ಚಿಕ್ಕಬಳ್ಳಾಪುರ: ನಗರದ ಮುನಿಸಿಪಲ್ ಬಡಾವಣೆಯ ಮಸ್ಜಿದ್ ಎ ಅಕ್ಸಾ ನಲ್ಲಿ ಇತರೆ ಧರ್ಮದವರಿಗಾಗಿ ಮಸೀದಿ ದರ್ಶನ ಕಾರ್ಯಕ್ರಮವನ್ನು ಮಸೀದಿ ಸಮಿತಿ ವತಿಯಿಂದ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಬಡಾವಣೆಯ ವಿವಿಧ ಧರ್ಮಗಳಿಗೆ ಸೇರಿದ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಸೀದಿ ಪರಿಸರವನ್ನು ಸಮೀಪದಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಒಳಭಾಗ ಪ್ರಾರ್ಥನಾ ಸ್ಥಳ ವುದೂ ಮಾಡುವ ವಿಧಾನ ಹಾಗೂ ನಮಾಜ್ ನಡೆಯುವ ಕ್ರಮ ಸೇರಿದಂತೆ ಇಸ್ಲಾಂ ಧರ್ಮದ ಆಚರಣೆಗಳ ಕುರಿತು ಭಾಗವಹಿಸಿದವರಿಗೆ ವಿವರವಾಗಿ ಪರಿಚಯ ಮಾಡಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಸೀದಿಯ ಶಾಂತಿ ಹಾಗೂ ಸ್ವಚ್ಛ ವಾತಾವರಣವನ್ನು ಮೆಚ್ಚಿಕೊಂಡು,ಪ್ರಾರ್ಥನೆ ನಡೆಯುವ ಕ್ರಮವನ್ನು ವೀಕ್ಷಿಸಿದರು.
ಮಸೀದಿ ಗೋಡೆಗಳ ಮೇಲೆ ಅಂಟಿಸಲಾಗಿದ್ದ ಮಾನವೀಯತೆ,ಶಿಕ್ಷಣ,ಸಹೋದರತ್ವ,ಶಾಂತಿ ಹಾಗೂ ಸಮಾನತೆ ಕುರಿತ ಇಸ್ಲಾಮಿಕ್ ಸಂದೇಶಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಇಸ್ಲಾಂ ಧರ್ಮದ ಮೂಲ ತತ್ವಗಳು,ಮಾನವಕುಲಕ್ಕೆ ನೀಡಿರುವ ದೇವರ ಸಂದೇಶ ಮತ್ತು ಸಮಾಜದಲ್ಲಿ ಶಾಂತಿ–ಸೌಹಾರ್ದತೆಯ ಮಹತ್ವವನ್ನು ಅರಿತು ಸಂತೋಷ ವ್ಯಕ್ತಪಡಿಸಿದರು.
ಬಳಿಕ ಜಮಾತ್ ಇಸ್ಲಾಮಿ ಹಿಂದ್ ಬೆಂಗಳೂರು ಮೆಟ್ರೋ ಶೂರಾ ಸದಸ್ಯ ಡಾ.ಮಸೂದ್ ಶರೀಫ್ ಮಾತನಾಡಿ ಧರ್ಮಗಳ ನಡುವೆ ಪರಸ್ಪರ ಗೌರವ ಮಾನವೀಯ ಮೌಲ್ಯಗಳು ಮತ್ತು ಸಹೋದರತ್ವದ ಮಹತ್ವವನ್ನು ವಿವರಿಸಿದರು.ಯಾವ ವ್ಯಕ್ತಿಯೂ ತನ್ನ ಮಾತು ಕೈ ಅಥವಾ ನಡೆನುಡಿಗಳಿಂದ ಇತರರಿಗೆ ತೊಂದರೆ ಕೊಡಬಾರದು.ಹೀಗೆ ಮಾಡಿದರೆ ಅವನು ನಿಜವಾದ ಮುಸ್ಲಿಂ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.ಪ್ರವಾದಿ ಮುಹಮ್ಮದ್ (ಸ ಆ) ಅವರ ಸುನ್ನತ್ ಹಾಗೂ ಉಪದೇಶಗಳ ಬಗ್ಗೆ ವಿವರಿಸಿ,ಇಸ್ಲಾಂ ಸಹೋದರತ್ವ ಮತ್ತು ಒಳ್ಳೆಯ ಸಂಬಂಧಗಳನ್ನು ಬೆಳೆಸುವ ಧರ್ಮವಾಗಿದ್ದು,ನಾವೆಲ್ಲರೂ ಪರಸ್ಪರ ಪ್ರೀತಿಯಿಂದ ಬದುಕಿ ಭೇದಭಾವವನ್ನು ಮರೆತು ಆರೋಗ್ಯಕರ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಮಸೀದಿ ದರ್ಶನ ಕಾರ್ಯಕ್ರಮವು ಧರ್ಮಸೌಹಾರ್ದತೆಯನ್ನು ಬೆಳೆಸುವ ಅರ್ಥಪೂರ್ಣ ವೇದಿಕೆಯಾಗಿದ್ದು,ವಿವಿಧ ಧರ್ಮದ ಜನರು ಪರಸ್ಪರ ತಿಳಿದುಕೊಳ್ಳುವ ಮೂಲಕ ಸಮಾಜದಲ್ಲಿ ಸಹಬಾಳ್ವೆ ಹೆಚ್ಚಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಸ್ಜಿದ್ ಎ ಅಕ್ಸಾ ಸಮಿತಿ ಸದಸ್ಯ ರು ತಿಳಿಸಿದರು.
