ಬಾಗೇಪಲ್ಲಿ:- ಮಾಸಿಕ 15 ಸಾವಿರ ರೂ ವೇತನ ನಿಗದಿಗೆ ಒತ್ತಾಯಿಸಿ ಡಿಸೆಂಬರ್.1ರಿಂದ ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಡಿಸೆಂಬರ್.1ರಿಂದ ಬೆಂಗಳೂರು, ತುಮಕೂರು, ಮಂಡ್ಯ, ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ ಕೈಗೊಳ್ಳಲಾಗಿದೆ.
ಜಿಲ್ಲಾ ಉಪಾಧ್ಯಕ್ಷ ಮುಸ್ತಫಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು. ಬಜೆಟ್ನಲ್ಲಿ ಹೆಚ್ಚುವರಿ ಅನುದಾನ ನೀಡಬೇಕು. ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಬಿಸಿಯೂಟ ನೌಕರರ ವೇತನ ಹೆಚ್ಚಿಸುವುದರ ಜೊತೆಗೆ ಆರು ಗಂಟೆ ಕೆಲಸದ ಅವಧಿ ಸಂಬಂಧ ಆದೇಶ ಹೊರಡಿಸಬೇಕು. ಅಡುಗೆ ಮಾಡುವ ಸಂದರ್ಭದಲ್ಲಿ ಆಗುವ ಅವಘಡಗಳಿಗೆ ಇರುವ ಪರಿಹಾರ ಹೆಚ್ಚಿಸಿ, ಆರೋಗ್ಯ ವಿಮೆಯ ಸೌಲಭ್ಯ ನೀಡಬೇಕು. ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಬೇಕು. ಶ್ರಮಶಕ್ತಿ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಅಕ್ಷರದಾಸೋಹ ನೌಕರರ ಕಾರ್ಯದರ್ಶಿ ಅಮರಾವತಿ ಆಗ್ರಹಿಸಿದರು.
ಆನ್ಲೈನ್ನಲ್ಲಿ ದಾಖಲಾತಿ ಮಾಡುವ ಸಲುವಾಗಿ ಸ್ಮಾರ್ಟ್ ಫೋನ್ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹15 ಸಾವಿರ ವೇತನ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ಖಜಾನೆ ಖಾಲಿ ಎನ್ನುವ ಆರೋಪಕ್ಕೆ ಒಂದು ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ: ಸಿ.ಎಂ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ರಾಮಾಂಜನಮ್ಮ,ಸರಿತಾ,ಉಮಾ,ಅನಿತಾ,ಆದಿಲಕ್ಷ್ಮಮ್ಮ,ಪಾರ್ವತಮ್ಮ, ನಾಗರತ್ನಮ್ಮ,ಆಯಿಷಾ,ಶೋಭಾ ಹಾಗೂ ಇತರರು ಹಾಜರಿದ್ದರು.




