ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದ ಕಾಂಗ್ರೆಸ್ ಪಕ್ಷದ ಕ್ರೀಯಾಶೀಲ ಕಾರ್ಯಕರ್ತ, ಗ್ರಾಮ ಪಂಚಾಯತ್ ಸದಸ್ಯ, ಸುಮಾರು 35 ವರ್ಷದ ಗಣೇಶ್ ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಅಜಿತ್ ಶೆಟ್ಟಿ ಅವರು ಕಟುವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ನಡೆದ ಈ ಕ್ರೂರ ಹತ್ಯೆಯಲ್ಲಿ ಬಜರಂಗದಳ, ವಿಶ್ವ ಹಿಂದು ಪರಿಷತ್ ಹಾಗೂ ಬಿಜೆಪಿಯ ಕಾರ್ಯಕರ್ತರೇ ನೇರವಾಗಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದ್ದು, ಈಗಾಗಲೇ ದಕ್ಷ ಪೊಲೀಸ್ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರು ಮಂದಿ ಆರೋಪಿಗಳು ಬಿಜೆಪಿ ಮತ್ತು ಬಜರಂಗದಳದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎಂಬುದು ಗಂಭೀರ ವಿಷಯ ಎಂದು ಅವರು ಹೇಳಿದರು.
ಹಿಂದು ರಕ್ಷಣೆಯ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿರುವವರು, ಒಬ್ಬ ನಿಷ್ಠಾವಂತ ಹಿಂದು ಯುವಕನನ್ನೇ ಹತ್ಯೆ ಮಾಡುವ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು, ಎಂದು ಅಜಿತ್ ಶೆಟ್ಟಿ ಹೇಳಿದ್ದಾರೆ. ಗಣೇಶ್ ಗೌಡ ಪ್ರತಿ ವರ್ಷ ಶಬರಿಮಲೆಯ ಯಾತ್ರೆಗೆ ತೆರಳುತ್ತಿದ್ದರು, ದತ್ತಪೀಠದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದರು, ಪ್ರತಿದಿನ ತಿಲಕವಿಟ್ಟು ಮನೆಬಿಟ್ಟು ಹೊರಡುವ ಭಕ್ತನಾಗಿದ್ದರು ಎಂಬ ವಿಷಯವನ್ನು ಉಲ್ಲೇಖಿಸಿ ಇಂತಹ ಹಿಂದುವನ್ನು ಕೊಲ್ಲುವವರು ಹಿಂದು ರಕ್ಷಕರು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿಂದೂಗಳು ನಿಮಗೆ ಹಿಂದುಗಳಲ್ಲವೇ? ಮತಗಳಿಗಾಗಿ ಮಾತ್ರ ಹಿಂದುತ್ವದ ರಾಜಕೀಯ ಮಾಡುತ್ತೀರಾ? ಎಂದು ಬಿಜೆಪಿ ನಾಯಕತ್ವದ ಮೇಲೂ ಗಂಭೀರ ಆರೋಪ ಹೊರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಬಜರಂಗದಳದ ರಾಜ್ಯಾಧ್ಯಕ್ಷರಿಂದ ಸ್ಪಷ್ಟನೆ ಕೇಳಿದ್ದು, ಎರಡು ಬಾರಿ ಸಂಸದೆ ಆಗಿರುವ ಶೋಭಾ ಕರಂದ್ಲಾಜೆ ಅವರ ಮೌನವೂ ಅಪರಾಧದಷ್ಟೇ ಗಂಭೀರ ಎಂದು ಅವರು ಟೀಕಿಸಿದರು. ಘಟನೆಯ ನಂತರವು ಮೃತ ಕುಟುಂಬಕ್ಕೆ ಸಾಂತ್ವಾನ ನೀಡಲು ಒಬ್ಬರೂ ಬಿಜೆಪಿ ನಾಯಕರು ಮುಂದೆ ಬಾರದಿರುವುದನ್ನು ಖಂಡಿಸಿದರು.
ಅಜಿತ್ ಶೆಟ್ಟಿ ಅವರು ರಾಜ್ಯ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ, ಸರ್ಕಾರ ಗಣೇಶ್ ಗೌಡ ಹತ್ಯೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಈ ಕೃತ್ಯದ ಹಿಂದೆ ನಿಂತಿರುವ ಸಂಘಟನೆಯನ್ನು ತಕ್ಷಣವೇ ನಿಷೇಧಿಸಬೇಕು. ಕೊಲೆ ಮಾಡುವ ಯಾವುದೇ ಅದು ಹಿಂದು ಸಂಘಟನೆ ಆಗಲಿ, ಮುಸ್ಲಿಂ ಸಂಘಟನೆ ಆಗಲಿ ಅಂತಹ ಸಂಘಟನೆ ದೇಶದ ಒಳಗಿನ ಆಂತರಿಕ ಭಯೋತ್ಪಾದಕ ಎಂಬ ನಿಲುವನ್ನು ಸರ್ಕಾರ ಸ್ವೀಕರಿಸಬೇಕು. ಪ್ರಕರಣಕ್ಕೆ ವಿಶೇಷ ಕಾನೂನು ಜಾರಿಗೊಳಿಸಿ, ತಪ್ಪಿತಸ್ತರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮೃತ ಗಣೇಶ್ ಗೌಡ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಕಾರ್ಯಕರ್ತರೇ ಪಕ್ಷದ ಜೀವಾಳ, ಅವರ ರಕ್ಷಣೆ ಸರ್ಕಾರದ ಹೊಣೆ. ಗಣೇಶ್ ಗೌಡಕ್ಕೆ ನ್ಯಾಯ ಕೊಡುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ, ಮಾನವೀಯ ಜವಾಬ್ದಾರಿಯೂ ಹೌದು ಎಂದು ಅಜಿತ್ ಶೆಟ್ಟಿ ಹೇಳಿದ್ದಾರೆ.





