ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದಲ್ಲಿ ಮುಂದಿನ ಒಂದು ವರ್ಷದೊಳಗೆ ಕರಾವಳಿ ಭಾಗದ ಮುಸ್ಲಿಮರ ಕನಸಿನ ಕಟ್ಟಡವಾಗಿರುವ ‘ಮಂಗಳೂರು ಹಜ್ ಭವನ’ ನಿರ್ಮಾಣವಾಗಲಿದೆ.
ಹೌದು. ಹಜ್ ಭವನದ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ್, “ಪ್ರತಿ ವರ್ಷ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರ ಅನುಕೂಲಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಜ್ಜೆ ಗ್ರಾಮದಲ್ಲಿ 1.56 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ‘ಹಜ್ ಭವನ’ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಗೃಹ ಮಂಡಳಿಗೆ ವಹಿಸಲು ಹಾಗೂ ಚಾಲ್ತಿಯಲ್ಲಿರುವ ಸರ್ಕಾರದ ಸುತ್ತೋಲೆಗಳ ಅನ್ವಯ ಹಾಗೂ ಕೆ.ಟಿ.ಪಿ.ಪಿ. ನಿಯಮಾನುಸಾರ ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತದೆ. ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ” ಎಂದು ತಿಳಿಸಿದ್ದರು.

ಜಮೀನು ಸಮಸ್ಯೆ: 8 ಕೋಟಿ ಮೌಲ್ಯದ 1.8 ಎಕರೆ ಜಮೀನು ದಾನ ಮಾಡಿರುವ ಇನಾಯತ್ ಅಲಿ
ರಾಜ್ಯದ ಕರಾವಳಿ ನಗರವಾದ ಮಂಗಳೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹಜ್ ಭವನಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಇನಾಯತ್ ಅಲಿ ಹಾಗೂ ಅವರ ಕುಟುಂಬ ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸುಮಾರು ಎಂಟು ಕೋಟಿ ಮೌಲ್ಯದ ಒಂದು ಎಕರೆ ಎಂಬತ್ತು ಸೆಂಟ್ಸ್ ಜಮೀನನ್ನು ಕರ್ನಾಟಕ ರಾಜ್ಯ ಹಜ್ ಸಮಿತಿಗೆ ದಾನವಾಗಿ ಈಗಾಗಲೇ ನೀಡಿದ್ದಾರೆ.
ತಮ್ಮ ಕುಟುಂಬದ ಒಡೆತನದಲ್ಲಿದ್ದ ಜಮೀನಿನ ಪೈಕಿ ಸುಮಾರು 1.8 ಎಕರೆ ಜಮೀನನ್ನು ದಾನ ಮಾಡಲು ಉದ್ದೇಶಿಸಿದ್ದ ಇನಾಯತ್ ಅಲಿ ಕುಟುಂಬವು, ರಾಜ್ಯ ಹಜ್ ಕಮಿಟಿಯ ಮುಖಂಡರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಆ ಬಳಿಕ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದ್ದ ಹಜ್ ಕಮಿಟಿಯು ಎಲ್ಲ ಪ್ರಕ್ರಿಯೆಗಳನ್ನು 2025ರ ಏಪ್ರಿಲ್‌ನಲ್ಲಿ ಮುಗಿಸಿತ್ತು. ಆ ಬಳಿಕ ಉದ್ಯಮಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿಯವರ ಮನೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಜಮೀನಿನ ದಾಖಲೆ ಪತ್ರಕ್ಕೆ ಸಹಿ ಹಾಕಿ, ಹಸ್ತಾಂತರಿಸುವ ಪ್ರಕ್ರಿಯೆಯೂ ಕೂಡ ನಡೆದಿತ್ತು.

