮೇವು ದೊರೆಯದಿದ್ದಲ್ಲಿ ಹೊರಗಿಂದ ಖರೀದಿಸುತ್ತೇವೆ. ಒಟ್ಟಾರೆಯಾಗಿ ಬೆಳಿಗ್ಗೆ ಮೂರು ಗಂಟೆ, ಸಂಜೆ ಮೂರು ಗಂಟೆ ನಡುವೆ ಒಂದು ಗಂಟೆ ಅವುಗಳೊಟ್ಟಿಗೆ ಇದ್ದು, ಅವುಗಳನ್ನು ಪೋಷಣೆ ಮಾಡಬೇಕು. ಬಳಿಕ ನಮ್ಮ ಮನೆ ಕೆಲಸದಲ್ಲಿ ಅಥವಾ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು. ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ ಎಂಬುದು ನಾಗಮಣಿ ಗಣೇಶ್ ಅವರ ಅಭಿಪ್ರಾಯವಾಗಿದೆ.
ಹಸುಗಳ ಆರೋಗ್ಯ ತಪಾಸಣೆಗೆ, ಲಸಿಕೆಗಳು ಮತ್ತು ಔಷಧಗಳನ್ನು ನೀಡಲು ವೈದ್ಯರನ್ನು ಕರೆಸುತ್ತೇವೆ. ಕೆಲವೊಮ್ಮೆ ಸರ್ಕಾರಿ ಪಶು ವೈದ್ಯಕೀಯ ವೈದ್ಯರು ಬಂದರೆ ಕೆಲವೊಮ್ಮೆ ಖಾಸಗಿ ವೈದ್ಯರನ್ನೂ ಕರೆಸಿಕೊಳ್ಳಬೇಕಾಗುತ್ತದೆ. ಮಾಸ್ಟೈಟಿಸ್, ಫೀವರ್, ಹೊಟ್ಟೆ ತೊಂದರೆಯಂತಹ ಇತ್ಯಾದಿ ರೋಗಗಳು ಹಸುಗಳನ್ನು ಕಾಡುತ್ತವೆ. ಇವುಗಳನ್ನು ತಡೆಗಟ್ಟಲು ವೈದ್ಯರು ಔಷಧಿಗಳನ್ನು ನೀಡುತ್ತಾರೆ. ಇಂತಹ ವೇಳೆ 500-1000 ರೂ. ಖರ್ಚಾಗುತ್ತೆ. ಅವುಗಳನ್ನೂ ಕೂಡ ನಮ್ಮ ಮಕ್ಕಳಂತೆಯೇ ಪೋಷಣೆ ಮಾಡುವ ಜವಾಬ್ದಾರಿ ಇರುತ್ತದೆ.

ಹಸುಗಳು ಕರು ಹಾಕಿದ ಮೂರ್ನಾಲ್ಕು ತಿಂಗಳು ಉತ್ತಮವಾದ ಆದಾಯ ಇರುತ್ತದೆ. 10ದಿನಗಳಿಗೊಮ್ಮೆ ಪೇಮೆಂಟ್ ಬರುತ್ತೆ. ತಿಂಗಳಲ್ಲಿ ಮೂರು ಬಾರಿ ಪೇಮೆಂಟ್ ನೋಡಬಹುದು. ಹಸುಗಳಿದ್ದರೆ ಯಾವುದೇ ರೀತಿಯ ಟೆನ್ಷನ್ ಇರುವುದಿಲ್ಲ. ಕೈಯಲ್ಲಿ ಯಾವಾಗಲೂ ದುಡ್ಡು ಓಡಾಡ್ತಿರುತ್ತೆ. ಎಷ್ಟೇ ಕಷ್ಟಗಳಿದ್ದರೂ ಹೇಗೋ ಕಳೆದುಹೋಗಿ ಬಿಡುತ್ತದೆ. ಏನೋ ಒಂದು ರೀತಿ ಸಮಾಧಾನ ಇರುತ್ತದೆ. ಆದರೆ ಹಾಲು ಕಡಿಮೆಯಾದಾಗ ಸ್ವಲ್ಪ ಕಷ್ಟ ಆಗುತ್ತೆ. ಆದಾಯ ಇರೋದಿಲ್ಲ. ಹಾಗಂರ ಹಸುಗಳಿಗೆ ಮೇವು ನೀಡುವುದನ್ನು ತಪ್ಪಿಸುವುದಕ್ಕೆ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ವಲ್ಪ ಮೇಲೆ ಖರ್ಚು ಬರುತ್ತೆ….. ಹೇಗೋ ನೀಭಾಯಿಸಿಕೊಳ್ತಿವಿ.
