ಚಿಕ್ಕಬಳ್ಳಾಪುರ: ಶ್ರೀ ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣವು ಮಾನವ ಕುಲಕ್ಕೆ ದಾರಿದೀಪವಾಗಿದೆ. ಅವರ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿ ಕೊಂಡು ಮುಂದಿನ ಪೀಳಿಗೆಗೂ ತಲುಪಿಸಿದರೆ ಅದು ಸಮೃದ್ಧಿ ಮತ್ತು ಸಾರ್ಥಕತೆಯನ್ನು ತರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಡಾ. ಎಂ. ಸಿ ಸುಧಾಕರ್ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ “ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ”ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ಅವರು ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಆ ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ರಾಮಾಯಣ ಮಹಾಕಾವ್ಯವನ್ನು ಮಹರ್ಷಿ ವಾಲ್ಮೀಕಿಯವರು ರಚಿಸಿದ್ದರಿಂದ ಆದಿಕವಿ ಎಂದು ಕರೆಯಲಾಗುತ್ತದೆ. ವಾಲ್ಮೀಕಿ ವಿರಚಿತ ರಾಮಾಯಣದಲ್ಲಿನ ಮೌಲ್ಯಗಳು, ಜೀವನಾದರ್ಶಗಳು ಸಾರ್ವಕಾಲಿಕವಾಗಿವೆ ಅಲ್ಲದೆ ಜನಮನ್ನಣೆಗೂ ಪಾತ್ರವಾಗಿವೆ.ಬೇಡರ ಜನಾಂಗದಲ್ಲಿ ಜನಿಸಿದರೂ ಅಕ್ಷರ ಜ್ಞಾನಪಡೆದು ಮನಸ್ಸು ಪರಿವರ್ತಿಸಿಕೊಂಡು ಶ್ರೀ ಮಹರ್ಷಿ ವಾಲ್ಮೀಕಿ ಆಗಿದ್ದು ಹೆಮ್ಮೆಯ ವಿಷಯವಾಗಿದೆ. ಅವರು ರಚಿಸಿರುವ ರಾಮಾಯಣದ ಬಗ್ಗೆ ಪುರಾವೆಗಳಿವೆ.ವಾಲ್ಮೀಕಿ ಅವರು ದೇಶಕ್ಕೆ ಮತ್ತು ವಿಶ್ವಕ್ಕೆ ಕೊಟ್ಟಿರುವಂತಹ ಮಹಾಗ್ರಂಥ ರಾಮಾಯಣವನ್ನು ಅರಿತರೆ,ಮಾತಾ, ಪಿತೃ ಮತ್ತು ಗುರುವಿನ ಮಹತ್ವ, ಭ್ರಾತೃತ್ವ,ಗೌರವ ಸಂಸ್ಕೃತಿ ಹೆಚ್ಚಲಿದೆ.ಪೋಷಕರು ಈ ಬಗ್ಗೆ ಅರಿತು ಮಕ್ಕಳಿಗೂ ಸಹ ಕಲಿಸಬೇಕು. ರಾಮಾಯಣ ಗ್ರಂಥದಲ್ಲಿ ಜೀವನದ ಹೇಳು ಬಿಳಿನ ಘಟನೆಗಳನ್ನು ಕಾಣಬಹುದು ಎಂದು ತಿಳಿಸಿದರು.
ಶಾಸಕರಾದ ಪ್ರದೀಪ್ ಈಶ್ವರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ.. ಶ್ರೀ ಮಹರ್ಷಿ ವಾಲ್ಮೀಕಿ ಅವರಿಗೆ ಮಾಡುವ ಪೂಜೆಯ ಜೊತೆಗೆ ನಿಮ್ಮ ತಂದೆ ತಾಯಿಯ ಪಾದಗಳಿಗೆ ನಮಸ್ಕಾರ ಮಾಡಿದಾಗ ಹೆಚ್ಚು ಸಂತೋಷ, ನೆಮ್ಮದಿ ಸಿಗುತ್ತದೆ. ವಾಲ್ಮೀಕಿ ರಚಿಸಿದ ರಾಮಾಯಣ ನಮ್ಮೆಲ್ಲರಿಗೂ ಆದರ್ಶ.ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮರಾಗಬೇಕು. ಕಷ್ಟ ಪಟ್ಟು ಚೆನ್ನಾಗಿ ಓದಿ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು. ಜಿಲ್ಲಾ ವಾಲ್ಮೀಕಿ ಭವನದ ನಿರ್ಮಾಣ ನನ್ನ ಜವಾಬ್ದಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಕೆ.