ಕೋಲಾರ: ಗ್ರಾಮೀಣ ಪ್ರದೇಶದ ಜನರ ಏಳಿಗೆಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿ ಮಾಡಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ನಾಶ ಮಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಅಭಿಷೇಕ ದತ್ತ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದ ಅವರು ಮನರೇಗಾ ಎಂಬ ಹೆಸರು ಬದಲಾಯಿಸಿ ಜಿ ರಾಮ್ ಜಿ ತಂದಿದ್ದಾರೆ. ಯೋಜನೆಯ ಹಣ ಕಡಿಮೆ ಮಾಡಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಈ ಅಂಶಗಳನ್ನು ಜನರಿಗೆ ಮುಟ್ಟಿಸಬೇಕು. ಪ್ರತಿ ಹಳ್ಳಿಗೆ ಹೋಗಿ ಬಿಜೆಪಿಯ ಜನ ವಿರೋಧಿ ನೀತಿಗಳ ಬಗ್ಗೆ ಹೇಳಬೇಕು ಎಂದರು.
ಕಿಸಾನ್ ಕಾಂಗ್ರೆಸ್ ನಿಂದ ಹೋರಾಟ ಹಮ್ಮಿಕೊಳ್ಳಬೇಕು ಆಂದೋಲನ ರೂಪಿಸಬೇಕು ಸಭೆ ನಡೆಸಿ ಏನೆಲ್ಲಾ ಸಮಸ್ಯೆ ಇದೆ ಎಂಬುದನ್ನು ಹೇಳಬೇಕು. ವಿಧಾನಸಭೆವಾರು, ತಾಲ್ಲೂಕುವಾರು ಸಭೆ ನಡೆಸಬೇಕು ಕಿಸಾನ್ ಕಾಂಗ್ರೆಸ್ ನಿಂದ ಏನೇನು ಕಾರ್ಯಕ್ರಮ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಸಕ್ರಿಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆ ನಡುವೆ ಬಣಗಳ ವಾಗ್ವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ ಈ ಸಂಬಂಧ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಗಳ ಜೋರಾಗುತ್ತಿದ್ದಂತೆ ಸಭೆ ಮುಕ್ತಾಯಗೊಳಿಸಿದರು ಅವರ ಜೊತೆ ಕಿಸಾನ್ ಕಾಂಗ್ರೆಸ್ ಘಟಕದ ರಾಜ್ಯ ಅಧ್ಯಕ್ಷ ಸಚಿನ್ ಮಿಗಾ ಪಾಲ್ಗೊಂಡಿದ್ದರು.
ಬಣಗಳ ನಡುವೆ ವಾಗ್ವಾದ
ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಸೀತಿಹೊಸೂರು ಮುರಳಿಗೌಡ ನೇಮಕ ಸಂಬಂಧ ಎರಡು ಬಣಗಳ ನಡುವೆ ವಾಗ್ವಾದ ನಡೆಯಿತು.
ಶಾಸಕರ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಅಡ್ಡಿಪಡಿಸಿದವರನ್ನು ಕಿಸಾನ್ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ನಾವೂ ಕಾಂಗ್ರೆಸ್ ಗೆ ದುಡಿದಿದ್ದೇವೆ. ತಪ್ಪು ಮಾಡಿದಾಗ ಪ್ರಶ್ನೆ ಮಾಡಬಾರದೇ? ಹೊರಗೆ ಹೋಗಿ ಎಂದರೆ ಹೋಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಕ್ಕೆ 30 ವರ್ಷಗಳಿಂದ ದುಡಿದವರನ್ನು ದೂರವಿಡಲಾಗುತ್ತಿದೆ ಎಂದು ಕೆ.ಎಚ್. ಮುನಿಯಪ್ಪ ಬೆಂಬಲಿಗರು ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ..? ಪುಷ್ಪ ಶೈಲಿಯಲ್ಲಿ ಶ್ರೀಗಂಧ ಮರಗಳನ್ನು ಕದ್ದಿದ್ದ 8 ಜನರು ಅರೆಸ್ಟ್
ಸಭೆಯಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸೀತಿಹೊಸೂರು ಮುರಳಿ, ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ, ಮುಖಂಡರಾದ ಖಾದ್ರಿಪುರ ಬಾಬು, ಕಿಸಾನ್ ಕಾಂಗ್ರೆಸ್ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.