ಸದ್ಯ ಸರ್ಕಾರವು ಹಜ್ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಇನಾಯತ್ ಅಲಿಯವರು, “ಹಜ್ ಭವನ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟವು 20 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿರುವ ಸುದ್ದಿ ಕೇಳಿ ಖುಷಿಯಾಗಿದೆ. ಸರ್ಕಾರಕ್ಕೆ ಕರಾವಳಿಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಮುಂದಿನ ಒಂದು ವರ್ಷದೊಳಗೆ ಹಜ್ ಭವನವು ನಿರ್ಮಾಣಗೊಳ್ಳಲಿದೆ” ಎಂದು ತಿಳಿಸಿದರು.
“ಸರ್ಕಾರವು 16 ವರ್ಷದ ಹಿಂದೆ ಹಜ್ ಭವನ ನಿರ್ಮಾಣದ ಉದ್ದೇಶಕ್ಕೆ 10 ಕೋಟಿ ಅನುದಾನ ನೀಡಿತ್ತು. ಜಮೀನು ಸರಿಯಾಗಿ ದೊರಕದ ಹಿನ್ನೆಲೆಯಲ್ಲಿ ಆ ಮೊತ್ತವು ಖಾತೆಯಲ್ಲೇ ಉಳಿದಿತ್ತು. ಸರ್ಕಾರದ ಮೊತ್ತಕ್ಕೆ ಸುಮಾರು 6 ಕೋಟಿ ಬಡ್ಡಿಯ ಹಣ ಕೂಡ ಬಂದಿತ್ತು. ಇಸ್ಲಾಮಿನಲ್ಲಿ ಬಡ್ಡಿಯ ಹಣ ನಿಷೇಧವಿದೆ. ಹಾಗಾಗಿ, ನಾವು 6 ಕೋಟಿ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದೇವೆ. ಸದ್ಯ ಸರ್ಕಾರವು ಒಟ್ಟು 20 ಕೋಟಿ ಅನುದಾನ ನೀಡಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ” ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ‘ಮಂಗಳೂರು ಹಜ್ ಭವನ’ಕ್ಕಾಗಿ 8 ಕೋಟಿ ಮೌಲ್ಯದ 1.8 ಎಕರೆ ಜಮೀನು ದಾನ ಮಾಡಿದ ಇನಾಯತ್ ಅಲಿ
“ಬಜಪೆ ಮುಖ್ಯ ರಸ್ತೆ ಬಳಿ ನಮ್ಮ ಕುಟುಂಬದ 2.30 ಎಕರೆ ಜಮೀನಿದೆ. ಅದರಲ್ಲಿ ಈಗಾಗಲೇ ನಾವು ನೀಡಿರುವ 1.80 ಎಕರೆ ಜಮೀನಿನಲ್ಲೇ ಹಜ್ ಭವನ ನಿರ್ಮಾಣವಾಗಲಿದೆ. 50 ಅಡಿ ಅಗಲದ ರಸ್ತೆಗಾಗಿ ಕೂಡ ಹೆಚ್ಚುವರಿ ಜಮೀನನ್ನು ಕೂಡ ನೀಡಿದ್ದೇವೆ. ಒಂದು ವೇಳೆ ಇನ್ನೂ ಹೆಚ್ಚಿನ ಜಾಗದ ಅವಶ್ಯಕತೆ ಇದ್ದರೆ, ಅದನ್ನು ಕೂಡ ನೀಡಲು ತಯಾರಿದ್ದೇವೆ ಎಂದು ರಾಜ್ಯ ಹಜ್ ಕಮಿಟಿಗೆ ಈಗಾಗಲೇ ತಿಳಿಸಿದ್ದೇವೆ. ಕಟ್ಟಡ ಕಾಮಗಾರಿಯ ವೇಳೆ ಯಾವುದೇ ತೊಂದರೆ ಆಗದಂತೆ ಈ ಬಗ್ಗೆ ನಿಗಾ ವಹಿಸುವುದಕ್ಕಾಗಿ ಮಂಗಳೂರಿನ ಮುಸ್ಲಿಂ ಸಮುದಾಯದ ಮುಖಂಡರು ಕಮಿಟಿಯೊಂದನ್ನು ಕೂಡ ರಚಿಸಿಕೊಂಡಿದ್ದಾರೆ. ಈ ಕಮಿಟಿಗೆ ಉದ್ಯಮಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿಯವರು ನೇತೃತ್ವ ವಹಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಹಜ್ ಭವನ ನಿರ್ಮಾಣವಾಗಿ ಸಮುದಾಯದ ಉಪಯೋಗಕ್ಕೆ ಬರಲಿ ಎಂಬುದು ನಮ್ಮ ಆಶಯ” ಎಂದು ಇನಾಯತ್ ಅಲಿ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದರು.
ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ದ.ಕ. ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, “ಸುಮಾರು 16 ವರ್ಷಗಳ ಕರಾವಳಿ ಭಾಗದ ಜನರ ಹಜ್ ಭವನದ ಕನಸು ಜಮೀನಿನ ಸಮಸ್ಯೆಯ ಕಾರಣಕ್ಕೆ ತಡೆಯಾಗಿತ್ತು. ಇನಾಯತ್ ಕುಟುಂಬದವರ ಸಹಕಾರದಿಂದ ಅದು ಕೂಡ ನಿವಾರಣೆಯಾಗಿದೆ. ಮುಂದಿನ ಹಜ್ ಯಾತ್ರೆಯ ಒಳಗೆ ಹಜ್ ಭವನ ನಿರ್ಮಾಣ ಆಗಲಿ ಎಂಬುದು ನಮ್ಮ ಹಾರೈಕೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಏನೆಲ್ಲ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡುತ್ತೇವೆ. ಮಂಗಳೂರಿನ ಹಜ್ ಯಾತ್ರಿಕರು ಬೆಂಗಳೂರಿಗೆ ತೆರಳಿ ಅಲ್ಲಿಂದ ಯಾತ್ರೆಗೆ ಹೋಗುತ್ತಿದ್ದರು. ಹೀಗಾಗಿ, ಮಂಗಳೂರಿನಿಂದಲೇ ನೇರ ವಿಮಾನ ಸೌಲಭ್ಯ ಕಲ್ಪಿಸಲು ಮನವಿ ಸಲ್ಲಿಸಿದ್ದೇವೆ” ಎಂದು ತಿಳಿಸಿದರು.
ಬೆಂಗಳೂರಿನ ಮಾದರಿಯಲ್ಲೇ ಹಜ್ ಭವನ ನಿರ್ಮಾಣ
ಪ್ರತಿ ವರ್ಷ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುವ ಹಜ್ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಯಾತ್ರಾರ್ಥಿಕರಿಗೆ ಇವರ ಯಾತ್ರೆಯು ಸುಗಮವಾಗುವ ನಿಟ್ಟಿನಲ್ಲಿ ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ 2016ರಲ್ಲಿ ಬೆಂಗಳೂರಿನ ಹೆಗ್ಡೆ ನಗರ ಮುಖ್ಯರಸ್ತೆಯಲ್ಲಿ ಹಜ್ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಈ ಕಟ್ಟಡದ ಮಾದರಿಯಲ್ಲಿಯೇ ಮಂಗಳೂರಿನಲ್ಲಿಯೂ ಸಹ ಹಜ್ ಭವನವನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ.

