ಮುಸ್ಲಿಮರೇ ಇಲ್ಲದ ಊರಲ್ಲಿ ಅದ್ದೂರಿ ಮೊಹರಂ; ಭಾವೈಕ್ಯತೆಗೆ ಸಾಕ್ಷಿಯಾದ ಆಚರಣೆ

Date:

ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿಯ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಹಿಂದುಗಳೇ ಅದ್ದೂರಿಯಾಗಿ ಮುಸ್ಲಿಮರ ಮೊಹರಂ ಹಬ್ಬವನ್ನು ಆಚರಿಸುವ ಪದ್ಧತಿ ಇದೆ. ಹಿಂದುಗಳೇ ಭಕ್ತಿ, ಶ್ರದ್ಧೆ ಮತ್ತು ವೈಭವದೊಂದಿಗೆ ಮುಸ್ಲಿಮರ ಹಬ್ಬವನ್ನು ಮನಃ ಪೂರ್ವಕವಾಗಿ ಆಚರಿಸುವ ಮೂಲಕ ಧಾರ್ಮಿಕ ಸಹಬಾಳ್ವೆಗೆ ಮಾದರಿಯಾಗಿದ್ದಾರೆ.

ನೆರೆ ರಾಜ್ಯ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಕೇವಲ ಹಿಂದು ಸಮುದಾಯದ ಕುಟುಂಬಗಳೇ ವಾಸಿಸುತ್ತಿದ್ದು, ಒಂದೂ ಮುಸ್ಲಿಂ ಕುಟುಂಬ ಇಲ್ಲ. ಆದರೂ, ತಲೆಮಾರುಗಳಿಂದ ಪಕ್ಕದೂರಿನ ಮುಸ್ಲಿಂ ಸಮುದಾಯದವರನ್ನು ಕರೆಸಿ ಈ ಗ್ರಾಮದಲ್ಲಿ ಮೊಹರಂ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.

WhatsApp Image 2025 07 16 at 11.00.38 AM

ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು. ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಒದ್ದಾಡಿ ಸತ್ತವು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇಂತಹ ಹಿನ್ನೆಲೆಯೊಂದಿಗೆ ಪ್ರಾರಂಭವಾದ ಈ ಮೊಹರಂ ಈಗ ಹಳ್ಳಿಗಳಲ್ಲಿ ಜಾತಿ, ಧರ್ಮ, ಲಿಂಗ, ಗಡಿಗಳ ಭೇದ ಮೀರಿ ಜಾತ್ಯತೀತವಾಗಿ ಸರ್ವಧರ್ಮಗಳ ಆಚರಣೆಯಾಗಿ ಮಾದರಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೂರು, ಐದು, ಏಳು, ಒಂಭತ್ತು ಅಥವಾ ಹನ್ನೊಂದು ದಿನಗಳ ಕಾಲ ಈ ಮೊಹರಂ ಆಚರಿಸುವ ವಾಡಿಕೆ ಇದೆ. ಬ್ರಹ್ಮದೇವರಹಳ್ಳಿಯಲ್ಲಿ ಐದು ದಿನಗಳ ಕಾಲ ನಡೆಯಿತು. ಮೊದಲನೇ ದಿನ ಗುದ್ದಲಿ ಪೂಜೆ ನೆರವೇರಿಸಿ ಐದನೇ ದಿನದವರೆಗೂ ಪ್ರತಿ ರಾತ್ರಿ ತಮಟೆ ಹೊಡೆಯುತ್ತಾ ಕುಣಿದು ಐದನೇ ದಿನ ರಾತ್ರಿ ಇಡೀ ಕುಣಿದು ಕುಪ್ಪಳಿಸಿ ಬೆಳಗಿನ ಜಾವದಲ್ಲಿ ಕೆಂಡ ತುಳಿದರು. ನಂತರ ಬಾಬಯ್ಯ ಮೂರ್ತಿಗಳನ್ನು ಊರಿನಲ್ಲಿ ಮೆರವಣಿಗೆ ಮಾಡಿ ಭಾನುವಾರ ವಿಸರ್ಜನೆ ಮಾಡಿದರು.

WhatsApp Image 2025 07 16 at 11.00.39 AM

ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ಮಧುಗಿರಿ ಭಾಗದಲ್ಲಿ ಗ್ರಾಮಸ್ಥರು ಹುಲಿ ವೇಷ ಹಾಕಿ, ಗೆಜ್ಜೆ, ನಡುಕಟ್ಟು, ಸೊಂಟಪಟ್ಟಿ, ತೋಳಪಟ್ಟಿ, ಕೀಲುಕುದುರೆ, ಕಿರೀಟ ತೊಟ್ಟು ಅಲಾಬಿ ಗುಂಡಿಯ ಸುತ್ತ ಹೆಜ್ಜೆ ಹಾಕುತ್ತಾರೆ. ರೈಬೋ ಡೂಯ್ಲೋ ಎನ್ನುವ ಪದಗಳ ಕೂಗುತ್ತಾ ಜಗ್ಗಿಣಕ್ಕ ಜಗ್ಗ ಎನ್ನುವ ಸದ್ದಿಗೆ ಹೆಜ್ಜೆ ಹಾಕುತ್ತಾ ಮೈಮರೆಯುತ್ತಾರೆ.

