ಚಿಂತಾಮಣಿ:ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ ತಾಲೂಕು ಆಡಳಿತದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಸಹಕರಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ರವರು ಕೋರಿದರು.
ಚಿಂತಾಮಣಿ ತಾಲೂಕು ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಅಂಗವಾಗಿ ಕನ್ನಡಪರ ಸಂಘಟನೆಗಳಿಗೆ ಕರೆಯಲಾಗಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದವರು ಕನ್ನಡ ರಾಜ್ಯೋತ್ಸವ ದಿನದಂದು ಬೆಳಗ್ಗೆ ಪ್ರವಾಸಿ ಮಂದಿರದಿಂದ ಭವ್ಯ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಗುವುದು ನಂತರ ಝಾನ್ಸಿ ರಾಣಿ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ,ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಗಣ್ಯರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದ ಅವರು ಎಲ್ಲಾ ಇಲಾಖೆಯ ಅಧಿಕಾರಿಗಳು ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವದರ ಮೂಲಕ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಇನ್ನು ಈ ವೇಳೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ ನಗರ ಭಾಗದ ಹಲವು ಅಂಗಡಿ ಮಳಿಗೆಗಳ ಮೇಲೆ ಕನ್ನಡವನ್ನು ಬಳಸುತ್ತಿಲ್ಲ ಹೆಚ್ಚಾಗಿ ಆಂಗ್ಲ ಭಾಷೆಯನ್ನು ಬಳಸುತ್ತಿದ್ದಾರೆ,ಕನ್ನಡ ಭಾಷೆ ಶೇಕಡ 60ರಷ್ಟು ಬಳಸದೆ ಇರುವ ಅಂಗಡಿ ಮಾಲೀಕರ ವಿರುದ್ಧ ನಗರ ಸಭೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಅಂಗಡಿ ಪರವಾನಿಗೆಯನ್ನು ರದ್ದುಗೊಳಿಸಬೇಕು ಆಗ್ರಹಿಸಿದಲ್ಲದೆ ನಗರಸಭೆಯಿಂದ ಅಂಗಡಿ ಮಾಲೀಕರು ಪರವಾನಿಗೆ ಪಡೆಯುವ ವೇಳೆ ನಗರಸಭೆ ಅಧಿಕಾರಿಗಳು ಕನ್ನಡವನ್ನು ಬಳಿಸದೇ ಇರುವ ಅಂಗಡಿಗಳಿಗೆ ಪರವಾನಿಗೆ ನೀಡಬಾರದು ಎಂದು ಹೇಳಿದಾಗ ತಾಲೂಕು ದಂಡಾಧಿಕಾರಿಗಳು ನಗರಸಭೆಗೆ ಇದರ ಬಗ್ಗೆ ಕಟ್ಟುನಿಟ್ಟಿನ ಆದೇಶ ಮಾಡುತ್ತೇನೆ ಎಂದು ಹೇಳಿದ ಅವರು ಅಂಗಡಿ ಪರವಾನಿಗೆ ಪಡೆಯುವವರು ತಮ್ಮ ಅಂಗಡಿಗಳ ಮೇಲೆ ಶೇಕಡ 60ರಷ್ಟು ಕನ್ನಡ ಭಾಷೆಯನ್ನು ಬಳಸಿ ಕನ್ನಡ ಭಾಷೆಯನ್ನು ಉಳಿಸಿ ಎಂದು ಹೇಳಿದರು.
ಅಷ್ಟೇ ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನಗರ ಭಾಗದ ಹಲವು ಶಾಲೆಗಳ ನಾಮಫಲಕಗಳ ಮೇಲೆ ಕನ್ನಡ ಭಾಷೆಯನ್ನು ಬಳಸದೆ ನಿರ್ಲಕ್ಷ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಶಿಕ್ಷಣ ಇಲಾಖೆ ಶಾಲೆ ನಾಮಫಲಕಗಳ ಮೇಲೆ ಕನ್ನಡ ಬಳಸದೇ ಇರುವ ಶಾಲೆಗಳ ಕ್ರಮ ವಹಿಸಬೇಕೆಂದು ವಿವರಿಸಿದರು.
ಇದನ್ನು ಓದಿದ್ದೀರಾ..? ಪಾಲಾರ್ ಡ್ಯಾಮ್ ಪಿಲ್ಲರ್ ಬಿರುಕು ಬಿದ್ದ ಹಿನ್ನಲೆ ಕೋಲಾರ ಜಿಲ್ಲಾಧಿಕಾರಿ ರವಿ ಭೇಟಿ ನೀಡಿ ಪರಿಶೀಲನೆ
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್ ಅಶೋಕ್ ಕುಮಾರ್,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ,ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.