ಯಾವುದೇ ರೀತಿಯ ಸರ್ಕಾರಿ ಬ್ಯಾಂಕ್ ಲೋನ್‌ಗಳು, ಸಬ್ಸಿಡಿಗಳು ದೊರೆತಿಲ್ಲ. ಆದರೆ ಖಾಸಗಿ ಬ್ಯಾಂಕ್‌ಗಳಿಂದ ಲೋನ್ ಪಡೆದಿದ್ದೇವೆ. ಹಾಲಿನ ಆದಾಯದಿಂದಲೇ ಸಾಲದ ಮರುಪಾವತಿಯನ್ನು ಮಾಡಬೇಕಾಗಿದೆ. ನಮ್ಮ ಕುಟುಂಬಕ್ಕೆ, ಬದುಕಿಗೆ ಹೈನುಗಾರಿಕೆಯೇ ಜಿವನಾಧಾರವಾಗಿದೆ. ಮಗಳನ್ನು ಓದಿಸುವುದಕ್ಕೂ ಇದೇ ಆದಾಯವನ್ನು ನಂಬಿಕೊಂಡಿದ್ದೇವೆ.

ಸರ್ಕಾರಿ ಬ್ಯಾಂಕ್‌ಗಳಲ್ಲಿ ಲೋನ್ ಪಡೆಯಲು, ಸಬ್ಸಿಡಿ ಪಡೆಯಲು ಸರ್ಕಾರಿ ಡೈರಿಗೆ ಹಾಲು ಮಾರಾಟ ಮಾಡಬೇಕು. ಆದರೆ ನಾವು ಖಾಸಗಿ ಡೈರಿ ಗೋದ್ರಾಜ್ ಜೆರ್ಸಿ ಎನ್ನುವ ಕಂಪೆನಿಗೆ ಹಾಲು ಮಾರಾಟ ಮಾಡುತ್ತೇವೆ. ಒಳ್ಳೆಯ ದರದಲ್ಲಿ ಹಾಲು ಮಾರಾಟವಾಗುತ್ತದೆ. ಉದ್ದೇಶ ಪೂರ್ವಕವಾಗಿ ಸರ್ಕಾರಿ ಡೈರಿಗಳಲ್ಲಿ ಕೆಲವರು ರಾಜಕಾರಣ ಮಾಡುತ್ತಾರೆ. ಊರಿನ ಬದುಕಿನಲ್ಲಿಯೂ ಪಕ್ಷಗಳನ್ನು ತರುತ್ತಾರೆ. ಇಲ್ಲಿ ಬಹುತೇಕರು ಜೆಡಿಎಸ್ ಫಾಲೋವರ್ಸ್ ಇದ್ದಾರೆ. ನಾವು ತಳಸಮುದಾಯ ಆಗಿರುವ ಕಾರಣ ಬೆಳೆಯುವುದನ್ನೂ ಸಹಿಸದ ಕೆಲವು ಜಾತಿವಾದಿಗಳು ಉದ್ದೇಶ ಪೂರ್ವಕವಾಗಿ ಹಾಲನ್ನು ವಾಪಸ್ ಕಳುಹಿಸುತ್ತಿದ್ದರು. ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಿದ್ದರು. ಹಾಗಾಗಿ ನಾವು ಖಾಸಗಿ ಡೈರಿಗೆ ಹಾಲು ಮಾರಾಟ ಮಾಡುತ್ತೇವೆ.
