ಮೈಸೂರಿನ ಭೋಗಾದಿಯಲ್ಲಿರುವ ಬನವಾಸಿ ತೋಟದಲ್ಲಿ ಎರಡು ದಿನಗಳ ‘ಅರಿವಿನ ಚಾವಡಿ’ ಶಿಬಿರದಲ್ಲಿ ಮಾತನಾಡಿದ ದಸಂಸ ಹಿರಿಯ ಮುಖಂಡರಾದ ಹೆಚ್.ಎಂ. ರುದ್ರಸ್ವಾಮಿ, ‘ಅಂದಿನ ಕಾಲಘಟ್ಟದಲ್ಲಿ ಅಸ್ಪೃಶ್ಯತೆ-ತಾರತಮ್ಯದ ವಿರುದ್ಧ, ರಾಜಕೀಯ-ಸಾಂಸ್ಕೃತಿಕ ಸಂವೇದನೆ ಮೂಡಿಸಿದ್ದು ದಲಿತ ಸಂಘರ್ಷ ಸಮಿತಿ ಎಂದರು.
1974ರಲ್ಲಿ ಪ್ರೊ. ಬಿ. ಕೃಷ್ಣಪ್ಪನವರ ಮುಂದಾಳತ್ವದಲ್ಲಿ ಶಿವಮೊಗ್ಗ ಜಿಲ್ಲೆಯ, ಭದ್ರಾವತಿಯಲ್ಲಿ ದಸಂಸ ಅಸ್ತಿತ್ವಕ್ಕೆ ಬಂದಿತು.ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಪರಿಶಿಷ್ಟ ಜಾತಿ ಕಾರ್ಮಿಕರಿಗೆ ಕಾಫಿ ನೀಡುವಾಗ ಎದುರಿಸಿದ ತಾರತಮ್ಯ ಮನಗಂಡು ಅಂದು ಅಸ್ಪೃಶ್ಯತೆ ವಿರೋಧಿ ಹೋರಾಟಗಳು ರೂಪುಗೊಂಡವು. ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಗಿ ಇದಿಲ್ಲಿಗೆ 50 ವರ್ಷಗಳೇ ಸಂದಿವೆ.
“ದಸಂಸ ಶೋಷಿತರ ಧನಿಯಾಗಿ ಸಾಹಿತ್ಯ, ಬೀದಿ ನಾಟಕಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿತು. ಅಂದು ಪ್ರಮುಖರಾಗಿ ಸಿದ್ದಲಿಂಗಯ್ಯ, ದೇವನೂರು ಮಹಾದೇವ ಮುಂದಾಳುಗಳಾಗಿ ಚಿಂತನೆಗಳನ್ನು ಬಿತ್ತಿದರು. ಹೆಗಲಿಗೆ ಹೆಗಲುಕೊಟ್ಟು ಸಂಘಟನೆ ಕಟ್ಟಿದವರು ಇಂಧೂಧರ ಹೊನ್ನಾಪುರ, ಕೋಟಿಗಾನಹಳ್ಳಿ ರಾಮಯ್ಯ, ಎಚ್. ಗೋವಿಂದಪ್ಪ, ಗಂಗಮ್ಮ, ಹರವೆ ದೇವಯ್ಯ, ಕೆಂಪಯ್ಯ, ಶ್ರೀಧರ ಕಲಿವೀರ ಮುಂತಾದವರು. ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿ, ಅಂಬೇಡ್ಕರ್ ಚಿಂತನೆಗಳಿಂದ ಸ್ಫೂರ್ತಿ ಪಡೆದು ಹೋರಾಟ ಆರಂಭಿಸಿತು. ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿದ್ದ ಎಂ.ಡಿ. ಗಂಗಯ್ಯ 1979ರಲ್ಲಿ ಆಲ್ದೂರು ಹೋಬಳಿಯ ಚಂಡಗೋಡು ಭೂ ಹೋರಾಟದ ಮೂಲಕ 300 ಎಕರೆ ಭೂಮಿಯನ್ನು ದಲಿತರಿಗೆ ಸಿಗುವಂತೆ” ಮಾಡಿದ್ದು.
“ದಸಂಸ ಹೋರಾಟದ ಫಲವಾಗಿ, ಅಂದು ಕಂದಾಯ ಮಂತ್ರಿಗಳಾಗಿದ್ದ ಬಿ. ಬಸವಲಿಂಗಪ್ಪ ಅವರ ಇಚ್ಛಾಶಕ್ತಿಯಿಂದ 1975ರಲ್ಲಿ
ದಲಿತರ ಭೂಮಿ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಯನ್ನು ಜಾರಿಗೊಳಿಸಿತು. 1983ರಲ್ಲಿ ಮೈಸೂರು ಜಿಲ್ಲೆ, ಹೆಗ್ಗಡದೇವನಕೊಟೆ ತಾಲ್ಲೂಕಿನ ದೇವಲಾಪುರ ಭೂ ಹೋರಾಟದಿಂದ ದಲಿತರಿಗೆ ಭೂಮಿ ಸಿಗುವಂತಾಯಿತು. 1986ರಲ್ಲಿ ಶಿವಮೊಗ್ಗ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯಲ್ಲಿನ ಭೂ ಹೋರಾಟ ದಲಿತರಷ್ಟೇ ಅಲ್ಲದೇ ಬೇರೆ ಬೇರೆ ಭೂ ರಹಿತ ಸಮುದಾಯಗಳಿಗೆ ಸರಿಸುಮಾರು 2,500 ಎಕರೆ ಭೂಮಿ ಸಿಗುವಂತಾಯಿತು”.

