ಕೋಲಾರ: ನಗರದ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿ (ಹಾರೋಹಳ್ಳಿ ಗಾರ್ಡನ್) ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಕೆರೆ ಹಾಗೂ ಕೆಸರು ಗದ್ದೆಯಂತಾಗಿದೆ.
ಸುತ್ತಮುತ್ತ ನಿವಾಸಿಗಳು ಕಳೆದ ಆರು ತಿಂಗಳಿಂದ ನರಕಯಾತನೆ ಅನುಭವಿಸುತ್ತಿದ್ದು, ಈವರೆಗೆ ಸಮಸ್ಯೆ ಆಲಿಸಿಲ್ಲ. ರಸ್ತೆ ಹಾಗೂ ಮೋರಿ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳು, ಮಹಿಳೆಯರು, ವಯಸ್ಕರು ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲದಂತಾಗಿದೆ. ಶಾಲಾ ಮಕ್ಕಳು ಹಲವಾರು ಬಾರಿ ಬಿದ್ದಿದ್ದಾರೆ. ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಮಳೆ ಬಂದರೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹರಿಹಾಯ್ದರು.
ರಸ್ತೆ ಪಕ್ಕದಲ್ಲಿರುವ ಮೋರಿಯಲ್ಲಿ ಕೊಳಚೆ ನೀರು ತುಂಬಿದ್ದು, ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಕೊಳಚೆ ನೀರಿನ ಜೊತೆ ತ್ಯಾಜ್ಯವೂ ತುಂಬಿಕೊಂಡಿದೆ. ಹೀಗಾಗಿ, ನೀರು ಉಕ್ಕಿ ರಸ್ತೆಗೆ ಹರಿಯುತ್ತಿದೆ.
ವಿಪರೀತ ವಾಸನೆ ಬರುತ್ತಿದೆ. ಮನೆಯಲ್ಲಿ ಊಟ, ತಿಂಡಿ ಮಾಡಲು ಸಾಧ್ಯವಾಗುತ್ತಿಲ್ಲ. ಕೊಳಚೆ ನೀರು ಬಹಳ ದಿನಗಳಿಂದ ಒಂದೇ ಕಡೆ ನಿಂತಿರುವುದರಿಂದ ಸೊಳ್ಳೆ ಕಾಟ ಹೆಚ್ಚಿದ್ದು, ರೋಗಗಳು ಬರುವ ಆತಂಕ ಉಂಟಾಗಿದೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಅಕ್ಕಪಕ್ಕದ ಜಮೀನಿಗೂ ಮೋರಿ ನೀರು ನುಗ್ಗಿತ್ತು. ಮಳೆ ನೀರು ಹಾಗೂ ಮೋರಿ ನೀರು ಹೋಗಲು ಜಾಗವಿಲ್ಲದೇ ಇರುವುದು ಇದಕ್ಕೆ ಕಾರಣ ಎಂದರು.
ಈ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಪುಷ್ಪಾ ಬಾಬು ಮಾತನಾಡಿ, ಕೆಲ ತಿಂಗಳ ಹಿಂದೆ ಶಾಸಕರು ಬಂದು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಹೋಗಿದ್ದರು. ನಮ್ಮ ಬಡಾವಣೆಯ ಚರಂಡಿ ವ್ಯವಸ್ಥೆ ಸರಿಹೋಗುತ್ತದೆ ಎಂದು ಖುಷಿಯಾಗಿತ್ತು. ಆದರೆ, ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಎಲ್ಲಾ ಮನೆಯವರಿಗೆ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದರು.
ಮನೆ ಮುಂದಿನ ಟ್ಯಾಂಕ್ಗಳಿಗೂ (ಸಂಪ್) ನೀರು ನುಗ್ಗಿ ವಾಸನೆ ಬರುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸಿಇಒ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಮುಖ್ಯ ಶಿಕ್ಷಕಿ ಗೀತಾಗೆ ರಾಜ್ಯ ಮಟ್ಟದ ”ಅಪರ್ಣ ನಿರೂಪಣ ರತ್ನ” ಪ್ರಶಸ್ತಿ: ಅಭಿನಂದನೆ
ಈ ಸಂದರ್ಭದಲ್ಲಿ ಸ್ಥಳೀಯರಾದ ಆನಂದ್, ಉಮಾ, ರುಕ್ಮಿಣಿ, ಋತುಶ್ರೀ, ಕಾವ್ಯ, ಮರಿಯಪ್ಪ, ರಘು, ವಿಕಾಸ್ ಜಯರಾಮ್ ಮುಂತಾದವರು ಇದ್ದರು





