ಬಾಗೇಪಲ್ಲಿ: ಹೋಬಳಿ , ತಾಲ್ಲೂಕು ಮಟ್ಟದಲ್ಲಿ ರಸ್ತೆ ಸುರಕ್ಷತಾ ಮಾಸ ಅರಿವು ಕಾರ್ಯಕ್ರಮವನ್ನು ಜ.30 ರವರೆಗೆ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶ ಮಂಜುನಾಥ ಚಾರಿ ತಿಳಿಸಿದರು.
ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಆಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಜೆ.ಎಂ.ಎಫ್. ಸಿ ನ್ಯಾಯಾಲಯದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ‘ರಸ್ತೆ ಸುರಕ್ಷತಾ ಮಾಸಾಚರಣೆ ಜಾಥಾ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದ ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗುತ್ತಿದೆ. ರಸ್ತೆ ಅಪಘಾತಗಳನ್ನು ತಡೆಯಲು ಸಂಚಾರ ನಿಯಮಗಳನ್ನು ಪಾಲಿಸುವ ಜೊತೆಗೆ ಜಾಗರೂಕತೆಯ ವಾಹನ ಚಾಲನೆ ಅತ್ಯಗತ್ಯ. ಅದರಲ್ಲೂ ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಅಪಘಾತಗಳಲ್ಲಿನ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ರೀತಿಯ ಸಾವುಗಳಲ್ಲಿ ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆಯೂ ಪ್ರಮುಖ ಕಾರಣವಾಗಿದೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಪ್ಪಿಸಬಹುದು ಎಂದು ಹೇಳಿದರು.
ಕೆಲವು ವಾಹನ ಸವಾರರ ಅಜಾಗರೂಕತೆ ಮತ್ತು ಬೇಜವಾಬ್ದಾರಿ ಚಾಲನೆಯ ಕಾರಣದಿಂದ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಯಾರದ್ದೋ ನಿರ್ಲಕ್ಷ್ಯ ಮತ್ತು ತಪ್ಪಿಗೆ ಮತ್ತಾರೋ ಬಲಿ ಆಗುವ ಹಾಗೂ ಅವರ ಕುಟುಂಬಗಳು ವಿನಾಕಾರಣ ಬೀದಿಗೆ ಬರುವಂತಾಗುತ್ತಿದೆ ಎಂದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸಂಚಾರ ನಿಯಮ, ಅಪಘಾತಗಳ ಸಾವು ನೋವುಗಳು ಹಾಗೂ ಸುರಕ್ಷಿತ ಮತ್ತು ಜವಾಬ್ದಾರಿಯುತ ವಾಹನ ಚಾಲನೆ ಮಾಡುವ ಬಗ್ಗೆ ಒಂದು ತಿಂಗಳ ಕಾಲ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಮಕ್ಕಳಿಗೆ ಪೋಷಕರ ಆಶೀರ್ವಾದ ಮುಖ್ಯ: ಡಿಐಜಿಪಿ ಡಿ.ದೇವರಾಜ್
ಈ ಸಂದರ್ಭದಲ್ಲಿ ವಕೀಲರು ಸಂಘದ ಅದ್ಯಕ್ಷ ಮಂಜುನಾಥ ಆರಕ್ಷಕ ವೃತ್ತ ನಿರೀಕ್ಷಕ ಸುನಿಲ್ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ, ವಕೀಲರಾದ ಬಾಲು ನಾಯಕ್,ನಾಗಭೂಷಣ ,ಸಿಬ್ಬಂದಿಗಳಾದ ಗಂಗುಲಪ್ಪ ಹಾಗೂ ಪೋಲೀಸರು ಹಾಗೂ ಸಾರ್ವಜನಿಕರು ಹಾಜರಿದ್ದರು.