ಸರ್ಕಾರಿ ಡೈರಿಗೆ ಹಾಲನ್ನು ನಾವೇ ಹೊತ್ತುಕೊಂಡು ಹೋಗಬೇಕು. ಆದರೆ ಈಗ ಹಾಗಿಲ್ಲ, ಹಾಲು ಕರೆಯಲು ಮಷೀನ್ ಬಳಸುತ್ತೇವೆ. ಕರೆದ ಹಾಲನ್ನು ತೂಕ ಮಾಡಿ ಕ್ಯಾನ್ ಕಟ್ಟಿ ಹೊರಗೆ ಇಟ್ಟರೆ, ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ. ಬಳಿಕ ಎಷ್ಟು ಲೀಟರ್ ಹಲು ಇರುತ್ತದೆ ಎಂಬುದು ನಮ್ಮ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಮೊದಲೇ ನಾವೂ ಕೂಡ ತೂಕ ಮಾಡಿರುವುದರಿಂದ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ. ಲೆಕ್ಕ ಸರಿಯಾಗಿರುತ್ತದೆ. ಒಮ್ಮೊಮ್ಮೆ ಒಂದೆರೆಡು ಗ್ರಾಂ ಆಚೆ ಈಚೆ ಆಗುತ್ತದೆ. ಉಳಿದಂತೆ ಏನೂ ಸಮಸ್ಯೆ ಇಲ್ಲ.

ಒಟ್ಟಾರೆಯಾಗಿ ಹೈನುಗಾರಿಕೆ ಆರಂಭಿಸಿದ ಮೇಲೆ ಖುಷಿಯಾಗಿದ್ದೇವೆ. ನಮ್ಮನೆಯವರು ಕೂಡ ಬೆಂಬಲವಾಗಿದ್ದಾರೆ. ಅವರು ಮೊದಲು ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಹೈನುಗಾರಿಕೆ ಆರಂಭಿಸಿದ ಮೇಲೆ ಇಬ್ಬರೂ ಕೂಡ ಇದರಲ್ಲೇ ತೊಡಗಿಸಿಕೊಂಡಿದ್ದೇವೆ. ಪರವಾಗಿಲ್ಲ, ಯಾರೇ ಹೈನುಗಾರಿಕೆ ಶುರು ಮಾಡುವುದಿದ್ದರೆ, ಮಾಡಬಹುದು….. ಪೂರ್ತಿ ಬರ್ಡನ್ ಆಗುವುದಿಲ್ಲ. ಆದರೆ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಮುಳುಗುವ ಸಾಧ್ಯತೆಯೂ ಇರುತ್ತದೆ, ಹಾಗಾಗಿ ಜಾಗ್ರತೆಯಿಂದ ನಿರ್ವಹಣೆ ಮಾಡಿಕೊಂಡು ಹೋದರೆ ಯಾವುದೇ ರೀತಿಯ ತೊಂದರೆ ಇಲ್ಲ. ಹೈನುಗಾರಿಕೆ ಮಾಡುವುದರಿಂದ ಹೊಲ ಮನೆ ಕೆಲಸಗಳಾಗುತ್ತವೆ. ಸಗಣಿ ಗೊಬ್ಬರ ಸಿಗುತ್ತದೆ. ವರ್ಷಕ್ಕೆ 40 ಸಾವಿರ ರೂ. ಗೊಬ್ಬರದಲ್ಲೇ ಆದಾಯವಿದೆ. ಇನ್ನು ನಮ್ಮ ಜಮೀನುಗಳಿಗೂ ಸಾವಯವ ಗೊಬ್ಬರವನ್ನು ಬಳಸಬಹದು. ತೆಂಗಿನ ತೋಟ ಇದೆ. ಅದರ ಜತೆಗೆ ಹೈನುಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಅಲ್ಲದೆ ನಮ್ಮ ಆದಾಯದ ಮೂಲವೂ ಹೈನುಗಾರಿಕೆಯೇ ಆಗಿದೆ ಎಂಬುದು ಹೈನುಗಾರಿಕೆಯಲ್ಲಿ ತೊಡಗಿರುವ ನಾಗಮಣಿ ಗಣೇಶ್ ಅವರ ಮಾತುಗಳು.
