- ಊರು ಅಂದರೆ ಹೊಲಗೇರಿ ಇರುತ್ತೆ ಎಂದು ಹೇಳಿಕೆ ನೀಡಿದ ನಟ ಉಪೇಂದ್ರ
- ಜಾತಿನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ಒತ್ತಾಯ
ಕನ್ನಡದ ಚಿತ್ರನಟ ಉಪೇಂದ್ರ ಅವರು ಊರು ಅಂದರೆ ಹೊಲಗೇರಿ ಇರುತ್ತೆ ಎಂದು ಹೇಳಿಕೆ ನೀಡುವ ಮೂಲಕ ಜಾತಿ ನಿಂದನೆ ಮಾಡಿದ್ದಾರೆ. ಕೂಡಲೇ ಇವರ ಮೇಲೆ ಅಟ್ರಾಸಿಟಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಆಗ್ರಹಿಸಿದೆ.
ಈ ಕುರಿತು ಭಿಮ್ ಆರ್ಮಿ ಏಕತಾ ಮಿಷನ್ ಶಹಾಪೂರ ತಾಲೂಕು ಶಾಖೆಯ ಕಾರ್ಯಕರ್ತರು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಬರೆದ ಮನವಿ ಪತ್ರವನ್ನು ಶಹಾಪುರ ತಹಸೀಲ್ದಾರರಿಗೆ ಸಲ್ಲಿಸಿದರು.
ಕನ್ನಡ ಚಿತ್ರನಟ ಉಪೇಂದ್ರ ಅವರು ಈ ಹಿಂದೊಮ್ಮೆ ʼಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರʼ ಎನ್ನುವ ಸಾಲುಗಳು ಯಾರೋ ಕವಿ ಹೇಳಿರಬಹುದು, ಡಾ.ಬಿ. ಆರ್ ಅಂಬೇಡ್ಕರ್ ರವರು ಹೇಳಿರುವುದು ನನಗೆ ತಿಳಿದಿಲ್ಲ ಎಂದು ಉಡಾಫೆಯಾಗಿ ಮಾತನಾಡಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದ್ದರು. ಇದೀಗ ʼಊರು ಅಂದ ಮೇಲೆ ಹೊಲಗೇರಿ ಇದ್ದೆ ಇರುತ್ತದೆʼ ಎಂದು ಮತ್ತೊಮ್ಮೆ ಜಾತಿ ನಿಂದನೆ ಹೇಳಿಕೆ ನೀಡುವ ಮುಖಾಂತರ ತಾನೊಬ್ಬ ಮನುವಾದಿ, ಜಾತಿವಾದಿ ಎಂಬುದು ಸಾಬೀತು ಮಾಡಿದ್ದಾರೆ. ಕೂಡಲೇ ನಟ ಉಪೇಂದ್ರ ವಿರುದ್ಧ ಎಸ್.ಟಿ. ಕಾಯ್ದೆಯಡಿ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಭೀಮ್ ಆರ್ಮಿಯ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು ಶರಣ್ ಎಸ್ ಗೊಂದನವರ್, ವಿಧ್ಯಾರ್ಥಿ ಘಟಕ ಅಧ್ಯಕ್ಷ ಮಂಜು ದೊರನಹಳ್ಳಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರಾದ ಮೌಲಾಲಿ, ತವಕಲಪ್ಪ ಅಣಬಿ, ಮಾರುತಿ ದೊರನಹಳ್ಳಿ, ಬಾಬುಸಾಬ ಶಿರವಾಳ, ರಾಜು ಹೋಟಪೇತ ಇದ್ದರು.