ಎಸ್. ನಾಗರಾಜು ಅವರು ಮಾತನಾಡಿ, ರತ್ನಾಕರ ಎಂಬುದು ವಾಲ್ಮೀಕಿಯ ಮೂಲ ಹೆಸರು. ಎಲ್ಲರಿಗೂ ಗೊತ್ತಿರುವ ಕಥೆಯಂತೆ ಕಾಡಿನಲ್ಲಿ ಬದುಕುಕಟ್ಟಿಕೊಂಡಿದ್ದ ರತ್ನಾಕರನಿಗೆ ನಾರದ ಮಹರ್ಷಿಯ ಸಂಪರ್ಕವಾಗುವವರೆಗೂ ಕಾಡಿನಲೋಕ ಹೊರತುಪಡಿಸಿ ಅನ್ಯ ಜಗತ್ತಿನ ಪರಿಚಯ ಇರಲಿಲ್ಲ. ಕಾಡಿನಲ್ಲಿ ರತ್ನಾಕರನ ಜೀವನರೀತಿ ನೀತಿಗಳ ಬಗ್ಗೆ ಹಲವು ಕತೆಗಳು ಜನಜನಿತವಾಗಿವೆ. ಪಾಪಪುಣ್ಯಗಳ ಕುರಿತು ನಾರದ ಮಹರ್ಷಿಗಳು ರತ್ನಾಕರನಲ್ಲಿ ಮಾಡಿದ ಚರ್ಚೆಯ ನಂತರ ರಾಮ ನಾಮ ಜಪದೊಂದಿಗೆ ಬದಲಾಗಿದ್ದು ಮಾತ್ರ ಅಚ್ಚರಿಯೇ ಆಗಿದೆ. ಆರಂಭದಲ್ಲಿ ರಾಮಾ ಎನ್ನುವ ಪದ ಉಚ್ಚಾರಣೆ ಬಾರದ ರತ್ನಾಕರನಿಗೆ ನಾರದರು ಮರ,ಮರಾ ಎಂದು ಉಚ್ಚರಿಸಲು ಸಲಹೆ ಮಾಡಿದಾಗ ಏಕಾಗ್ರತೆ ಮತ್ತು ಭಕ್ತಿಯಿಂದ ಮರ,ಮರಾ ಎಂದು ಜಪಿಸುತ್ತಲಿದ್ದ ಪದ ನಂತರ ರಾಮಾ,ರಾಮಾ ಆಯಿತು.ರಾಮಾಯಣ ಮತ್ತು ಮಹಾಭಾರತ ಭಾರತದ ಎರಡು ಕಣ್ಣುಗಳಿದ್ದಂತೆ. ಅವುಗಳಿಂದ ಕಲಿಯಬೇಕಾದದ್ದು ಸಾಕಷ್ಟಿದ್ದು ಮುಖ್ಯವಾಗಿ ವಿದ್ಯಾರ್ಥಿ ಯುವಜನರು ಈ ಗ್ರಂಥಗಳನ್ನು ಅಧ್ಯಯನ ಮಾಡಿ ಅರಿಯುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುಂದಿನ ಪೀಳಿಗೆಗೂ ಈ ಶ್ರೇಷ್ಠ ಗ್ರಂಥಗಳನ್ನು ತಲುಪಿಸಬೇಕಾದ ಜವಾಬ್ದಾರಿ ಇದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ ಸುಧಾಕರ್ ಅವರು ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ವಾಲ್ಮೀಕಿ ಹೂವಿನ ಪಲ್ಲಕ್ಕಿಯು ಮೆರವಣಿಗೆಯೊಂದಿಗೆ ವಾಪಸಂದ್ರದ ಶ್ರೀ ರಂಗನಾಥ ದೇವಾಲಯದಿಂದ ಆರಂಭಗೊಂಡು ಬಿ.ಬಿ ರಸ್ತೆ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಕನ್ನಡ ಭವನದ ವರೆಗೆ ಸಾಗಿತು. ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.ತಮಟೆ ವಾದ್ಯ ಸಾರ್ವಜನಿಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಗಳಾದ ಹೈನುಗಾರಿಕೆ, ಹಸು, ಎಮ್ಮೆ, ಮೊಲ ಸಾಕಾಣಿಕೆ, ಪಾಲಿ ಮನೆ, ಸೌಲಭ್ಯಗಳ ಪಡೆದುಕೊಂಡ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ..? ಸಿಜೆಐ ಮೇಲೆ ಶೂ ಎಸೆತ: ಸಿಪಿಐಎಂ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ರಮೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್,ಅಪರ ಜಿಲ್ಲಾಧಿಕಾರಿ ಭಾಸ್ಕರ್,ನಗರಸಭಾ ಅಧ್ಯಕ್ಷ ಗಜೇಂದ್ರ, ಉಪ ವಿಭಾಗಾಧಿಕಾರಿ ಅಶ್ವಿನ್, ತಹಸೀಲ್ದಾರ್ ರಶ್ಮಿ ಮತ್ತು ಸಮುದಾಯದ ಮುಖಂಡರಾದ ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡ ರಾಯಪ್ಪ ಗವಿರಾಯಪ್ಪ, ಗಂಗರೇಕಾಲುವೆ ಮೂರ್ತಿ,ವಕೀಲ ಮಟಮಪ್ಪ,ನಂಜುಂಡಪ್ಪ, ನಾಗರಾಜ್, ಸುಬ್ಬರಾಯಪ್ಪ, ಅಶ್ವಥಪ್ಪ ಬೊಮ್ಮನಹಳ್ಳಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರವೀಣ್ ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ವಿದ್ಯಾರ್ಥಿಗಳು,ಕಲಾವಿದರು ಉಪಸ್ಥಿತರಿದ್ದರು.