ಮುನಿಸಿಪಲ್ ಬಡಾವಣೆಯ ನಿವಾಸಿ ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶಿವರಾಮ ರೆಡ್ಡಿ ಮಾತನಾಡಿ ಮಸೀದಿ ದರ್ಶನ ಕಾರ್ಯಕ್ರಮವು ಭಾವೈಕ್ಯತೆ ಮತ್ತು ಸಮರಸ್ಯವನ್ನು ಬಲಪಡಿಸುವ ಮಹತ್ವದ ವೇದಿಕೆಯಾಗಿದ್ದು, ಎಲ್ಲ ಜನಾಂಗಗಳ ಒಳಿತಿಗಾಗಿ ಉತ್ತಮ ಪಾಠವನ್ನು ಕಲಿಸುತ್ತದೆ. ನಮ್ಮೊಳಗಿನ ಸಾಮರಸ್ಯ ಕದಡದಂತೆ ನಾವು ಮುನ್ನಡೆಯಬೇಕು. ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಗುತ್ತದೆ. ಯಾವುದೇ ಧರ್ಮವೂ ಮನುಷ್ಯರ ನಡುವೆ ವಿಷಬೀಜ ಬಿತ್ತುವುದಿಲ್ಲ ಎಂಬುದಕ್ಕೆ ಈ ಮಸೀದಿ ದರ್ಶನವೇ ನಿಜವಾದ ಸಾಕ್ಷಿಯಾಗಿದೆ. ಎಲ್ಲರೂ ಸಹೋದರ ಭಾವನೆಯೊಂದಿಗೆ ಬದುಕಬೇಕು ಎಂದರು.
ಇದನ್ನು ಓದಿದ್ದೀರಾ..? ಸುಗಟೂರಿನ ಗೋ.ನಾ ಸ್ವಾಮಿ ಯಿಂದ ಬ್ಯಾಂಕಾಕ್ ನಲ್ಲಿ ಯುಗಾದಿ ವಸಂತೋತ್ಸವ ಕಾರ್ಯಕ್ರಮ
ಈ ಸಂದರ್ಭದಲ್ಲಿ ಜಮಾತ್ ಇಸ್ಲಾಮಿ ಹಿಂದ್ ನ ರುಹುಲ್ಲ, ಮಸ್ಜಿದ್ ಎ ಅಕ್ಸಾ ಸಮಿತಿ ಅಧ್ಯಕ್ಷ ಅಬ್ದುಲ್ ಮುಜೀಬ್,ಕಾರ್ಯದರ್ಶಿ ಮುಬಾರಕ್, ಉಪಾಧ್ಯಕ್ಷ ಸೈಯದ್ ನಜೀರ್,ಜಂಟಿ ಕಾರ್ಯದರ್ಶಿ ಶಮ್ಸ್ ತಬರೇಜ್,ಖಜಾಂಚಿ ಅಬ್ದುಲ್ ಅಲೀಂ,ಮಾಡ್ರನ್ ಶಿವಕುಮಾರ್,ಸೇರಿದಂತೆ ಇತರರು ಉಪಸ್ಥಿತರಿದ್ದರು.





