ಕೋಲಾರ: ರಾಜಕೀಯ ಪಕ್ಷಗಳ ಏಜೆಂಟ್ ನಂತೆ ವರ್ತಿಸುವ ಹಾಗೂ ಅಕ್ರಮವಾಗಿ ಲೂಟಿಯಲ್ಲಿ ತೊಡಗಿರುವ ಹೊನ್ನೇನಹಳ್ಳಿ ಗ್ರಾಪಂ ಪಿಡಿಒ ಹರೀಶ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೇತೃತ್ವದಲ್ಲಿ ಗುರುವಾರ ಹೊನ್ನೇನಹಳ್ಳಿ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿ ತಾಪಂ ಇಒ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮವಾಗಿ ರಾಜಕಾಲುವೆ ಒತ್ತುವರಿ, ಇ ಖಾತೆಗಳ ಹೆಸರಲ್ಲಿ ಭ್ರಷ್ಟಾಚಾರ, ಭೂಪರಿವರ್ತನೆ, ನರೇಗಾದಲ್ಲಿ ಭ್ರಷ್ಟಾಚಾರ, ಸರ್ಕಾರಿ ಗುಂಡು ತೋಪುಗಳನ್ನು ಬಲಾಢ್ಯರಿಗೆ ಮಾಡಿಕೊಟ್ಟಿದ್ದಾರೆ ದಲಿತರ ಭೂಮಿ ವಂಚನೆ ಮಾಡಿರುವ ಪಿಡಿಒ ವಿರುದ್ದ ಲೋಕಾಯುಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡುಪಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್ ಗೆ ಅನುಮತಿ ನೀಡಿದ್ದಾರೆ ಕೂಡಲೇ ಪಂಚಾಯತಿಯಲ್ಲಿ ನಡೆದಿರುವ ಅಕ್ರಮ ಜಮೀನುಗಳ ಬಗ್ಗೆ ಸರ್ವೆ ಮಾಡಿಸಿ ಸರ್ಕಾರಿ ಜಮೀನು ಉಳಿಸಿ ಜಾನುವಾರುಗಳಿಗೆ ಮೀಸಲಿಟ್ಟು ದಲಿತರಿಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ರಮವಹಿಸುವಂತೆ ತಾಪಂ ಇಒ ಮಂಜುನಾಥ್ ಅವರನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ಮಂಜುನಾಥ್ ಮನವಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಆದಷ್ಟು ಬೇಗ ಸರ್ವೆ ಮಾಡಿಸಲಾಗುತ್ತದೆ ಪಿಡಿಒ ಹರೀಶ್ ಅವರನ್ನು ವರ್ಗಾವಣೆ ಮಾಡುವುದು ನನಗೆ ಅಧಿಕಾರವಿಲ್ಲ ಜಿಪಂ ಸಿಇಒ ಗಮನಕ್ಕೆ ತರಲಾಗುತ್ತದೆ ಎಂದರು.
ಇದನ್ನು ಓದಿದ್ದೀರಾ..? 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ: ಜಮೀರ್ ಅಹಮದ್ ಖಾನ್
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಮಿಕ ಘಟಕದ ಅಧ್ಯಕ್ಷ ಜಿ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪಿ.ನಾರಾಯಣ್, ರಾಜ್ಯ ಸಂಚಾಲಕ ವಿ.ಮಂಜುನಾಥ್, ಜಿಲ್ಲಾ ಅಧ್ಯಕ್ಷ ವಿ.ಅಮರೇಶದ, ಬಂಗಾರಪೇಟೆ ತಾ ಅಧ್ಯಕ್ಷ ತಿಪ್ಪಣ್ಣ, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ, ಉಮಾರಾಣಿ ಮುಂತಾದವರು ಇದ್ದರು