ಹಾಲು ಉತ್ಪಾದನಾ ಸಹಕಾರಿ ಸಂಘಗಳ ಮೂಲಕವೂ ಸಬಲೀಕರಣ ಹೊಂದಬಹುದು. ಕೆಎಂಎಫ್‌ನ STEP(ಸಪೋರ್ಟ್ ಟು ಟ್ರೈನಿಂಗ್ ಅಂಡ್ ಎಂಪ್ಲಾಯ್‌ಮೆಂಟ್ ಪ್ರೋಗ್ರಾಮ್ ಫಾರ್ ವುಮೆನ್) ಯೋಜನೆ ಮಹಿಳೆಯರಿಗೆ ವಿಶೇಷ ತರಬೇತಿ ನೀಡುತ್ತದೆ. ವೈಜ್ಞಾನಿಕ ಹೈನುಗಾರಿಕೆ, ಶುದ್ಧ ಹಾಲು ಉತ್ಪಾದನೆ, ಮೇವು ಬೆಳೆಯುವುದು, ಪಶು ವೈದ್ಯಕೀಯ ಸೌಲಭ್ಯ ಮತ್ತು ಕೃತಕ ಗರ್ಭಧಾರಣೆಯ ತರಬೇತಿ ಇಲ್ಲಿ ಸಿಗುತ್ತದೆ. ಅಲ್ಲದೆ ಇಲ್ಲಿ ಮಹಿಳೆಯರಿಗೆ ಹಸುಗಳು, ಸಲಕರಣೆಗಳು ಮತ್ತು ಬಂಡವಾಳಕ್ಕೆ ಸಹಾಯವನ್ನೂ ನೀಡಲಾಗುತ್ತದೆ, ಇದರಿಂದ ಮಹಿಳೆಯರು ಸ್ವಂತ ಉದ್ಯಮಿಗಳಾಗಿ ಬದಲಾಗಿದ್ದಾರೆ. ರಾಜ್ಯದಲ್ಲಿ ಸಾವಿರಾರು ಮಹಿಳಾ ಸಹಕಾರಿ ಸಂಘಗಳು ಕುಟುಂಬದ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತಿವೆ.

ಇದನ್ನೂ ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು
ಸವಾಲುಗಳು ಮತ್ತು ಮುಂದಿನ ದಾರಿ
ಮಹಿಳೆಯರು ಭೂಮಿ, ಸಾಲ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳದೆ ಸೀಮಿತ ಪ್ರವೇಶ ಹೊಂದಿದ್ದಾರೆ. ಆಧುನಿಕ ತಂತ್ರಜ್ಞಾನ, ಬಯೋಗ್ಯಾಸ್ ಪ್ಲಾಂಟ್ ಮತ್ತು ಆನ್‌ಲೈನ್ ಮಾರಾಟದ ಮೂಲಕ ಮಹಿಳೆಯರು ಮುಂದುವರೆಯಬೇಕಾಗಿದೆ. ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಕೇವಲ ಕೆಲಸವಲ್ಲ. ಅದು ಸಬಲೀಕರಣದ ಸಂಕೇತ. ಕರ್ನಾಟಕದ ನಂದಿನಿ ಹಾಲು ಮೂಲಕ ಲಕ್ಷಾಂತರ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಇದು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೆರವಾಗುತ್ತಿದೆ. ಮಹಿಳೆಯರಿಗೆ ಹೆಚ್ಚಿನ ತರಬೇತಿ, ಸೌಲಭ್ಯಗಳು ದೊರೆತರೆ ಹೈನುಗಾರಿಕೆಯು ʼಮಹಿಳಾ ಉದ್ಯಮʼವಾಗಿ ಬೆಳೆಯುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.





