ಕೋಲಾರ: ಪರಿಶಿಷ್ಟ ಪಂಗಡಕ್ಕೆ ಬಲಿಷ್ಠ ಜಾತಿಗಳನ್ನು ಸೇರಿಸಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ನಗರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ ಮುಂಭಾಗ ಆರಂಭಗೊಂಡ ರ್ಯಾಲಿಯು ಎಂಜಿ ರಸ್ತೆ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಮೆಕ್ಕೆ ವೃತ್ತಕ್ಕೆ ತೆರಳಿತು. ಅಲ್ಲಿ ಸುಮಾರು ೧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ರಸ್ತೆ ತಡೆಯಿಂದಾಗಿ ವಿವಿಧ ವಾಹನಗಳ ಸವಾರರು ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಬಳಿಕ ಉಪ ವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಸ್ಥಳಕ್ಕಾಗಮಿಸಿದರು. ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಕೆ.ಆನಂದ್ ಕುಮಾರ್ ನಮ್ಮ ಸಮುದಾಯವು ಸಾಕಷ್ಟು ಹಿಂದೆ ಉಳಿದಿದ್ದು, ಹೀಗಿರುವ ಸಂದರ್ಭದಲ್ಲಿ ಬಲಿಷ್ಠ ಜಾತಿಗಳನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವುದರಿಂದ ಮತ್ತಷ್ಟು ಹೊಡೆತ ಬಿದ್ದಂತಾಗುತ್ತದೆ. ಹೀಗಾಗಿ ವಿವಿಧ ಜಾತಿಗಳನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ಇನ್ನು ಕೋಲಾರದ ವಾಲ್ಮೀಕಿ ಭವನದ ಬಳಿ ಜಾಗ ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸಿ ಸಮುದಾಯ ಭವನಕ್ಕೆ ಸೇರಿದ ಆಸ್ತಿ ಉಳಿಸಬೇಕೆಂದರು. ಆಗ ಮಾತನಾಡಿದ ಉಪವಿಭಾಗಾಧಿಕಾರಿ, ಜಾಗದ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಮಾತನಾಡುವುದು ಬೇಡ. ಉಳಿದ ಬೇಡಿಕೆಗಳ ಈಡೇರಿಕೆ ಕುರಿತ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖೇನ ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ | ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿ 3 ದಿನಗಳ ಬಳಿಕ ಶವವಾಗಿ ಪತ್ತೆ
ಪ್ರತಿಭಟನೆಯಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸೇನೆ ರಾಜ್ಯ ಅಧ್ಯಕ್ಷ ಚಳುವಳಿ ನಾಗರಾಜ್, ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಹಳ್ಳಿ ನಾಗರಾಜ್, ಮುಖಂಡರಾದ ಹುಂಗೇನಹಳ್ಳಿ ವೆಂಕಟೇಶ್, ಕೆ.ಎಸ್.ಆರ್.ಟಿ.ಸಿ ಮುನಿಯಪ್ಪ, ಬೆಡಶೆಟ್ಟಿಹಳ್ಳಿ ರಮೇಶ್, ಮುರಳಿ, ನರಸಾಪುರ ನಾಗರಾಜ್, ಅಶ್ವಥ್, ಶ್ಯಾಮ್ ನಾಯಕ್ ಮುಂತಾದವರು ಇದ್ದರು.