ಮಂಗಳೂರಿನಲ್ಲಿ ನಿರ್ಮಾಣವಾಗಲಿರುವ ಹಜ್ ಭವನವು ತಳ, ನೆಲ ಅಂತಸ್ತು ಸೇರಿ ಒಟ್ಟು ಆರು ಮಹಡಿಗಳು ಇರಲಿದೆ. ಇದರಲ್ಲಿ ಸುಮಾರು 200 ಮಂದಿ ಹಜ್ ಯಾತ್ರಾರ್ಥಿಗಳು ತಂಗಲಿರುವ ವ್ಯವಸ್ಥೆ ಕೂಡ ಇರಲಿದೆ. ಮಸೀದಿ ಹಾಗೂ ಸುಮಾರು 2000 ಮಂದಿ ಭಾಗವಹಿಸುವಷ್ಟು ವ್ಯವಸ್ಥೆ ಇರುವ ಸಭಾಂಗಣ ಇರಲಿದೆ. ಹಜ್ ಭವನದಲ್ಲಿ ನಿರ್ಮಾಣವಾಗಲಿರುವ ಸಭಾಂಗಣವನ್ನು ಮುಂದಿನ ದಿನಗಳಲ್ಲಿ ಆದಾಯ ಬರುವ ಉದ್ದೇಶದಿಂದ ಮದುವೆ ಸಹಿತ ಇನ್ನಿತರ ಸಭೆ- ಸಮಾರಂಭಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಈವರೆಗೆ ಲಭ್ಯವಿರುವ ಎಲ್ಲ ಅತ್ಯಾಧುನಿಕ ಶೈಲಿಯನ್ನು ಬಳಸಿಕೊಂಡು ಮಂಗಳೂರು ಹಜ್ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಸುಮಾರು 500ರಷ್ಟು ಮಂದಿಗೆ ಒಮ್ಮೆಲೆ ಊಟ ತಯಾರಿಸಿ ಬಡಿಸಲು ಕಿಚನ್ ವ್ಯವಸ್ಥೆಯನ್ನು ಕೂಡ ಮಾಡಲು ‘ನೀಲಿ ನಕಾಶೆ’ಯನ್ನು ತಯಾರಿಸಲಾಗಿದೆ. ಅಲ್ಲದೇ, ಸುಮಾರು 200ರಷ್ಟು ವಾಹನಗಳಿಗೆ ಹಜ್ ಭವನದ ಆವರಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕೂಡ ಇರಲಿದೆ.

ಕರಾವಳಿ ಭಾಗದ ಜನರ 16 ವರ್ಷಗಳ ಕನಸು ‘ಹಜ್ ಭವನ’
ಮಂಗಳೂರಿನಲ್ಲಿ ರೈಲ್ವೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಮಾಡಬೇಕು ಎಂಬುದು ಸರಿ ಸುಮಾರು 16 ವರ್ಷಗಳ ಹಿಂದೆಯೇ ಮುಸ್ಲಿಂ ಸಮುದಾಯದ ಮುಖಂಡರ ಕನಸಾಗಿತ್ತು. ಆದರೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳು ಒಂದರ ಮೇಲೊಂದರಂತೆ ಎದುರಾಗುತ್ತಿತ್ತು.
14 ವರ್ಷಗಳ ಹಿಂದೆ ಬಜಪೆ, ಮರವೂರು ಬಳಿ ಸರಕಾರಿ ಜಮೀನು ಮಂಜೂರಾಗಿದ್ದರೂ, ಸ್ಥಳೀಯರ ಆಕ್ಷೇಪದಿಂದ ಕೈಬಿಡಲಾಗಿತ್ತು. 11 ವರ್ಷಗಳ ಹಿಂದೆ ಮಂಗಳೂರು ಹಜ್ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರ 20 ಕೋಟಿ ರೂ. ಮಂಜೂರು ಮಾಡಿತ್ತಲ್ಲದೇ, ಅದರಲ್ಲಿ 10 ಕೋಟಿ ರೂ. ಹಣ ಬಿಡುಗಡೆ ಕೂಡ ಮಾಡಿತ್ತು. 11 ವರ್ಷದಲ್ಲಿ 6 ಕೋಟಿ ರೂ. ಬಡ್ಡಿ ಬಂದಿತ್ತು. ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಉದ್ದೇಶವಿರುವುದರಿಂದ ಬಡ್ಡಿಯ ಹಣವನ್ನು ಬಳಕೆ ಮಾಡಬಾರದು ಎಂಬ ದೃಷ್ಟಿಯಿಂದ 6 ಕೋಟಿ ಹಣವನ್ನು ಸರಕಾರಕ್ಕೆ ಈಗಾಗಲೇ ಮರಳಿಸಲಾಗಿದೆ.
