ಬಾಗೇಪಲ್ಲಿ:-ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್ಎಂಇ) ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ನೀಡುವ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ಹೊರವಲಯದ ಗಾಯತ್ರಿ ಸಭಾಂಗಣ ಗಡಿದಂ ನಲ್ಲಿ ಜಿಲ್ಲಾ ಪಂಚಾಯತಿ,ಜಿಲ್ಲಾಡಳಿತ, ಕೃಷಿ ಇಲಾಖೆ ಚಿಕ್ಕಬಳ್ಳಾಪುರ,ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ರೈತ ಉತ್ಪಾದಕ ಸಂಸ್ಥೆಗಳ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (PMFME) ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯದಲ್ಲಿ ಮಾತನಾಡಿದರು.
ಕೃಷಿ ಜೊತೆಗೆ ಆಹಾರ ಸಂಸ್ಕರಣಾ ಘಟಕ ಉದ್ದಿಮೆ ಸ್ಥಾಪಿಸಿ, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಕೃಷಿ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಗರಿಷ್ಠ ₹3 ಕೋಟಿವರೆಗೆ ಸಹಾಯಧನ ಸಿಗಲಿದೆ. ಈ ಕಾರ್ಯಕ್ರಮದಡಿ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕೇಜಿಂಗ್, ಪ್ರಯೋಗಾಲಯ ಸ್ಥಾಪನೆಯಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದರು.
ಕೇಂದ್ರದ ಪಿಎಂಎಫ್ಎಂಇ ಯೋಜನೆಯಡಿ ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಸಹಾಯಧನ (ಸಬ್ಸಿಡಿ) ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು. ಈ ಪಿಎಂಎಫ್ಎಂಇ ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಶೇ.50 ಅಥವಾ ಗರಿಷ್ಠ 15 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ಅಂದರೆ, ಕೇಂದ್ರ ಸರ್ಕಾರವು 6 ಲಕ್ಷ ರು. ಹಾಗೂ ರಾಜ್ಯ ಸರ್ಕಾರ 9 ಲಕ್ಷ ರು. (ಶೇ.15ರಷ್ಟು ಟಾಪ್ ಅಪ್ ಸಬ್ಸಿಡಿ ಸೇರಿ) ಸಹಾಯಧನ ನೀಡುತ್ತಿದೆ ಎಂದು ಹೇಳಿದರು.
ಎಸ್. ಎಸ್.ಅಬಿದ್ ಮಾನ್ಯ ಜಂಟಿ ಕೃಷಿ ನಿರ್ದೇಶಕ ಚಿಕ್ಕಬಳ್ಳಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (PMFME) ಈ ಯೋಜನೆಯಡಿಯಲ್ಲಿ ಶೇ.50 ರಷ್ಟು ಅಥವಾ ಗರಿಷ್ಠ 15 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. (ಕೇಂದ್ರ ಸರ್ಕಾರದ 6 ಲಕ್ಷ ರೂ. ಸಹಾಯಧನ ಹಾಗೂ ರಾಜ್ಯ ಸರ್ಕಾರದ 9 ಲಕ್ಷ ರೂ. ಸಹಾಯಧನ ಸೇರಿದೆ). ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್) ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಸೃಷ್ಟಿ, ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಹಾಗೂ ರಾಜ್ಯದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮಬೆಲೆ ದೊರಕಿಸಿಕೊಡುವ ಧ್ಯೇಯೋದ್ದೇಶಗಳೊಂದಿಗೆ ಕರ್ತವ್ಯ ನಿರ್ವಹಿಸುತ್ತಿದೆ.
ಈ ಸಂದರ್ಭದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕೆಪೆಕ್ ಲಿಮಿಟೆಡ್ ಬೆಂಗಳೂರು ಸಿ.ಎನ್.ಶಿವಪ್ರಕಾಶ್ ಅವರು ಮಾರಾಟದ ಮಳಿಗೆಗಳನ್ನು ಉದ್ಘಾಟಿಸಿದರು.
ಇದನ್ನು ಓದಿದ್ದೀರಾ..? ಸಿಎಂ ಗೊಂದಲ ನಿವಾರಣೆ | ಹೈಕಮಾಂಡ್ ನಿರ್ಧಾರಕ್ಕೆ ನಾವು ಎಲ್ಲರೂ ಬದ್ಧ: ಸಚಿವ ಕೆ.ಎಚ್. ಮುನಿಯಪ್ಪ
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಿ.ಮಂಜುನಾಥ್ ರೆಡ್ಡಿ, ಶ್ರೀನಿವಾಸ್, ಪೂಜಪ್ಪ,ನರೇಂದ್ರ,ನರಸಿಂಹಪ್ಪ, ಸೋಮಶೇಖರ್,ಶಿವರಾಮ ರೆಡ್ಡಿ, ರೈತರು ಮಹಿಳಾ ಸ್ವಸಹಾಯ ಗುಂಪುಗಳು, ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.





