ವಿಜಯಪುರ ಜಿಲ್ಲೆಗೆ 200 ಹೊಸ ಸರ್ಕಾರಿ ಬಸ್‌ಗಳ ಬೇಡಿಕೆ ಇದ್ದು, ಪ್ರಥಮ ಹಂತದಲ್ಲಿ 66 ಬಸ್ ಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಜಯಪುರ ನಗರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ವಿಭಾಗಿಯ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿ ಹೊಸ ಬಸ್ ಖರೀದಿ ಪ್ರಕ್ರಿಯೆ ಈಗ ಆರಂಭವಾಗಿದ್ದು, ಟೆಂಡರ್ ಪೂರ್ಣಗೊಂಡ ನಂತರ ಕಾರ್ಯಾದೇಶ ನೀಡಲಾಗುವುದು” ಎಂದರು.
ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ 200 ಹೊಸ ಬಸ್ಸುಗಳ ಅವಶ್ಯಕತೆ ಇದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಪ್ರಥಮ ಹಂತದಲ್ಲಿ 66 ಬಸ್ ಒದಗಿಸಲಾಗುವುದು. ಸಾರಿಗೆ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ರಸ್ತೆ ಅಗಲೀಕರಣ ವಿರೋಧಿಸಿ ಪ್ರತಿಭಟನೆ; ಆಪ್ ಬೆಂಬಲ
ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಡಚಣದಲ್ಲಿ ಡಿಪೋ ಸ್ಥಾಪನೆ ಬಗ್ಗೆ ಶಾಸಕರು ಹೇಳಿದ್ದಾರೆ. ಈ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಜೊತೆಗೆ ಸುರಕ್ಷತಾ ಪ್ರಯಾಣ ನಮ್ಮ ಗುರಿ, ಎಮರ್ಜೆನ್ಸಿ ಎಕ್ಸಿಟ್ ಗೇಟ್ ಅಳವಡಿಕೆ, ಓವರ್ ಲೋಡ್ ಗೆ ಕಡಿವಾಣ ಹಾಕುವುದು ಸೇರಿದಂತೆ ಅನೇಕ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲಾಗುತ್ತದೆ ಎಂದರು.





