ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆಗಳ ಮುಖಂಡರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎಂ.ಜಿ. ರಸ್ತೆಯ ಅವರೆಕಾಯಿ ಮಾರುಕಟ್ಟೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಅವರ ಇತ್ತೀಚಿನ ನಡೆಗೆ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೈಚೇಗೌಡ, “ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವ್ಯಾಪಾರದಿಂದ ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್‌ಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರವನ್ನು ಎಪಿಎಂಸಿ ಮಾರುಕಟ್ಟೆಗೆ ವರ್ಗಾಯಿಸುವಂತೆ ನಾವು ಪ್ರತಿಭಟನೆ ನಡೆಸಿದ್ದೆವು. ಆದರೆ ರಮೇಶ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಬಡವರ ಪರ ಎನ್ನುವ ನಾಟಕವಾಡುತ್ತಿದ್ದಾರೆ,” ಎಂದು ಕಿಡಿಕಾರಿದರು.
“ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳನ್ನು ಜೆಸಿಬಿ ಮೂಲಕ ನಾಶ ಮಾಡಿದಾಗ ಅಥವಾ ಮಾವಿನ ಬೆಳೆ ಬೆಲೆ ಕಳೆದುಕೊಂಡು ರೈತರು ಬೀದಿಗೆ ಬಿದ್ದಾಗ ನಿಮ್ಮ ಬಡವರ ಪರ ಕಾಳಜಿ ಎಲ್ಲಿ ಹೋಗಿತ್ತು? ನಾವು ಹೋರಾಟ ಮಾಡಿ ಶ್ರೀನಿವಾಸಪುರ ಬಂದ್ ಮಾಡಿ ಸರ್ಕಾರದಿಂದ ಬೆಂಬಲ ಬೆಲೆ ಕೊಡಿಸಿದ್ದೇವೆ. 30-40 ವರ್ಷಗಳಿಂದ ರಸ್ತೆಯಲ್ಲೇ ವ್ಯಾಪಾರ ನಡೆಯುತ್ತಿದೆ ಎಂದರೆ ಪಟ್ಟಣದ ಅಭಿವೃದ್ಧಿ ಬೇಡವೇ?” ಎಂದು ಅವರು ಪ್ರಶ್ನಿಸಿದರು. ಕನ್ನಡಪರ ಸಂಘಟನೆಯ ಮುಖಂಡ ಆಟೋ ಜಗದೀಶ್ ಮಾತನಾಡಿ, ಹೋರಾಟಗಾರರ ವಿರುದ್ಧ ಅವಾಚ್ಯ ಶಬ್ದ ಬಳಸಿದ ಬಿ ಎಂ ಪ್ರಕಾಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಪುರಸಭೆ ಅಧ್ಯಕ್ಷರಾಗಿದ್ದಾಗ ಐದು ಲಕ್ಷ ರೂಪಾಯಿಗಳನ್ನು ಪುರಸಭೆ ಖಾತೆಗೆ ಜಮಾ ಮಾಡುವುದು ಬಿಟ್ಟು ವೈಯಕ್ತಿಕ ಖಾತೆಗೆ ಹಾಕಿಕೊಂಡು ಭ್ರಷ್ಟಾಚಾರದ ಆರೋಪ ಎದುರಿಸಿದವರು ಇಂದು ಹೋರಾಟಗಾರರ ಮೇಲೆ ಆರೋಪ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ..? ಅವರೆಕಾಯಿ ವ್ಯಾಪಾರ ಸ್ಥಳಾಂತರ ವಿವಾದ; ವ್ಯಾಪಾರಿಗಳ ಪರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬ್ಯಾಟಿಂಗ್
ದಲ್ಲಾಳಿಗಳ ಪರ ವಕಾಲತ್ತು ವಹಿಸುವುದನ್ನು ಬಿಟ್ಟು, ಕಡಿಮೆ ಬೆಲೆಗೆ ರೈತರಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಮಾರುವ ದಲ್ಲಾಳಿಗಳ ಹಾವಳಿ ತಡೆಯಿರಿ,” ಎಂದು ಸವಾಲು ಹಾಕಿದರು. ನಾಡು, ನುಡಿ ಹಾಗೂ ರೈತರ ಪರವಾಗಿ ಹೋರಾಡುವವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಕನ್ನಡಪರ ಸಂಘಟನೆಯ ಮುಖಂಡ ಸುಬ್ರಮಣಿ ಮಾತನಾಡಿ ಹೋರಾಟಗಾರರ ವಿರುದ್ಧ ಆವಾಚ್ಯ ಶಬ್ದಗಳ ನಿಂದನೆ ಮಾಡಿರುವರ ಮೇಲೆ ಪ್ರಕರಣ ದಾಖಲಾಗಿದೆ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವ್ಯಾಪಾರದಿಂದ ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್‌ಗೆ ತೀವ್ರ ತೊಂದರೆಯಾಗುತ್ತಿದೆ
Date:
ಪೋಸ್ಟ್ ಹಂಚಿಕೊಳ್ಳಿ:




