ಉತ್ತರ ಕನ್ನಡ ಜಿಲ್ಲೆಯು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ರಾಜ್ಯದ ಮಾದರಿ ಜಿಲ್ಲೆಯಾಗಿದ್ದು, ಈ ಸಾಧನೆಗೆ ಜಿಲ್ಲೆಯ ಗ್ಯಾರಂಟಿ ಪ್ರಾಧಿಕಾರದ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳ ಸಮನ್ವಯ ಕಾರ್ಯವೇ ಕಾರಣವಾಗಿದೆ. ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳಡಿ ಒಟ್ಟು 1922.85 ಕೋಟಿಯಷ್ಟು ಅನುದಾನ ಜಿಲ್ಲೆಗೆ ಹರಿದುಬಂದಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಾಂಡುರಂಗ ನಾಯ್ಕ ಹೇಳಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಎದುರಾಗಿಲ್ಲ. ಮಧ್ಯವರ್ತಿಗಳು ಅಥವಾ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ, ಯೋಜನೆಗಳು ನೇರವಾಗಿ ಜನತೆಗೆ ತಲುಪುತ್ತಿದೆ. ಪ್ರತಿ ಕುಟುಂಬಕ್ಕೂ ತಿಂಗಳಿಗೆ ರೂ.5,000 ರಿಂದ ರೂ.6,000 ರ ನೆರವು ದೊರೆಯುತ್ತಿದ್ದು, ಈ ಯೋಜನೆಗಳು ಬಡವರ ಪಾಲಿಗೆ ಕಲ್ಪವೃಕ್ಷವಾಗಿವೆ,” ಎಂದರು.
ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಆರ್ಥಿಕ ಚೈತನ್ಯ ದೊರೆತಿದ್ದರೂ, ಬಸ್‌ಗಳು ಆಗಾಗ್ಗೆ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿರುವುದು ಏಕೆ, ಮುಂದಿನ ದಿನಗಳಲ್ಲಿ ಸಾರಿಗೆ ಅಧಿಕಾರಿಗಳು ಗುಣಮಟ್ಟದ ಬಿಡಿಭಾಗಗಳನ್ನು ಬಳಸಿ ವಾಹನ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಹಾಗೂ ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನಿಗಾವಹಿಸಿಲು ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಬಸ್ ನಿಲ್ದಾಣಗಳಲ್ಲಿನ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳ ಸುಧಾರಣೆಗೂ ಒತ್ತು ನೀಡುವಂತೆ ಹೇಳಿದರು. ಯುವನಿಧಿ ಯೋಜನೆಯಡಿ ಈಗಾಗಲೇ ನೆರವು ಪಡೆದಿರುವವರಿಗೆ ಕಡ್ಡಾಯವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ತರಬೇತಿಯ ನಂತರ ಉದ್ಯೋಗಾವಕಾಶ ಒದಗಿಸುವತ್ತ ಇಲಾಖೆಗಳು ಕ್ರಮ ವಹಿಸಬೇಕೆಂದು ಅವರು ಸಲಹೆ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಬಿಡುಗಡೆಯಾದ ಜುಲೈ ತಿಂಗಳ ಮೊತ್ತವನ್ನು ಎರಡು ದಿನಗಳೊಳಗೆ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸೂಚಿಸಿದ ಅವರು, “ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಶೇ.99.96 ರಷ್ಟು ಸಾಧನೆ ಮಾಡಿದೆ. ಉಳಿದ ಫಲಾನುಭವಿಗಳನ್ನು ಯೋಜನೆಯ ವ್ಯಾಪ್ತಿಗೆ ತರಲು ತಾಲ್ಲೂಕು ಮಟ್ಟದಲ್ಲಿ ಅದಾಲತ್‌ಗಳನ್ನು ಆಯೋಜಿಸಬೇಕು. ಜಿಲ್ಲೆಯ ಯಾವುದೇ ಅರ್ಹ ಮಹಿಳೆ ಯೋಜನೆಯಿಂದ ವಂಚಿತರಾಗಬಾರದು,” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ
ಅನ್ನಭಾಗ್ಯ ಯೋಜನೆ: ರೂ.152.51 ಕೋಟಿ, ಶಕ್ತಿ ಯೋಜನೆ: 13.72 ಕೋಟಿ ಮಹಿಳೆಯರಿಗೆ ರೂ.404.49 ಕೋಟಿ, ಗೃಹಲಕ್ಷ್ಮಿ ಯೋಜನೆ: 32,823 ಮಹಿಳೆಯರಿಗೆ ರೂ.1299.20 ಕೋಟಿ, ಯುವನಿಧಿ ಯೋಜನೆ: ರೂ.15.30 ಕೋಟಿ, ಗೃಹಜ್ಯೋತಿ ಯೋಜನೆ: 455.84 ಕೋಟಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳಡಿ ಇದುವರೆಗೆ ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ನೆರವು ಒದಗಿಸಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷ ಜನಾರ್ಧನ ಕುಪ್ಪ ದೇವಾಡಿಗ, ಸದಸ್ಯರು ಪಾಂಡುರಂಗ ಗೌಡ ಅಂಕೋಲಾ, ರಾಜೇಂದ್ರ ರಾಣೆ ಕಾರವಾರ, ದೇವಿದಾಸ ಶಾನುಭಾಗ ಯಲ್ಲಾಪುರ, ಅಣ್ಣಪ್ಪ ನಾಯ್ಕ ಮಂಕಿ, ರಾಜು ನಾಯ್ಕ ಭಟ್ಕಳ, ಅಶೋಕ್ ಗೌಡ ಕುಮಟಾ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ ನಾಯ್ಕ, ಕೌಶಲ್ಯಾಭಿವೃದ್ಧಿ ಸಹಾಯಕ ನಿರ್ದೇಶಕ ರಜತ್ ಕುಮಾರ್ ಹಬ್ಬು, ಸಾರಿಗೆ ನಿಗಮ ಮತ್ತು ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.





