ಚಿಕ್ಕಬಳ್ಳಾಪುರ: ನಾಡು ನುಡಿ ಭಾಷೆ ಸಾಹಿತ್ಯದ ಬೆಳವಣಿಗೆಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಂಚನಬಲೆ ಎಂ. ಶ್ರೀನಿವಾಸ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿಕೊಟ್ಟ ಕನ್ನಡ ರಾಜ್ಯೋತ್ಸವ ಅಪ್ಪು ಅಜರಾಮರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೈಸೂರು ಮಹಾರಾಜರು, ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿನ ಜತೆಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅಗಣಿತ ಸಂಘ ಸಂಸ್ಥೆಗಳ ಕಳಕಳಿ,ಬದ್ಧತೆ, ಹೋರಾಟದ ಗುಣ, ಸಮರ್ಪಣಾ ಭಾವದಿಂದ ನಾಡು ನುಡಿಯೊಂದಿಗೆ ಸಾಹಿತ್ಯ ಸಂಸ್ಕೃತಿ ಉಳಿದು ಬೆಳೆದು ಬಂದಿದೆ. ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ಸಮಿತಿಯು ಕಳೆದ ಮೂರು ವರ್ಷಗಳಿಂದ ಈ ಕಾರ್ಯದಲ್ಲಿ ಶ್ರಮಿಸುತ್ತಿದೆ.ಸಾಹಿತ್ಯ ಸಂಸ್ಕೃತಿಯ ಜತೆಗೆ ಸರ್ಕಾರಿ ಶಾಲೆಗಳ ಪುರೋಭಿವೃದ್ದಿಗೆ ಕಟಿಬದ್ಧವಾಗಿರುವ ನಾವು ಪಠ್ಯ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ನೀಡುತ್ತಾ ಬಡಮಕ್ಕಳ ಬದುಕಿಗೆ ಆಸರೆಯಾಗಿದ್ದೇವೆ ಎಂದರು.
ಸಾಮಾಜಿಕ ಹೋರಾಟಗಾರ ಕೆ.ಸಿ. ರಾಜಾಕಾಂತ್ ಮಾತನಾಡಿ ಗಡಿಭಾಗದಲ್ಲಿ ಕರ್ನಾಟಕ ರಕ್ಷಣಾ ಸಮಿತಿ ನಾಡು ನುಡಿ ಬೆಳವಣಿಗೆಗೆ ಶ್ರಮಿಸುತ್ತಿದೆ.ಬಡ ಕುಟುಂಬದಲ್ಲಿ ಹುಟ್ಟಿದ ಸ್ನೇಹಿತರೆಲ್ಲ ಸೇರಿ ಈ ಸಂಸ್ಥೆಯ ಮೂಲಕ ಕಲಾಭಿಮಾನಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ.ಶ್ರೀಮಂತರಿಗೆ ಮಾನವ ಪ್ರೇಮ ಇರುವುದು ಕಡಿಮೆ.ಹಣವುಳ್ಳವರು ರಾಜ್ಯೋತ್ಸವವನ್ನು ದೇಶ ವಿದೇಶಗಳಲ್ಲಿ ಆಚರಿಸುತ್ತಾರೆ.ಹಿರಿಯ ಸಾಹಿತಿಗಳು ಮಾತ್ರ ಕನ್ನಡ ಕಟ್ಟುತ್ತಿದ್ದರು.ಅವರ ಶ್ರಮದಿಂದ ಭಾಷೆ ಎತ್ತರೆತ್ತರಕ್ಕೆ ಬೆಳೆದಿದೆ.ಆಚರಣೆ ಆದರೆ ಸಾಲದು, ಮನೆಯಲ್ಲಿ ಬಳಕೆ ಮಾಡುವ ಮೂಲಕ ಗೌರವಿಸಬೇಕು.ಸಿನಿಮಾ ನಟರೂ ಕೂಡ ಮನೆಯಲ್ಲಿ ಕನ್ನಡ ಬಳಸದಿರುವುದು ವಿಪರ್ಯಾಸ ಎಂದರು.