“ಇಂದು ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಎಂದು ಹೊಡೆದಾಡುವ ನಾವು ನಮ್ಮೂರಂತ‌‌ಹ‌ ಹಳ್ಳಿಗಳಿಂದ ನೋಡಿ ಕಲಿಯಬೇಕಾದದ್ದು ತುಂಬಾ ಇದೆ. ಧರ್ಮ ಧರ್ಮಗಳ ನಡುವೆ ಅಧರ್ಮದ ಕಿಡಿ‌ ಹತ್ತಿಸೋ ಕಿಡಿಗೇಡಿಗಳು ಒಮ್ಮೆ ಇಂತಹ ಹಳ್ಳಿಗಳ ಸಂಭ್ರಮ ಕಂಡಾದರೂ ಅಂತಹ ಕೆಲಸಕ್ಕೆ ಕೈ ಹಾಕುವುದು ಬಿಡುವಂತಾಗಲಿ. ನಾವು ಸರ್ವಧರ್ಮಗಳ ಆಚಾರ ವಿಚಾರ ಸಂಸ್ಕೃತಿ ಆಚರಣೆಯನ್ನು ನಾವೂ ಗೌರವಿಸಬೇಕು. ನಾವು ಚಿಕ್ಕ ವಯಸ್ಸಿನವರಿದ್ದಾಗಿನಿಂದಲೂ ಮೊಹರಂ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಯಾವುದೇ ಜಾತಿ ಧರ್ಮದ ಭೇದವಿಲ್ಲ. ಬಾಬಯ್ಯ ಹಬ್ಬವೆಂದರೆ ಸಡಗರ ಸಂಭ್ರಮ ಆ ತಮಟೆ ಸದ್ದಿಗೆ ಸ್ನೇಹಿತರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸುವ ಆನಂದ ಮತ್ತೆಲ್ಲಿ ಕಾಣಲಾರೆ” ಎನ್ನುತ್ತಾರೆ ಗ್ರಾಮದ ನಿವಾಸಿ ಕೆವಿಆರ್ ಕುಮಾರ್.

WhatsApp Image 2025 07 16 at 11.00.39 AM 1

“ನಮ್ಮ ತಾತ ಮುತ್ತಾತನವರು ತುಂಬಾ ವರ್ಷಗಳ ಹಿಂದೆ ಬಾಬಯ್ಯ ಮೂರ್ತಿಗಳನ್ನು ಹಬ್ಬದ ಸೇವೆಗಾಗಿ ನೀಡಿದ್ದಾರೆ. ಅವರು ನಡೆಸಿಕೊಂಡು ಬಂದ ಪರಂಪರೆಯ ಭಾಗವಾಗಿರುವ ಮೊಹರಂ ಹಬ್ಬವನ್ನು ನಾವೂ ಚಾಚೂ ತಪ್ಪದೇ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಮುಂದೆಯೂ ಹೀಗೆ ಇರುತ್ತೇವೆ. ಈ ಸಹೋದರತ್ವಕ್ಕೆ ಯಾವ ಧಾರ್ಮಿಕ ಬೇಲಿಯೂ ಬೇಕಿಲ್ಲ” ಎಂದರು ಈದಿನಕ್ಕೆ ಪ್ರತಿಕ್ರಿಯಿಸಿದ ಹರೀಶ್ ಬ್ರಹ್ಮದೇವರಹಳ್ಳಿ.

WhatsApp Image 2025 07 16 at 11.33.29 AM

ಮಾಜಿ ಗ್ರಾ.ಪಂ ಸದಸ್ಯ ಚಿಕ್ಕ ಓಬಳಪ್ಪ ಮಾತನಾಡಿ, “ನನ್ನ ಇಷ್ಟದ ಆಚರಣೆಗಳಲ್ಲಿ ಮೊಹರಂ ಕೂಡ ಒಂದು. ನಾನು ಚಿಕ್ಕ ವಯಸ್ಸಿನಿಂದಲೂ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಮುಂದಾಳತ್ವದಲ್ಲಿ ಸುಮಾರು ವರ್ಷಗಳಿಂದ ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದೇವೆ. ನನ್ನ ಜೀವ ಇರುವವರೆಗೂ ನಾನು ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಬಾಬಯ್ಯನ ಕಾರ್ಯ ಮಾಡುತ್ತೇನೆ” ಎಂದರು.

ಇದನ್ನೂ ಓದಿ: ಹಾವೇರಿ | ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ!

ಬ್ರಹ್ಮದೇವರಹಳ್ಳಿ ಗ್ರಾಮದ ಮೊಹರಂ ಆಚರಣೆ ಕೇವಲ ಧಾರ್ಮಿಕ ಆಚರಣೆಯಲ್ಲದೆ ಸಮಾಜದಲ್ಲಿ ಸಾಮರಸ್ಯ, ಪರಸ್ಪರ ಗೌರವ ಮತ್ತು ಮಾನವೀಯ ಮೌಲ್ಯಗಳ ಜೀವಂತ ಉದಾಹರಣೆಯಾಗಿದೆ. ಹಬ್ಬಗಳ ಹಿಂದಿನ ಸಾರ್ಥಕತೆ ಮಾನವನ ಹೃದಯವನ್ನು ಒಟ್ಟಿಗೆ ಸೇರುವಂತಾಗಬೇಕು ಎಂಬ ಸಂದೇಶವನ್ನು ಈ ಹಬ್ಬದ ಆಚರಣೆ ಸ್ಪಷ್ಟವಾಗಿ ಒರೆಯುತ್ತದೆ. ವಿಭಜನೆಯೆಡೆಗೆ ಮರುಳುತ್ತಿರುವ ಇಂದಿನ ಯುಗದಲ್ಲಿ ಇಂತಹ ಘಟನೆಗಳು ಬದುಕಿಗೆ ಶ್ರದ್ಧೆ, ಸಹಿಷ್ಣುತೆ ಮತ್ತು ಸಹಜೀವನದ ಬೆಳಕು ಮೂಡಿಸುತ್ತವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...