ಬಾಗೇಪಲ್ಲಿ : ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ‘ಮರು ಸಿಂಚನ’ ಕಾರ್ಯಕ್ರಮವನ್ನು ವಿಸ್ತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನೊಳಗೊಂಡ ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಗುತ್ತದೆ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಪಿ.ಎಂ.ಶ್ರೀ ಶಾಲೆ ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ ಹೇಳಿದರು.
ಪಟ್ಟಣದ ಪಿಎಂ ಶ್ರೀ ಶಾಲೆಗೆ ಮರು ಸಿಂಚನ ತಂಡದ ರಾಜ್ಯ ಮಟ್ಟದ ಅನುಷ್ಠಾನ ಅಧಿಕಾರಗಳು ಭೇಟಿ ನೀಡಿ ಅನುಷ್ಠಾನ ಹೇಗೆ ನಡೆದಿದೆ ಎಂಬುದರ ಬಗ್ಗೆ ಪರಿಶೀಲನೆಯನ್ನು ಮಾಡಿದರು. ಸಕ್ಷೇನ ಮೇಡಂ ರವರ ನೇತೃತ್ವದ ತಂಡ ರಾಜ್ಯಮಟ್ಟದ ನೋಡಲ್ ಅಧಿಕಾರಿಗಳಾದ ಪ್ರತೀಕ್ ಅವರು, ಮತ್ತು ಜಿಲ್ಲಾ ಮಟ್ಟದ ನೋಡಲು ಅಧಿಕಾರಿಗಳಾದ ಡಯಟ್ ನ ಸುರೇಶ್ ರವರು ಭೇಟಿ ನೀಡಿ ಶಾಲೆಯಲ್ಲಿ ಕಳೆದ ವರ್ಷ ಮರು ಸಿಂಚನ ಕಾರ್ಯಕ್ರಮದ ಅನುಷ್ಠಾನದಿಂದ ವಿದ್ಯಾರ್ಥಿಗಳಲ್ಲಾದ ಗಮನಾರ್ಹ ಬದಲಾವಣೆಗಳು ಯಾವುವು ಎಂಬುದರ ಬಗ್ಗೆ ಶಿಕ್ಷಕರಲ್ಲಿ ಚರ್ಚೆ ಮಾಡಿದರು.
ತದನಂತರ ಮಾತನಾಡಿ ಮರು ಸಿಂಚನ ಕಾರ್ಯಕ್ರಮವು ಉತ್ತಮವಾಗಿದ್ದು ವಿದ್ಯಾರ್ಥಿಗಳಲ್ಲಿನ ಕಲಿಕಾ ಕೊರತೆಯನ್ನು ನಿವಾರಿಸಲು ಇದು ಉತ್ತಮವಾದ ಯೋಜನೆಯಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿನ ಓದು ಬರಹ ಮೂಲಭೂತ ಕಲಿಕಾಂಶಗಳು ಮತ್ತು ಗಣಿತದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮರು ಸಿಂಚನ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿನ ಕಲಿಕಾ ಅಂತರವನ್ನು ನಿವಾರಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.
ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಅಭ್ಯಾಸ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಕನ್ನಡ, ಇಂಗ್ಲಿಷ್, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದಂತಹ ವಿಷಯಗಳಿಗೆ ಸಂಬಂಧಿಸಿದಂತೆ, ಕಲಿಕೆಯ ಮೂಲಭೂತ ಅಂಶಗಳನ್ನು ಬಲಪಡಿಸಲು ಈ ಪುಸ್ತಕಗಳು ನೆರವಾಗುತ್ತವೆ.
ಇದರ ಮೂಲಕ, ವಿದ್ಯಾರ್ಥಿಗಳು ತಮ್ಮ ತರಗತಿಗೆ ಸಂಬಂಧಿಸಿದ ಕಲಿಕಾ ಫಲಿತಾಂಶಗಳನ್ನು ಸಾಧಿಸಲು ನೆರವಾಗಲಿದೆ.
ಪ್ರಸ್ತುತ, ರಾಜ್ಯದಲ್ಲಿ 6 ರಿಂದ 10ನೇ ತರಗತಿಗಳಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಶೇಕಡಾ 40ರಷ್ಟು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ಇದರಿಂದ, ಅವರು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ವೈಯಕ್ತಿಕವಾಗಿ ಬೆಂಬಲ ನೀಡಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವು ತರಗತಿಯ ಸಾಮಾನ್ಯ ಅವಧಿಗಳ ಜೊತೆಗೆ ವಿಶೇಷ ತರಗತಿಗಳನ್ನು ಒಳಗೊಂಡಿರುತ್ತದೆ.
ಪ್ರತಿ ವರ್ಷ ಪ್ರತಿ ವಿಷಯಕ್ಕೆ ಸುಮಾರು 50 ಗಂಟೆಗಳ ಕಾಲಾವಧಿಯ ತರಗತಿಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಶ್ರೇಣಿ-ಮಟ್ಟದ ಸಾಮರ್ಥ್ಯಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ 10ನೇ ತರಗತಿ ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ವಿದ್ಯಾರ್ಥಿಗಳ ಓದು ಬರಹ ಲೆಕ್ಕ ಮಾಡುವ ಸಾಮರ್ಥ್ಯದಲ್ಲಿ ಪ್ರಗತಿಯು ಕಂಡುಬಂದಿದ್ದು ಶಾಲೆಯು ಮರು ಸಿಂಚನ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನ ಮಾಡಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ…? ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ:ಷೇರುದಾರರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಸಮರ
ಈ ಸಂದರ್ಭದಲ್ಲಿ ಬಿಇಓ ವೆಂಕಟೇಶಪ್ಪ ರವರು ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ವೆಂಕಟರಾಮ್ ಹಾಗೂ ಪಿ.ಎಂ.ಶ್ರೀ ಶಾಲೆಯ ಶಿಕ್ಷಕರು ಹಾಜರಿದ್ದರು.





