ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾಮಟ್ಟದಲ್ಲಿ ಡಿಸೆಂಬರ್ 3 ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ, ವ್ಯವಸ್ಥಿತಿ ರೀತಿಯಲ್ಲಿ ಆಚರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಅಪರ
ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವೀಡಿಯೋ ಕಾನ್ಫ್ರೆನ್ಸ್ ಕೊಠಡಿಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲಾಮಟ್ಟದಲ್ಲಿ ಡಿಸೆಂಬರ್ 3 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಪುರಭವನದಲ್ಲಿ ಪ್ರಸಕ್ತ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು. ಸಭಾ ಕಾರ್ಯಕ್ರಮಕ್ಕೂ ಮುನ್ನ ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದ ಅವರು, ಸಮಾರಂಭದ ದಿನ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಮಕ್ಕಳನ್ನು ಹಾಗೂ ವಿಕಲಚೇತನರನ್ನು ಕರೆತರುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳು ಕ್ರಮವಹಿಸಬೇಕು ಎಂದರು. ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಹಾಗೂ ಇತರೆ ವಿಕಲಚೇತನರಿಗೆ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಿಸುವುದರೊಂದಿಗೆ ವಿಜೇತರುಗಳಿಗೆ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಬೇಕು, ಪ್ರತೀ ತಾಲೂಕಿನಿಂದ ಒಂದು ತಂಡ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಪ್ರದರ್ಶನ ನೀಡುವಂತೆ ಕ್ರಮವಹಿಸಬೇಕು ಎಂದರು.
ಕಾರ್ಯಕ್ರಮದ ದಿನದಂದು ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ಸ್ವಚ್ಛತೆಗೆ ಕ್ರಮವಹಿಸಬೇಕು. ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಹ ಆಯೋಜಿಸಬೇಕು ಎಂದ ಅವರು, ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳನ್ನು ಹಾಗೂ ವ್ಯಕ್ತಿಗಳನ್ನು ಗೌರವಿಸಿ, ಸನ್ಮಾನಿಸಲಾಗುವುದು ಎಂದರು. ನವೆಂಬರ್ 25 ರಿಂದ ಡಿಸೆಂಬರ್ 01 ರ ವರೆಗೆ 21 ಬಗೆಯ ಅಂಗವಿಕಲತೆಯೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಡಿ.ಡಿ.ಆರ್.ಸಿ ಕೇಂದ್ರ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆ ಹಾಗೂ ಎಂ.ಆರ್.ಡಬ್ಲೂ ರವರ ಸಹಯೋಗದೊಂದಿಗೆ ವಿಕಲಚೇತನರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಈ ವೇಳೆ ವಿಶೇಷಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವಲ್ಲಿ ವಿಶೇಷ ಕ್ರಮ ವಹಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ, ಗಣ್ಯರನ್ನು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ವಿಶೇಷಚೇತನರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ವ್ಯಾಪಕ ಪ್ರಚಾರ ನೀಡುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಸೆಟ್ಟಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಲತಾ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ವಿಕಲಚೇತನರ ಸ್ವಯಂಸೇವಾ ಸಂಸ್ಥೆಗಳ ಹಾಗೂ ಪುನರ್ವಸತಿ ಕೇಂದ್ರಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.





