ಬಾಗೇಪಲ್ಲಿ:- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ, ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸುತ್ತಿರುವುದು ಶುದ್ಧ ಸುಳ್ಳು. ಸರ್ಕಾರದ ಹಣಕಾಸಿನ ಸ್ಥಿತಿ ಉತ್ತಮವಾಗಿದೆ’ ಎಂದು ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನಿವೇಶನ ರಹಿತರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
‘2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಡಜನರಿಗೆ ಒಂದು ನಿವೇಶನ, ಮನೆ ಹಂಚಿಕೆ ಮಾಡಿಲ್ಲ. ನಾನು ವಸತಿ ಸಚಿವನಾದ ಬಳಿಕ ಮನೆಗಳಿಗೆ ಬೇಡಿಕೆ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ, ಬಡಜನರಿಗೆ ಮನೆ ಕಲ್ಪಿಸಿದ್ದೇನೆ’ ಎಂದರು.
‘ಬಿಜೆಪಿ ಬಡಜನರಿಗೆ ಕಲ್ಯಾಣ ಯೋಜನೆ ಮಾಡಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಮನೆ, ನಿವೇಶನ ರಹಿತರಿಗೆ ನಿವೇಶನ, ಮನೆ ಕಲ್ಪಿಸಲಾಗುವುದು. ಬೇಡಿಕೆಯಂತೆ ಹಂತ ಹಂತದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ, ಮನೆ ನಿರ್ಮಿಸಿಕೊಡಲಾಗುವುದು. ಸರ್ಕಾರ 6ನೇ ಗ್ಯಾರಂಟಿ ಘೋಷಣೆ ಮಾಡದೇ ಇದ್ದರೂ, ಬಡಜನರ ಕಲ್ಯಾಣಕ್ಕೆ ಮನೆಗಳ ಗ್ಯಾರಂಟಿ ನೀಡಲಾಗುವುದು’ ಎಂದರು.
‘ಮನೆ ನಿರ್ಮಾಣಕ್ಕೆ ₹ 7 ಲಕ್ಷ ಅಗತ್ಯ ಇದೆ. ಕಾಂಗ್ರೆಸ್ ಎಲ್ಲ ಜಾತಿ, ಧರ್ಮವನ್ನು ಸಮಾನತೆಯಿಂದ ಕಾಣುತ್ತದೆ. ಅಲ್ಪಸಂಖ್ಯಾತರ ಯೋಜನೆಗಳಿಗೆ ಹೆಚ್ಚು ಅನುದಾನವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ, ನಂಬಿಕೆ ಇದೆ. ಇದರಿಂದ ಮುಂದಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಜನಪರ ಶಾಸಕರಾಗಿದ್ದಾರೆ. 3 ತಾಲ್ಲೂಕುಗಳ ಅಭಿವೃದ್ಧಿಗೆ ಸಚಿವರ ಬಳಿ ಕಡತ ತರುತ್ತಾರೆ. ಅನುದಾನ ಬಿಡುಗಡೆ ಮಾಡುವವರೆಗೂ ಕದಲಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ಸಚಿವ ಸಂಪುಟದ ಪುನರ್‍ರಚನೆಯಲ್ಲಿ ಸುಬ್ಬಾರೆಡ್ಡಿ ಸಚಿವ ಎಂಬ ವಿಶ್ವಾಸ ನನಗೆ ಇದೆ’ ಎಂದು ಸಚಿವ ಜಮೀರ್ ಹೇಳಿಕೆಗೆ ಅಭಿಮಾನಿಗಳು ಸಿಳ್ಳೆ ಹೊಡೆದರು
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಅಲ್ಪಸಂಖ್ಯಾತರ ವಸತಿ ಶಾಲೆ, ಹುಸೇನ್ ಷಾ ವಲಿ ದರ್ಗಾ ಅಭಿವೃದ್ಧಿಗೆ ಸರ್ಕಾರ ₹30 ಕೋಟಿ ಬಿಡುಗಡೆ ಮಾಡಿದೆ. ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣ ಪಡೆಯಬೇಕು. 3 ತಾಲ್ಲೂಕು ಇರುವುದರಿಂದ ವಸತಿಗಳ ಬೇಡಿಕೆ ಇದೆ. ಸರ್ಕಾರ ಮನಸ್ಸು ಮಾಡಿ 3 ತಾಲ್ಲೂಕುಗಳ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
ನಿವೇಶನ ಹಕ್ಕುಪತ್ರ ಪತ್ರ ವಿತರಣೆ:-
ಬಾಗೇಪಲ್ಲಿ ಚೇಳೂರು ಗುಡಿಬಂಡೆ ತಾಲ್ಲೂಕುಗಳಲ್ಲಿ ರಾಜೀವ್ ಗಾಂಧಿ ನಿಗಮದಿಂದ 497 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ತಾಲ್ಲೂಕಿನ ಪರಗೋಡಿನ ಚಿತ್ರಾವತಿ ಬ್ಯಾರೇಜಿಗೆ ಸಂಚರಿಸುವ ಮಾರ್ಗದ ಸಮೀಪ ₹16 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಮೊರಾರ್ಜಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಹಾಗೂ ಕೊಡಿಕೊಂಡ ರಸ್ತೆಯಲ್ಲಿನ ಪಟ್ಟಣದ ಅವಧೂತ ಹುಸೇನ್ ಷಾ ವಲಿ ದರ್ಗಾದ ಅಭಿವೃದ್ಧಿಯ ₹2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮಾಡಲಾಯಿತು.
ಇದನ್ನು ಓದಿದ್ದೀರಾ..? ವಿಧ್ಯಾರ್ಥಿಗಳ ಶಿಕ್ಷಣಗುಣಮಟ್ಟವನ್ನು ಸುಧಾರಿಸಲು ಮರು ಸಿಂಚನ ಯೋಜನೆ ಸಹಕಾರಿ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್,ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಹೆಚ್ಚುವರಿ ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್‍ಭಾಷ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ತಹಶೀಲ್ದಾರ್ ಬಿ.ಕೆ.ಶ್ವೇತಾ, ಇಒ ಜಿ.ವಿ.ರಮೇಶ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಂ.ಎಲ್.ಬಿಂದುಮತಿ,ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಅರ್ಬಾಜ್, ಪಿಡಿಒ ನಾಗಮಣಿ, ಅಧ್ಯಕ್ಷೆ ನಾಗಮಣಿ, ಎಚ್.ವಿ.ನಾಗರಾಜ್, ಎಚ್.ಎಸ್.ನರೇಂದ್ರ, ಮಹಮದ್ ಎಸ್.ನೂರುಲ್ಲಾ, ನಿಜಾಮುದ್ದೀನ್ ಇದ್ದರು.





