ಬೀದರ್ ಜಿಲ್ಲೆಯ ಔರಾದ ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡುವದಾಗಿ ಸಂಸದ ಸಾಗರ ಖಂಡ್ರೆ ಭರವಸೆ ನೀಡಿದರು.
ಸೋಮವಾರ ಪಟ್ಟಣದ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿ, ʼಅಮರೇಶ್ವರ ದೇವಸ್ಥಾನದ ಮಹಾದ್ವಾರ ಸೇರಿದಂತೆ ಜೀರ್ಣೋದ್ಧಾರ ಕಾಮಗಾರಿಗೆ ಸಂಸದರ ಅನುದಾನದಡಿಯಲ್ಲಿ ₹1 ಕೋಟಿ ಅನುದಾನ ನೀಡುತ್ತೇನೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರೇಶ್ವರ ದೇವರ ದರ್ಶನ ಪಡೆಯುತ್ತಾರೆ. ಈ ದೇವಸ್ಥಾನದ ಅಭಿವೃದ್ಧಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆʼ ಎಂದರು.
ʼದೇವಸ್ಥಾನದ ಅಭಿವೃದ್ಧಿ ಸಮಿತಿಯಲ್ಲಿರುವ ಅನುದಾನ ಇಲಾಖೆಯ ಅಧಿಕಾರಿಗಳು ಬೇರೆಯ ಅಭಿವೃದ್ಧಿಗೆ ಬಳಸಲಿ. ಸಂಸದರ ಅಡಿಯಲ್ಲಿ ನಾನು ಪ್ರತ್ಯೇಕ ಅನುದಾನ ನೀಡುತ್ತೇನೆ. ಇನ್ನೂ ಅವಶ್ಯಕತೆಯಿದ್ದಲ್ಲಿ ಮುಜರಾಯಿ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸುವೆ ಎಂದರು. ಬಳಿಕ ದೇವಸ್ಥಾನದ ಮಹಾದ್ವಾರ, ಗೋಪುರ, ಕಲ್ಯಾಣ ಮಂಟಪ, ಭಕ್ತಾದಿಗಳಿಗೆ ವಾಸ್ತವ್ಯದ ವ್ಯವಸ್ಥೆನ ಸೇರಿದಂತೆ ದೇವಸ್ಥಾನವನ್ನು ಇನ್ನಷ್ಟು ಆಕರ್ಷಕವಾಗಿಸಲು ಅಗತ್ಯವಿರುವ ಕಾಮಗಾರಿಯ ಬಗ್ಗೆ ತಹಸೀಲ್ದಾರ ಮಹೇಶ ಪಾಟೀಲ್ ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಸೋಮವಾರ ಕಮಲನಗರ ತಾಲೂಕಿನ ಡೊಂಗರಗಾಂವ, ಔರಾದ್ ತಾಲೂಕಿನ ಕೊಳ್ಳೂರು ಗ್ರಾಮಗಳಿಗೆ ಭೇಟಿ ನೀಡೆದ ಸಂಸದ ಸಾಗರ ಖಂಡ್ರೆಗೆ ಗ್ರಾಮಸ್ಥರು ಬಾಜಾ ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಸಂಸದ ಸಾಗರ ಖಂಡ್ರೆ ಅವರಿಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಡೊಂಗರಗಾವ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ. ಅಲ್ಲದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ ಎಂದು ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಂಸದರು ತಾಲೂಕು ಪಂಚಾಯತಿ ಇಒ ಶಿವಕುಮಾರ ಘಾಟೆ ಅವರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಿದ ಅವರು ʼಜೆಜೆಎಂ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಗೆ ಮಾತನಾಡಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸುವೆʼ ಎಂದು ಭರವಸೆ ನೀಡಿದರು.
ಅಲೆಮಾರಿ ಜನಾಂಗದ ಸಮಸ್ಯೆ ಆಲಿಸಿದ ಸಂಸದ ಸಾಗರ್ ಖಂಡ್ರೆ :
ಔರಾದ್ ಪಟ್ಟಣದಲ್ಲಿ ಸ್ವಂತ ನೆಲೆಯಿಲ್ಲದೆ ಬೀದಿ ಬದಿಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗ ಕುಟುಂಬಗಳಿಗೆ ಸಂಸದ ಸಾಗರ ಖಂಡ್ರೆ ಅವರ ಭೇಟಿ ನೀಡಿ ಅಲೆಮಾರಿಗಳ ಸಮಸ್ಯೆ ಆಲಿಸಿದರು.
ʼಕಳೆದ 4 ದಶಕದಿಂದ ಸ್ವಂತ ಸೂರು ಸೇರಿದಂತೆ ಕನಿಷ್ಠ ಮೂಲ ಸೌಲಭ್ಯ ಇಲ್ಲದೆ ಬೀದಿ ಬದಿಯಲ್ಲಿ ವಾಸವಾಗಿದ್ದೇವೆ. ಈ ಬಗ್ಗೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಿ ಸ್ವಂತ ಸೂರು ಕಲ್ಪಿಸಬೇಕುʼ ಎಂದು ಗೊಳು ತೋಡಿಕೊಂಡರು.
ಅದಕ್ಕೆ ಸಂಸದ ಸಾಗರ್ ಖಂಡ್ರೆ ಪ್ರತಿಕ್ರಿಯಿಸಿ ಔರಾದ್ ಹೊರವಲಯದಲ್ಲಿ ಈಗಾಗಲೇ 2 ಎಕರೆ ಜಮೀನು ಮಂಜುರಾತಿಯಾಗಿದೆ. ಇನ್ನೂ 2 ಎಕರೆ ಜಮೀನು ಮಂಜುರಾತಿ ಮಾಡಲಾಗುತ್ತದೆ. ಮನೆಗಳಿಗಾಗಿ ತಾವುಗಳು ಅರ್ಜಿ ಸಲ್ಲಿಸುವಂತೆ ಎಲ್ಲ ಜನರಿಗೆ ಮನವರಿಕೆ ಮಾಡಿದರು.
ಇದನ್ನೂ ಓದಿ : ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ನೆಹರೂ ಪಾಟೀಲ್, ಭಾಲ್ಕಿ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸೋನು ದೇಶಮುಖ, ಪಪಂ ಸದಸ್ಯ ಸುನಿಲಕುಮಾರ ದೇಶಮುಖ ಸೇರಿದಂತೆ ಮುಖಂಡರಾದ ಬಸವರಾಜ ದೇಶಮುಖ ಶಿವರಾಜ ದೇಶಮುಖ, ರಾಮಣ್ಣ ವಡಿಯಾರ್, ಅನಿಲ ನಿರ್ಮಳೆ, ಶರಣಪ್ಪ ಪಾಟೀಲ್, ರಾಜಕುಮಾರ ಎಡವೆ, ಶಂಕು ನಿಶ್ಪತೆ, ಧನರಾಜ ಮುಸ್ತಾಪುರ, ಸತೀಶ ವಗ್ಗೆ, ಸೂರ್ಯಕಾಂತ ಮಾಲೆ, ರತ್ನಾದೀಪ ಕಸ್ತೂರೆ ಮತ್ತಿತರರು ಉಪಸ್ಥಿತರಿದ್ದರು.