ಜಿಲ್ಲೆಯಲ್ಲಿ ಶುದ್ಧಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಾವೇರಿ ಚಳವಳಿಗೆ ಬಯಲು ಸೀಮೆಯ ಜನರೂ ಸ್ಪಂದಿಸಿದ್ದಾರೆ.ಆದರೆ ನಮ್ಮ ಸಮಸ್ಯೆ ಕಾವೇರಿ ಕಣಿವೆಯ ಜನತೆಗೆ ಅರ್ಥ ಆಗುವುದಿಲ್ಲ ಯಾಕೆ? ನಮ್ಮಂತೆ ಎಲ್ಲರೂ ಕೂಡಿ ದನಿಯೆತ್ತಬೇಕು ಎಂದರು.ನಮ್ಮ ಮಕ್ಕಳಿಗೆ ಶುದ್ಧ ನೀರು ಕೊಡಲಾಗುತ್ತಿಲ್ಲ.ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ಸಾಗಿದೆ.ನಾವೂ ಕೂಡ ಮುಂದಿನ ಪೀಳಿಗೆಗೆ ಶುದ್ಧ ನೀರು ಕೊಡಬೇಕಿದೆ ಎಂದು ಹೇಳಿದರು.
ರೈತರ ಸಮಸ್ಯೆ ಸರ್ಕಾರ ಅರಿಯಬೇಕು.ಹೆಚ್.ಎನ್.ವ್ಯಾಲಿ ನೀರು ಆರೋಗ್ಯಕರ ಹಾನಿಕಾರಕವಾಗಿದೆ.ಎತ್ತಿನಹೊಳೆ ಬಜೆಟ್ ಗಾತ್ರ ಹೆಚ್ಚಾಗಿದೆ ವಿನಃ ಈವರೆಗೆ ನೀರು ಬಂದಿಲ್ಲ.ಈ ಬಗ್ಗೆ ಹೋರಾಟಕ್ಕೆ ಕೈಜೋಡಿಸಿ ಎಂದರು.ಗಡಿ ಜಿಲ್ಲೆಯಾದ ಇಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಕೊಡೋಣ,ಆ ಮೂಲಕ ಕನ್ನಡ ಕಟ್ಟೋಣ ಎಂದರು.
ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿ ಕನ್ನಡ ನಾಡು ನುಡಿ ಕಟ್ಟುವ ಕೆಲಸದಲ್ಲಿ ಸದಾ ಕಾಲ ನಿರತನಾಗಿದ್ದೇನೆ.ಎಲ್ಲ ಸಂಘಟನೆಗಳ ಜತೆಗೆ ನನ್ನ ಒಡನಾಟವಿದ್ದು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಚಿತ್ರ ಸಾಹಿತಿ ವರದರಾಜು ಮಾತನಾಡಿ ನಾವು ನವೆಂಬರ್ ಕನ್ನಡಿಗರಲ್ಲ.ನಾವು ನಂಬರ್ ಒನ್ ಕನ್ನಡಿಗರು.ಗಡಿ ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆ ಉತ್ತಮವಾಗಿದೆ.ಈ ಬೆಳವಣಿಗೆಗೆ ಹಲವು ಸಂಘ ಸಂಸ್ಥೆಗಳು ಕಾರಣ. ಪುನಿತ್ ರಾಜ್ ಕುಮಾರ್ ಕನ್ನಡದ ಆಸ್ತಿ,ಅವರ ಪ್ರಭಾವ ಬಿಟ್ಟು ಹೋದ ಹೆಜ್ಜೆ ಗುರುತು ನಾಡನ್ನು ಮುನ್ನಡೆಸಿದೆ,ಮುನ್ನಡೆಸುತ್ತದೆ ಎಂಬುದು ನಮ್ಮ ಹೆಮ್ಮೆ ಎಂದರು.
