ಕಾರವಾರ: ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದಲ್ಲಿರುವ ಐಎನ್ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ಗುರುವಾರ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿ ನೌಕಾಪಡೆಯ ಶೌರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಡಿಸೆಂಬರ್ 4ರಂದು ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆಯು ನಡೆಸಿದ್ದ ಯಶಸ್ವಿ ದಾಳಿಯ ಸ್ಮರಣಾರ್ಥವಾಗಿ ಪ್ರತಿವರ್ಷ ಡಿ.4 ರಂದು ನೌಕಾ ದಿನವನ್ನು ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನೌಕಾಪಡೆಯ ವಾದ್ಯಬಳಗವು ದೇಶಭಕ್ತಿ ಗೀತೆಗಳನ್ನು ನುಡಿಸುವ ಮೂಲಕ ವಾತಾವರಣವನ್ನು ದೇಶಪ್ರೇಮದಿಂದ ತುಂಬುವಂತೆ ಮಾಡಿದರು.
ಬಳಿಕ ಬ್ಯಾಂಡ್ ಸಿಬ್ಬಂದಿ ‘ಬೀಟಿಂಗ್ ರಿಟ್ರೀಟ್’ ಪ್ರದರ್ಶಿಸಿ, ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ನೌಕಾಪಡೆಯ ಧ್ವಜದ ಅವರೋಹಣ ವಿಧಿಯನ್ನು ಗೌರವಪೂರ್ವಕವಾಗಿ ನೆರವೇರಿಸಲಾಯಿತು. ಸಂಭ್ರಮಾಚರಣೆಯ ಭಾಗವಾಗಿ, ನೌಕಾಪಡೆಯ ನೌಕೆಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ದೀಪಾಲಂಕೃತ ನೌಕೆಗಳಿಂದ ಬಾನಂಗಳದಲ್ಲಿ ಸಿಡಿಮದ್ದುಗಳನ್ನು ಸಿಡಿಸಲಾಯಿತು.
ನೌಕಾಪಡೆಯ ಸಿಬ್ಬಂದಿ, ನೌಕಾ ಅಗ್ನಿವೀರರು ಹಾಗೂ ನೌಕಾನೆಲೆ ಶಾಲೆಯ ವಿದ್ಯಾರ್ಥಿಗಳು ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಯಿತು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸರ್ಕಾರಿ ಕಚೇರಿಯಲ್ಲಿ ದಲಿತ ಮಹಿಳಾ ಸಿಬ್ಬಂದಿಗೆ ಜಾತಿ ನಿಂದನೆ; ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ಕರ್ನಾಟಕ ನೌಕಾನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಂಟ್ ಆಫೀಸರ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ, ಜಿ.ಪಂ. ಸಿಇಓ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸೇರಿದಂತೆ ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಹಾಜರಿದ್ದರು.





