ಚಿಕ್ಕಬಳ್ಳಾಪುರ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಅಡ್ಕಸ್ಥಳ ಮೂಲದವರಾದ ಕನ್ನಡಿಗ ಮುದ್ದೇನಹಳ್ಳಿ ನಿವಾಸಿ ಖ್ಯಾತ ಕವಿ, ಶಿಕ್ಷಣ ತಜ್ಞ ಹಾಗೂ ಸಂಸ್ಕೃತಿ ಸಂರಕ್ಷಕರಾದ ಅಡ್ಕಸ್ಥಳ ಕಬೀರ್ ಅವರಿಗೆ, ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿಯ ‘ಕವಿತ್ತ ಕರ್ಮಮಣಿ ಪ್ರತಿಷ್ಠಾನ’ದ ವತಿಯಿಂದ ಪ್ರದಾನವಾಗುವ ‘ಕನ್ನಡ ಕುಲ ತಿಲಕ’ ಪುರಸ್ಕಾರ ಲಭಿಸಿದೆ.ಭಾನುವಾರ ನಡೆದ ಗೌರವ ಸಮಾರಂಭದಲ್ಲಿ ಪ್ರತಿಷ್ಠಾನ ಅಧ್ಯಕ್ಷರು ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಕನ್ನಡ ಭಾಷಾ ಸೇವೆ, ಕನ್ನಡ ನಾಡಿನ ಪರಂಪರೆಯ ಕಾಪಾಡುವಿಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಆಯೋಜಕರು ಮತ್ತು ಅಧ್ಯಕ್ಷರಾದ ಪ್ರೊ.ಎಸ್,ಎಸ್.ಪೆಂಡಾರಿ ಅವರು ತಿಳಿಸಿದರು.
ಎಂ.ಎ., ಬಿ.ಎಡ್. ಪದವಿಗಳನ್ನು ಪಡೆದಿರುವ ಅಡ್ಕಸ್ಥಳ ಕಬೀರ್ ಅವರು ದೀರ್ಘಕಾಲದಿಂದ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಜನಪ್ರಿಯರಾಗಿದ್ದಾರೆ.ಕವಿ, ಲೇಖಕ ಹಾಗೂ ಸಂಶೋಧಕರಿಗೆ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿರುವ ಅವರು ಈಗಾಗಲೇ ‘ಗುರುಕುಲ ತಿಲಕ’, ‘ವಿಶ್ವ ಜ್ಞಾನ ಶ್ರಿ’, ‘ಕನ್ನಡ ರತ್ನ’, ‘ಸಿರಿಗನ್ನಡ ತಾಯ್ನುಡಿ ಸೇವಾ ರತ್ನ’, ‘ರಾಜ್ಯೋತ್ಸವ ಪ್ರಶಸ್ತಿ (ಬೆಳಗಾವಿ)’ ಸರ್ವ ಧರ್ಮ ಸಂಸ್ಕೃತಿ ಸಮನ್ವಯ ರತ್ನ (ಉಡುಪಿ) ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ:ಜೋಳ ಖರೀದಿ ಕೇಂದ್ರ ತೆರೆಯಿರಿ
ಪುರಸ್ಕಾರಕ್ಕೆ ಪ್ರತಿಕ್ರಿಯೆ ನೀಡಿದ ಅಡ್ಕಸ್ಥಳ ಕಬೀರ್, “ಕನ್ನಡ ಭಾಷೆ ಮತ್ತು ಮನುಕುಲ ಸೇವೆಗೆ ನೀಡಿದ ಚಿಕ್ಕ ಪ್ರಯತ್ನಕ್ಕೆ ದೊರೆತ ದೊಡ್ಡ ಗೌರವ. ಇದು ಮತ್ತಷ್ಟು ಸೇವೆ ಸಲ್ಲಿಸುವ ಹೊಣೆಗಾರಿಕೆಯನ್ನು ನೀಡಿದೆ” ಎಂದು ಹೇಳಿದ್ದಾರೆ. ಸ್ಥಳೀಯ ಅಭಿಮಾನಿ ಬಳಗ ಮತ್ತು ವಿದ್ಯಾರ್ಥಿ ವೃಂದ ಆತ್ಮೀಯವಾಗಿ ಅಭಿನಂದಿಸಿದೆ.





