ವಾಜಿಪೇಯಿ ನಗರ ನಿವೇಶನ ಯೋಜನೆಯಲ್ಲಿ ಸರ್ವೆ ನಂ:581, 929/2 ಮತ್ತು 726/727 ರ ಭೂಮಿಯನ್ನು ಅಭಿವೃದ್ಧಿಪಡಿಸದೆ, ನಿವೇಶನ ಹಂಚಿಕೆ ಮಾಡದೇ 10 ವರ್ಷಗಳಿಂದ ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಫಲಾನುಭವಿಗಳು ನಗರದ ಜಿಲ್ಲಾಡಳಿತ ಭವನದ ಎದುರು ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವಿಧ ಸ್ಲಂಗಳಲ್ಲಿ ಬಾಡಿಗೆ ಮನೆಗಳಲ್ಲಿ, ಬೀದಿಬದಿ ಟೆಂಟ್ಗಳಲ್ಲಿ ವಾಸಿಸುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಅಲೆಮಾರಿ ಮತ್ತು ಬಡ ಕೂಲಿ ಕಾರ್ಮಿಕರ ಹಿತಾರ್ಥಕ್ಕಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ 10 ವರ್ಷಗಳ ಹಿಂದೆ ವಾಜಿಪೇಯಿ ಯೋಜನೆಯಲ್ಲಿ ಭೂಮಿ ಮಂಜೂರಿ ಮಾಡಿ ನಿವೇಶನ ಹಕ್ಕುಪತ್ರಗಳನ್ನು ನೀಡಿದ್ದರೂ, ಇಂದಿಗೂ ಯೋಜನೆ ಜಾರಿಗೆ ಬಂದಿಲ್ಲ. ನಿವೇಶನ ಪಡೆಯದೆ ಹಲವಾರು ಫಲಾನುಭವಿಗಳು ತೀರಿಕೊಂಡಿರುವುದನ್ನು ಕುಟುಂಬಸ್ಥರು ಕಳವಳದಿಂದ ಆಗ್ರಹಿಸಿದರು.
ಇದಕ್ಕೂ ಮೊದಲು ಹಲವಾರು ಬಾರಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿ, ಸಭೆಗಳಲ್ಲಿ ಭಾಗವಹಿಸಿದರೂ ಯಾವುದೇ ಪರಿಹಾರ ದೊರೆತಿಲ್ಲ. ಫಲಾನುಭವಿಗಳು ಒಂದು ತಿಂಗಳೊಳಗೆ ವಾಜಿಪೇಯಿ ನಿವೇಶನ ಯೋಜನೆಯಲ್ಲಿ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಿ ನಿವೇಶನ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಕಾರ್ಯದರ್ಶಿ ನೂರ್ಜಾನ್, ಸಂಘಟನಾ ಕಾರ್ಯದರ್ಶಿ ಬಸವರಾಜ್, ಖಜಾಂಚಿ ರಾಜಶೇಖರ, ಮುಖಂಡರಾದ ಜಿ.ರಾಜು, ಎಸ್.,ನಾಗರಾಜ, ಪವನ್, ಅನೀಲ್ಕುಮಾರ ಸೇರಿದಂತೆ ಅನೇಕರಿದ್ದರು.