2019ರಲ್ಲಿ ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಯಾನಕ್ಕೆ ಚಾಲನೆ ನೀಡಿದ್ದ ಅಂದಿನ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ರಾಜ್ಯದ ವಕ್ಫ್ ಸಚಿವರಾಗಿದ್ದ ಪ್ರೊ. ಮುಮ್ತಾಝ್ ಅಲಿ ಖಾನ್ ಹಜ್ ಭವನ ನಿರ್ಮಾಣದ ಪ್ರಸ್ತಾಪ ಮಾಡಿದ್ದರು. ಈ ವೇಳೆ ‘ತಾನು ಕೂಡ ಒಂದು ಲಕ್ಷ ರೂ. ನೀಡುತ್ತೇನೆ’ ಎಂದು ದಕ್ಷಿಣ ಕನ್ನಡದ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಕೂಡ ಘೋಷಿಸಿದ್ದರು.

ಆ ಬಳಿಕ ಕೆಲವು ಕರಾವಳಿಯ ಶ್ರೀಮಂತರು ಜಾಗ ಕೊಡುತ್ತೇವೆ ಎಂದು ಹೇಳಿದ್ದರೂ, ಮುಂದೆ ಬಂದಿರಲಿಲ್ಲ. ಒಂದೆಡೆ ವಕ್ಫ್‌ಗೆ ಸೇರಿದ್ದ ಜಾಗವಿದ್ದರೂ, ಅದನ್ನು ಹಜ್ ಕಮಿಟಿಯವರ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ. 2024ರಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಡ್ಯಾರ್-ಕಣ್ಣೂರು ಮಸೀದಿಯ ಮುಂದೆ 1 ಎಕರೆ ಜಮೀನು ಖರೀದಿಸಿ ನಿರ್ಮಾಣ ಮಾಡುವ ಯೋಜನೆ ಘೋಷಿಸಿದ್ದರಾದರೂ, ಖರೀದಿ ಮಾತ್ರ ನಡೆಯದೆ ತಡೆಯಾಯಿತು.
ಈ ಎಲ್ಲ ವಿವರಗಳನ್ನು ತಿಳಿದಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ತಮ್ಮ ಕುಟುಂಬದೊಂದಿಗೆ ಚರ್ಚಿಸಿ ಬಜಪೆ ಮುಖ್ಯ ರಸ್ತೆ ಬಳಿಯಿದ್ದ ತಮ್ಮ ಕುಟುಂಬದ 2.30 ಎಕರೆ ಜಮೀನನ ಪೈಕಿ, 1.80 ಎಕರೆ ಜಮೀನು ಹಜ್ ಭವನ ನಿರ್ಮಾಣಕ್ಕೆ ಹಜ್ ಕಮಿಟಿಗೆ ದಾನವಾಗಿ ನೀಡುವ ಮೂಲಕ ಜಮೀನಿಗಿದ್ದ ಸಮಸ್ಯೆ ನಿವಾರಣೆ ಮಾಡಿದರು. ಈ ಜಮೀನು ಮಂಗಳೂರು ವಿಮಾನ ನಿಲ್ದಾಣದಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿದೆ. ಸದ್ಯ ಮಂಗಳೂರು ಹಜ್ ಭವನಕ್ಕಿದ್ದ ವರ್ಷಗಳಿಂದ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದೆ. ಆ ಮೂಲಕ ಕರಾವಳಿ ಭಾಗದ ಜನರ 16 ವರ್ಷಗಳ ಕನಸು, ಇನ್ನು ವರ್ಷಗಳೊಳಗೆ ನನಸಾಗುವತ್ತಾ ಸಾಗಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