1980ರಲ್ಲಿ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಹುಣಸೆಕೋಟೆ ಗ್ರಾಮದ ಕೃಷ್ಣೆಗೌಡ ಆತನ ಸಹೋದರರು ಕುಂಬಾರ ಸಮುದಾಯದ ಶೇಷಗಿರಿಯಪ್ಪನನ್ನು ಕೊಂದು, ಆತನ ವಿಧವೆ ಮಗಳಾದ ಅನಸೂಯಳನ್ನು ಅತ್ಯಾಚಾರ ಮಾಡಿದನ್ನು ಖಂಡಿಸಿ ಹುಣಸೆಕೋಟೆಯಿಂದ ಬೆಂಗಳೂರು ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿತು.
ಕುದುರೆ ಮೋತಿ ಪ್ರಕರಣ, ಬೆಲ್ಚಿ ಪ್ರಕರಣ, ಕಾರಂಜೇಡು ಪ್ರಕರಣ, ಮತಾಂತರ ಪ್ರಕರಣ, ಮೀಸಲಾತಿ ಹೋರಾಟ, ಚಂದ್ರಗುತ್ತಿ ಬೆತ್ತಲೆಸೇವೆ, ಚುನಾವಣಾ ಬಹಿಷ್ಕಾರ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಾಜಮುಖಿಯಾಗಿ ಬಹಳಷ್ಟು ಹೋರಾಟಗಳನ್ನು ದಲಿತ ಸಂಘರ್ಷ ಸಮಿತಿ ನಡೆಸಿಕೊಂಡು ಬಂದಿದೆ. ನಮ್ಮಲ್ಲಿ ನಮ್ಮವರೇ ದೌರ್ಜನ್ಯ ನಡೆಸುವಾಗ ಹೋರಾಟ ಸಂಘಟಿಸುವುದು ಅಷ್ಟು ಸುಲಭದ ಮಾತಲ್ಲ. ಯಾವುದೇ ಮಡಿ, ಮೈಲಿಗೆ ಇರದೆ ಎಲ್ಲರ ಅಭ್ಯುದಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ದಸಂಸ ಹೋರಾಟ ನಿಂತ ನೀರಲ್ಲ. ಐತಿಹಾಸಕ ಹೋರಾಟ ಕಂಡಿದೆ. ಸಾಮಾಜಿಕ ಆಂದೋಲನಗಳ ಮೇಲೆ ಪ್ರಭಾವ ಬೀರಿದೆ.
ಅಸಮಾನತೆಯನ್ನ ತೊಡೆದುಹಾಕಲು, ಜಾತಿಯ ಕಾರಣಕ್ಕಾಗಿ ಶೋಷಣೆಗೆ ಒಳಗಾದ ದಲಿತರ ಬದುಕಿಗಾಗಿ, ನೆಲೆಗಾಗಿ, ಆತ್ಮಗೌರವಕ್ಕಾಗಿ ಹೋರಾಟ ನಡೆಸಿದ ದಸಂಸ ಬಣಗಳಾಗಿದ್ದು ವಿಪರ್ಯಾಸ. ವಿಭಜನೆ ಇರದ ಆಂದೋಲನಗಳು ಇಲ್ಲವೇ ಇಲ್ಲ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ರೈತ ಹೋರಾಟದವರೆಗೂ ಹಲವು ಹೋರಾಟಗಳು ವಿಭಜನೆಗೊಂಡಿವೆ. ಅದು ತಾತ್ಕಾಲಿಕ ಹಿನ್ನಡೆಯಾಗಿರುತ್ತದೆ. ಆದರೇ, ಹೋರಾಟದ ಕಿಚ್ಚು ಇನ್ನೂ ನಂದಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಲೋಚನೆಗಳ ಮೇಲೆ ಪ್ರಭಾವ ಬೀರುವುದು, ಬದುಕಿನ ಮೇಲೆ ಪ್ರಭಾವಿಸುವ ಕೆಲಸ ಸಾಂಸ್ಕೃತಿಕ ಹೋರಾಟ: ರಹಮತ್ ತರೀಕೆರೆ
ವೇದಿಕೆಯಲ್ಲಿದ್ದ ಮೈಸೂರು ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್ ಪ್ರತಿಕ್ರಿಯೆ ನೀಡುವುದರ ಮೂಲಕ ಚಳವಳಿ ಮೇಲಿನ ತಪ್ಪುಗ್ರಹಿಕೆ ಸರಿಯಬೇಕು, ದಸಂಸ ಹೋರಾಟಗಳನ್ನು ಇತಿಹಾಸದಲ್ಲಿ ದಾಖಲಿಸುವಲ್ಲಿ ವಿಫಲವಾಗಿದೆ. ಮುಂದೆಯಾದರು ಬರಹದ ಮೂಲಕ ದಾಖಲು ಮಾಡಬೇಕು. ಅಂತಹ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭಗೊಂಡಿವೆ. ದಸಂಸ ಬಣಗಳಾಗಿ ಸ್ವಲ್ಪ ಹೋರಾಟ ಹಿಂದುಳಿದಿರಬಹುದು, ಹೋರಾಟ ಕಳೆಗುಂದಿರಬಹುದು, ಆದರೇ, ಹೋರಾಟ ನಿರಂತರವಾಗಿ, ಸಕ್ರಿಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