ಕನ್ನಡ ಚಿತ್ರರಂಗದ ಎರಡು ಮುಖಗಳು ಶಂಕರ್ ನಾಗ್ ಮತ್ತು ಪುನಿತ್ ರಾಜ್, ಶಂಕರಣ್ಣನ ಮಾಲ್ಗುಡಿ ಡೇಸ್ ಧಾರಾವಾಹಿ ಭಾರತೀಯ ಚಿತ್ರರಂಗದಲ್ಲಿ ಮಾದರಿಯಾಗುತ್ತದೆ. ಒಂದು ಮುತ್ತಿನ ಕಥೆ ಚಿತ್ರವನ್ನು ಸೆರೆ ಹಿಡಿಯಲು ಲೈವ್ ಕ್ಯಾಮೆರಾವನ್ನು ನೀರಲ್ಲಿ ತೆಗೆದುಕೊಂಡು ಹೋದ ದಿಟ್ಟ ಸಾಹಸಿ ಶಂಕರ್ ನಾಗ್ ಆಗಿದ್ದಾರೆ. ಡಬ್ಬಿಂಗ್ ಸುಲಭ ಎಂದು ಎಲ್ಲರೂ ಹೇಳುತ್ತಾರೆ.ಆದರೆ ಡಬ್ಬಿಂಗ್ ಸುಲಭದ ಕೆಲಸವಲ್ಲ. ಎರಡು ಭಾಷೆಗಳಲ್ಲಿ ವ್ಯತ್ಯಾಸ ಬಾರದಂತೆ ಈ ಕೆಲಸ ಮಾಡಬೇಕು. ಇತ್ತೀಚಿನ ಚಿಕರಿ ಚಿಕರಿ ಹಾಡು ೪೫ ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಶ್ರೀನಿವಾಸ್ ಅವರು ಅಪ್ಪಟ ಕನ್ನಡ ಪ್ರೇಮಿಯಾಗಿದ್ದು ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಆರ್ಪಿಐನ ಜಿ.ಸಿ.ವೆಂಕಟರೋಣಪ್ಪ ಮಾತನಾಡಿ ಪುನಿತ್ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಸದಾ ಬದುಕಿರುತ್ತಾರೆ.ಅವರು ಶಾಶ್ವತವಾಗಿ ಅಜರಾಮರವಾಗಿದ್ದಾರೆ.ಅವರಂತೆ ನಾವು ನೀವೆಲ್ಲಾ ನಿಸ್ವಾರ್ಥ ಸೇವೆ ಸಲ್ಲಿಸೋಣ.ಕನ್ನಡ ಸಾಹಿತ್ಯಕ್ಕೆ ಸಾವಿಲ್ಲ,೮ಜ್ನಾನ ಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮದು ಎಂಬ ಹೆಮ್ಮೆಯಿದೆ ಎಂದರು.
ಕೋಡಿರಂಗಪ್ಪ ಮಾತನಾಡಿ ರಾಜ್ಯೋತ್ಸವ ಅಪ್ಪು ಹೆಸರಲ್ಲಿ ಮಾಡುತ್ತಿದ್ದಾರೆ.ಇದು ಸಂತೋಷ,ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ ವರ್ಷ ಕಾಲ ಕರ್ನಾಟಕಕ್ಕೆ ಸೂತಕ ಇತ್ತು.ಸರಳತೆ ಬಹುದೊಡ್ಡ ಮಾದರಿ.ಕನ್ನಡದ ಬೆಳವಣಿಗೆ ಪುಸ್ತಕದಲ್ಲಿ ಇಲ್ಲ,ಜನರಲ್ಲಿದೆ.ಜನಪದದಲ್ಲಿದೆ. ವಚನ, ಭಕ್ತಿಪಂಥ,ತತ್ವಪದ, ಏಕೀಕರಣ, ರಾಷ್ಟ್ರೀಯ ಹೋರಾಟ ಹೀಗೆ ಅನೇಕ ಮಜಲುಗಳಲ್ಲಿ ಭಾಷೆ ಬೆಳೆದಿದೆ. ಪಂಪ ಹೇಳಿದ್ದಾನೆ ಮಾನವ ಜಾತಿ ತಾನೊಂದೇ ವಲಂ ಎಂದು ಇದು ಅರ್ಥ ಆಗಬೇಕಿದೆ.ಹಿಂದಿನವರ ತ್ಯಾಗದ ಸ್ಮರಣೆ ಬೇಕು.ಕನ್ನಡದ ದ್ವನಿ ವಿಶ್ವ ದ್ವನಿಯಾಗಬೇಕು ಎಂದು ಹೇಳಿದರು.
