ಚಿಕ್ಕಬಳ್ಳಾಪುರ: ವಕೀಲರ ವೃತ್ತಿ ಒಂದು ಉದ್ಯೋಗ ಮಾತ್ರವಲ್ಲ ಇದು ಸಾರ್ವಜನಿಕ ಕರ್ತವ್ಯ,ಸಂವಿಧಾನಿಕ ಹೊಣೆ ಮತ್ತು ನೈತಿಕ ಸೇವೆಯಾಗಿದೆ ವಕೀಲಿಕೆ ವಾದ ಮಾಡುವ ಕಲೆಯಷ್ಟೇ ಅಲ್ಲ ಅದು ಸಿದ್ಧತೆಯ ವಿಜ್ಞಾನ,ನ್ಯಾಯಕ್ಕಾಗಿ ಧೈರ್ಯದಿಂದ ನಿಲ್ಲುವ ಶಕ್ತಿ,ಹಾಗೂ ನಮ್ಮ ಜ್ಞಾನಕ್ಕಿರುವ ಮಿತಿಗಳನ್ನು ಅರಿಯುವ ವಿನಯ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಮಲಿಂಗೇಗೌಡ ತಿಳಿಸಿದರು.
ಅವರು ಬುಧವಾರ ನಗರದ ವಕೀಲ ಸಂಘದ ವತಿಯಿಂದ ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ದೇಶದ ನವಶಿಲ್ಪದವರೆಗೆ,ವಕೀಲರು ಮಹತ್ವದ ಪರಿವರ್ತನಾ ಪಾತ್ರ ವಹಿಸಿದ್ದಾರೆ.ಮಹಾತ್ಮ ಗಾಂಧಿ,ಡಾ.ಬಿ.ಆರ್. ಅಂಬೇಡ್ಕರ್, ಜವಾಹರ್ ಲಾಲ್ ನೆಹರು,ಸರ್ದಾರ್ ಪಟೇಲ್ ಮೊದಲಾದ ಮಹನೀಯರು ವಕೀಲಿಕೆಯನ್ನು ಕೇವಲ ವೃತ್ತಿಯಾಗಿರದೆ,ಸಮಾಜ ಪರಿವರ್ತನೆಯ ಶಕ್ತಿಯಾಗಿ ಬಳಸಿದರು ಎಂದರು.
ವಕೀಲರಾದವರ ಮೇಲೆ ಹಲವಾರು ಜವಾಬ್ದಾರಿಗಳಿವೆ ವಕೀಲರು ಭಯವಿಲ್ಲದೆ ಹೋರಾಡಬೇಕು, ಪಕ್ಷಪಾತವಿಲ್ಲದೆ ವಾದಿಸಬೇಕು,ಅಚ್ಚುಕಟ್ಟಾದ ನೈತಿಕತೆ ಕಾಪಾಡಬೇಕು ಮತ್ತು ಸಂವಿಧಾನವನ್ನು ಅತಿ ಮೇಲಿನ ಸ್ಥಾನದಲ್ಲಿ ಇರಿಸಬೇಕು.ಪ್ರತಿಯೊಂದು ಕೇಸ್ ಒಂದು ಕೆಲಸವಷ್ಟೇ ಅಲ್ಲ ಸಮಾಜ ನೀಡಿದ ನಂಬಿಕೆಯಾಗಿದೆ. ನಾವು ಮಾಡುವ ಪ್ರತಿಯೊಂದು ವಾದ ನ್ಯಾಯದ ನಿರ್ಮಾಣಕ್ಕೆ,ಪೂರ್ವನಿದರ್ಶನಕ್ಕೆ ಮತ್ತು ನ್ಯಾಯಾಂಗದ ಮೇಲಿನ ಜನರ ನಂಬಿಕೆಗೆ ಕೊಡುಗೆ ನೀಡುತ್ತದೆ ಎಂದರು.
ಇಂದಿನ ತ್ವರಿತವಾಗಿ ಬದಲಾಗುತ್ತಿರುವ ಕಾನೂನು ಪರಿಸರದಲ್ಲಿ ತಂತ್ರಜ್ಞಾನ ಪರಿವರ್ತನೆ,ಸಾರ್ವಜನಿಕ ನಿರೀಕ್ಷೆಗಳ ಏರಿಕೆ,ಸಾಮಾಜಿಕ,ಆರ್ಥಿಕ ಸವಾಲುಗಳು ವಕೀಲರ ಹೊಣೆಗಾರಿಕೆಯೂ ಹೆಚ್ಚುತ್ತಿದೆ.ನ್ಯಾಯಾಲಯ ಮಾತ್ರ ನ್ಯಾಯ ರಚನೆಯ ವೇದಿಕೆ ಅಲ್ಲ ನಮ್ಮ ನಡತೆ, ನಮ್ಮ ನೈತಿಕತೆ,ಸತ್ಯದ ಮೇಲಿನ ನಂಬಿಕೆ ಮತ್ತು ಸಮಾಜದ ಮೇಲಿನ ಬದ್ಧತೆ ಸದಾ ಸಾರ್ವಜನಿಕ ದೃಷ್ಟಿಯಲ್ಲಿ ಇರುತ್ತದೆ ಇಂತಹ ದೂಡ್ಡ ಮಹನೀಯ ವೃತ್ತಿಯನ್ನು ಹೆಮ್ಮೆಯಿಂದ,ಜವಾಬ್ದಾರಿಯಿಂದ ಹಾಗೂ ಉತ್ಸಾಹದಿಂದ ಮುಂದುವರಿಸಬೇಕಾಗಿದೆ. ಸಮಸ್ಯೆ ಪರಿಹರಿಸುವವರಾಗಿ, ಶಾಂತಿ ನಿರ್ಮಾಣಕಾರರಾಗಿ, ಹಕ್ಕುಗಳ ರಕ್ಷಕರಾಗಿ ಮುಂದುವರಿಯಬೇಕಾಗಿದೆ ಸಂವಿಧಾನಿಕ ನೈತಿಕತೆ, ಮಾನವ ಗೌರವ, ಸಮಾನತೆಯ ದೀಪವನ್ನು ನಮ್ಮಿಂದಲೂ ಹೊತ್ತೊಯ್ಯೋಣ ಎಂದರು.
5ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಅನೇಕರು ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಬರುವ ಶಕ್ತಿ, ಸಾಮರ್ಥ್ಯ ಇಲ್ಲದೆ ಸಮಾಜದಲ್ಲಿ ಬದುಕುತ್ತಿದ್ದಾರೆ.ಅಂತಹವರ ನೆರವಿಗೆ ಮಾನವೀಯತೆಯನ್ನು ಆಧಾರವಾಗಿಸಿಕೊಂಡು ಮುಂದೆ ಬರಬೇಕಿದೆ.ವಕೀಲಿಕೆ ಎಂಬುದು ಕೇವಲ ವೃತ್ತಿ ಮಾತ್ರವಲ್ಲ;ಸಾರ್ವಜನಿಕ ಕ್ಷೇತ್ರದಲ್ಲಿ ನಮ್ಮ ಕರ್ತವ್ಯವೂ ಆಗಿದೆ.ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಆದ್ದರಿಂದ ಅವರಿಗೆ ನ್ಯಾಯ ಒದಗಿಸುವುದು ವಕೀಲರ ಜವಾಬ್ದಾರಿಯೂ ಕರ್ತವ್ಯವೂ ಆಗಿದೆ.ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿ ಉಳಿಸುವ ಕೆಲಸವೂ ನಮ್ಮ ಮೇಲಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಅವರು ಅಧ್ಯಕ್ಷತೆ ಭಾಷಣದಲ್ಲಿಮಾತನಾಡಿ,ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘದ ಅಭಿವೃದ್ಧಿಗಾಗಿ ಕೈಗೊಂಡ ವಿವಿಧ ಕ್ರಮಗಳು,ಕಾರ್ಯಕ್ರಮಗಳು ಹಾಗೂ ವಕೀಲರ ಕಲ್ಯಾಣಕ್ಕಾಗಿ ನಡೆಸಿದ ಚಟುವಟಿಕೆಗಳ ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಹಾಗೂ ಅನುಭವಿ ವಕೀಲರು ಯುವ ಪ್ರಾಕ್ಟೀಸಿಂಗ್ ವಕೀಲರಿಗೆ ನೀಡಿದ ಅಮೂಲ್ಯ ಮಾರ್ಗದರ್ಶನ,ಅನುಭವ ಮಾತುಗಳು ಮತ್ತು ವೃತ್ತಿಜೀವನದ ಸಲಹೆಗಳ ಬಗ್ಗೆ ಉಲ್ಲೇಖಿಸಿದರು.ಹಿರಿಯರ ಮಾರ್ಗದರ್ಶನ ಯುವ ವಕೀಲರಿಗೆ ಬೆಳವಣಿಗೆಯ ದಾರಿ.ಅವರ ಅನುಭವದಿಂದ ಕಲಿಯುವುದು ವೃತ್ತಿಜೀವನವನ್ನು ಗಟ್ಟಿಗೊಳಿಸುವ ಮುಖ್ಯ ಅಂಶ ವಕೀಲ ವೃತ್ತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರಾಕ್ಟೀಸ್ ಅನ್ನು ಗಂಭೀರವಾಗಿ ಮತ್ತು ಶಿಸ್ತುಬದ್ಧವಾಗಿ ತೆಗೆದುಕೊಳ್ಳಬೇಕೆಂಬ ಅಗತ್ಯತೆಯನ್ನು ಒತ್ತಿ ಹೇಳಿದರು. ನಾವು ನಮ್ಮ ಪ್ರಾಕ್ಟೀಸ್ ಅನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೇ ಹೋದರೆ ವೃತ್ತಿಯಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ.ಪ್ರಾಕ್ಟೀಸ್ ಅನ್ನು ಯಾವ ಪರಿಸ್ಥಿತಿಯಲ್ಲಿಯೂ ಬಿಡಬಾರದು ಅದೇ ನಿಮ್ಮ ಭವಿಷ್ಯದ ದಾರಿ,ನಿಮ್ಮ ಗುರುತು ನಿಮ್ಮ ಪ್ರಗತಿಯ ಮೂಲ ಎಂದು ಅವರು ಯುವ ವಕೀಲರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಮಲಿಂಗೇಗೌಡ, 5ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಶ್ರೀನಿವಾಸ್,ಹರೀಶ್ ಮತ್ತು ಇತರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನು ಓದಿದ್ದೀರಾ..? ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ
ಈ ಸಂದರ್ಬದಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಮುನಿರಾಜು,ಕಾರ್ಯದರ್ಶಿ ವೆಂಕಟೇಶ್,ಜಂಟಿ ಕಾರ್ಯದರ್ಶಿ ಚಂದ್ರಶೇಖರ್,ಖಜಾಂಚಿ ಅಯೂಬ್ ಖಾನ್,ಸಂಘದ ಸದಸ್ಯರು, ಹಿರಿಯ ವಕೀಲರು ಮತ್ತು ಇತರರು ಉಪಸ್ಥಿತರಿದ್ದರು.





