ಕೆಜಿಎಫ್: ಇಲ್ಲಿನ ಎನ್.ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಜಪಲ್ಲಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಬಳಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಶಾಲಾ ಆವರಣ ಹಾಗೂ ಶಾಲೆ ಹಿಂಭಾಗದ ಮನೆಗಳಿಗೆ ಕೊಳಚೆ ನೀರು ನುಗ್ಗುತ್ತಿದ್ದು ,ಸಾಂಕ್ರಾಮಿಕ ರೋಗ ಹರಡುವ ಬೀತಿ ಎದುರಾಗಿದೆ ಎಂದು ಎಸ್ಡಿಎಂಸಿ ಮಾಜಿ ಅಧ್ಯಕ್ಷ ಎಸ್. ರಘುಪತಿ ಆರೋಪಿಸಿದ್ದಾರೆ.
ಪಟ್ಟಣದ ಬಳಿಯ ಬಲಜಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 3-4 ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರು ಚರಂಡಿ ನಿರ್ಮಿಸುವ ನೆಪದಲ್ಲಿ ಶಾಲೆಯ ಕಾಂಪೌಂಡನ್ನು ಸಹ ತಿರವುಗೊಳಿಸಿದ್ದು, ಕೇವಲ 25 ಮೀಟರ್ ವರೆಗೂ ಚರಂಡಿ ನಿರ್ಮಿಸಿ, ಅರ್ಧದಲ್ಲೇ ಸ್ಥಗಿತಗೊಳಿಸಿದ ಪರಿಣಾಮ ಶಾಲೆಯ ಆವರಣಕ್ಕೆ ಕೊಳಚೆ ನೀರು ಶಾಲೆಯೊಳಕ್ಕೆ ನುಗ್ಗುತಿದೆ.
ಜೊತೆಗೆ ಪಕ್ಕದ ಮನೆಗಳಿಗೂ ನುಗ್ಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗಿದ್ದು ತಕ್ಷಣ ಚರಂಡಿ ಸರಿಪಡಿಸುವಂತೆ ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರಿಗೆ ಮನವಿ ಸಲ್ಲಿಸಿದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾದ ಪರಿಣಾಮ ಶಾಲೆಯನ್ನು ಮುಚ್ಚಿದ್ದು, ಶಾಲಾ ಮಕ್ಕಳು ಸುಂದರಪಾಳ್ಯ ಹಾಗೂ ಇತರೆ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ ಇದೀಗ ಶಾಲೆಯ ಬಳಿ ಅವೈಜ್ಞಾನಿಕ ಚರಂಡಿ ಯಿಂದ ಶಾಲೆಯ ಕಟ್ಟಡವು ಸಹ ಕೊಳಚೆ ನೀರು ಹರಿದು ಕೊಳಚೆ ನೀರು ಹರಿಯದೇ ಶಾಲೆಯ ಕಟ್ಟಡಗಳು ಸಹ ಬೀಳುವ ಹಂತಕ್ಕೆ ತಲುಪಿದೆ ನೀರು ಸಹ ಪಾಚುಗಟ್ಟುತ್ತಿದೆ ಎಂದು ದೂರಿದರು.
ಇದನ್ನು ಓದಿದ್ದೀರಾ..?ಕೇಂದ್ರದ ವಿರುದ್ಧ ಹಳ್ಳಿಗಳಲ್ಲಿ ಆಂದೋಲನ ನಡೆಯಲಿ: ಎಐಸಿಸಿ ಕಾರ್ಯದರ್ಶಿ ಅಭಿಷೇಕ ದತ್ತ
ಈ ಕೂಡಲೇ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರು ತಕ್ಷಣ ಚರಂಡಿ ನಿರ್ಮಿಸಿದ್ದಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