ಮಾಧ್ಯಮ ಯಾವುದೇ ಇರಲಿ, ಸ್ಥಾನ ಮಾನ ಏನೇ ಇರಲಿ ಮಾತೃಭಾಷೆ ಮರೆಯದಿರೋಣ.ಮಾತೃಭಾಷೆಯಲ್ಲಿ ಜಗತ್ತನ್ನು ಅರಿಯಬೇಕು. ಪುಸ್ತಕ ಸಂಸ್ಕೃತಿ ಬೆಳೆಯಲಿ..೮,೯,೧೦ನೇ ತರಗತಿ ಪುಸ್ತಕಗಳನ್ನು ಸಮಗ್ರ ಓದುವವರಿಗೆ ಐಎಎಸ್ ಪರೀಕ್ಷೆಯಲ್ಲಿ ಬರುವ ಶೇ.೩೦ ಪ್ರಶ್ನೆಗಳಿಗೆ ಅನಾಯಾಸವಾಗಿ ಉತ್ತರಿಸಬಹುದು ಎಂದರು. ಓದು ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ.ಅಂಬೇಡ್ಕರ್ ಓದಿಗೆ ಬಹುದೊಡ್ಡ ಮಾದರಿ.ಕನ್ನಡ ಭಾಷೆ ಸಂಸ್ಕೃತಿ ಸೇವೆ ಸಲ್ಲಿಸುತ್ತಿರುವ ಕನ್ನಡ ರಕ್ಷಣಾ ಸಮಿತಿ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಉದ್ಯಮಿ ಶ್ರೀನಿವಾಸಪ್ಪ ಮಾತನಾಡಿ ಕನ್ನಡಿಗರ ಐಕ್ಯತೆಯನ್ನು ಕಾಪಾಡಲು ಕರ್ನಾಟಕ ರಕ್ಷಣಾ ಸಮಿತಿ ಮುಂದಾಗಿದೆ.ವಿದ್ಯಾರ್ಥಿಗಳು ಅಕ್ಷರದ ಮಹತ್ವ ಅರಿತು ಮುನ್ನಡೆಯಿರಿ.ಹಸಿದವರಿಗೆ ಅನ್ನ ನೀಡಿ, ಜ್ಞಾನ ಬೇಡಿ ಬಂದವರಿಗೆ ಜ್ಞಾನ ದಾಸೋಹ ನೀಡಿ.ನಮ್ಮ ಸಂಸ್ಥೆ ಯಾರಿಗೂ ಹೇಳದಂತೆ ಪ್ರಚಾರದಿಂದ ದೂರ ವಿದ್ದು ಅಶಕ್ತ ೬೦ ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಶಿಕ್ಷಣಕ್ಕೆ ನೆರವಾಗುವುದಕ್ಕೆ ಪ್ರಥಮ ಆಧ್ಯತೆ ನೀಡಿದ್ದೇನೆ.ಮಾನವ ಜೀವನ ಸಾರ್ಥಕತೆ ಕಾಣಬೇಕಾದರೆ ಒಳ್ಳೆಯ ಕೆಲಸ ಮಾಡಬೇಕಾಗಿದೆ ಎಂದರು.
ಇದನ್ನು ಓದಿದ್ದೀರಾ..?ಗಾಂಧಿನಗರ, ಗದ್ದೆಕಣ್ಣೂರು ರಸ್ತೆ ಒತ್ತುವರಿ ಕ್ರಮಕ್ಕೆ ಸ್ಥಳೀಯರ ಒತ್ತಾಯ
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ಸಮಿತಿ ಗೌರವಾಧ್ಯಕ್ಷ ಟಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷ ಗಂಗಾಧರ್, ಬೊಮ್ಮನಹಳ್ಳಿ ವೇಣು, ಜಿಲ್ಲಾ ಖಜಾಂಚಿ ಜಾಣ್ ಲಕ್ಷ್ಮಣ್, ಮಾನವ ಹಕ್ಕುಗಳ ಸಂಘದ ಟಿ.ಆರ್.ಕೃಷ್ಣಪ್ಪ, ಮತ್ತಿತರರು ಇದ್ದರು.





