ಉಡುಪಿ | ಅಕ್ಷತಾ ಪೂಜಾರಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ, ಪೊಲೀಸರ ವಿರುದ್ಧ ಎಫ್‌ಐಆರ್ !

Date:

ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ಷತಾ ಪೂಜಾರಿ ಎಂಬ ಯುವತಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಬಿಲ್ಲವ ಸಮಾಜದ ಸದಸ್ಯರು ಮತ್ತು ಇತರೇ ಸಂಘ ಸಂಸ್ಥೆಯ ಮುಖಂಡರು ಒಳಗೊಂಡಂತೆ ಇಂದು ಬ್ರಹ್ಮಾವರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.

WhatsApp Image 2025 12 17 at 7.58.39 PM 2

ಪೊಲೀಸರು ಅಕ್ಷತಾ ಪೂಜಾರಿ ಮೇಲೆ ದೌರ್ಜನ್ಯ ಎಸಗಿದ್ದು, ಆಕೆಯ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆ ಈಡೇರದಿದ್ದರೆ ಠಾಣೆಯ ಮುಂಭಾಗದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಸ್ಥಳದಲ್ಲಿ ಹಾಜರಿದ್ದ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಹಾಗೂ ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು ಈಗಾಗಲೇ ಎಸ್ಪಿ ಈ ಬಗ್ಗೆ ಕ್ರಮ ಜರಗಿಸಿರುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.

WhatsApp Image 2025 12 17 at 7.58.39 PM 1

ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಅಕ್ಷತಾಳಿಗೆ ಪೋಲಿಸರಿಂದ ದೌರ್ಜನ್ಯ ಆಗಿದ್ದರೇ, ಉಡುಪಿ ಜಿಲ್ಲಾ ಪೋಲಿಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಲು ಮನವಿ ಮಾಡಿದರು. ಈ ಪ್ರಾಧಿಕಾರದ ಮೂಲಕ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಆದರೆ ಇದಕ್ಕೂ ಪ್ರತಿಭಟನಾಕಾರರು ಒಪ್ಪದೆ ತಮ್ಮ ಪಟ್ಟನ್ನು ಮುಂದುವರೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 12 17 at 9.50.58 PM

ಮಧ್ಯಾಹ್ನ ಆರಂಭಗೊಂಡ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ತಮ್ಮ ಪಟ್ಟು ಸಡಿಲಿಸದೆ ಸಂಜೆ 7.30ರವರೆಗೆ ಮುಂದುವರೆಸಿದರು. ಪರಿಸ್ಥಿತಿ ತೀವ್ರ ಗೊಳ್ಳುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಠಾಣಾ ಆವರಣದಲ್ಲಿ ನಿಯೋಜಿಸಲಾಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಠಾಣೆಗೆ ಆಗಮಿಸಿ ಮಾತಿಕತೆ ನಡೆಸಿ, ಕೊನೆಗೂ ಪ್ರತಿಭಟನಾಕಾರರ ಒತ್ತಡದ ಹಿನ್ನೆಲೆಯಲ್ಲಿ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಾಡಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ, ಇಂದು ಜಾತಿ–ಪಕ್ಷ ಭೇದವನ್ನು ಮರೆತು ಒಂದು ಹೆಣ್ಣುಮಗಳಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ, ಅವಳಿಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಭಾಗಗಳಿಂದ ಸಂಘ–ಸಂಸ್ಥೆಗಳವರು ಸೇರಿ ಹೋರಾಟ ನಡೆಸಿದ್ದೇವೆ.

ಈ ಹಿಂದೆ ಕೂಡ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಇಂದು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಮ್ಮ ಹೋರಾಟದ ವಿಷಯ ಗಮನಕ್ಕೆ ಬಂದಿದ್ದು, ಅದರ ಫಲವಾಗಿ ಒಂದು ಮಟ್ಟಿಗೆ ನ್ಯಾಯ ದೊರೆತಿದೆ. ಅಕ್ಷತಾ ಪೂಜಾರಿ ಅವರು ನೀಡಿದ ಹೇಳಿಕೆಯ ಪ್ರಕಾರ, ಪ್ರಕರಣ ದಾಖಲಾಗಿದೆ. ನಾವು ಇಂದು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ ಎಂಬುದು ಸತ್ಯ. ಆದರೆ ಎಲ್ಲಾ ಪೊಲೀಸರು ಒಂದೇ ರೀತಿಯವರಲ್ಲ. ಕೆಲವರು ತಪ್ಪು ಮಾಡುತ್ತಾರೆ, ಆದರೆ ಬಹುತೇಕ ಪೊಲೀಸ್ ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾರೋ ಕೆಲವರು ಮಾಡಿದ ತಪ್ಪಿಗೆ ಮೇಲಾಧಿಕಾರಿಯನ್ನು ಬಲಿಪಶು ಮಾಡಲಾಗದು. ಅಂದು ಘಟನಾ ಸ್ಥಳಕ್ಕೆ ತೆರಳಿದವರು ಅಕ್ರಮವಾಗಿ ವರ್ತಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು. ಸುಳ್ಳು ಪ್ರಕರಣಗಳನ್ನು ದಾಖಲಿಸುವಂತಹ ಘಟನೆಗಳು ನಡೆಯಬಾರದು. ನಮ್ಮ ಜಿಲ್ಲೆಯಲ್ಲಿ ಇಂತಹ ಹಲವಾರು ಪ್ರಕರಣಗಳು ನಡೆದಿವೆ. ನ್ಯಾಯ ಕೇಳಿ ಬಂದವರಿಗೆ ನ್ಯಾಯ ಸಿಗಬೇಕು. ಈ ಹೋರಾಟದ ಮೂಲಕ ನಮಗೆ ಇಂದು ಒಂದು ಜಯ ದೊರೆತಿದೆ ಎಂದು ಹೇಳಿದರು.

WhatsApp Image 2025 12 17 at 9.50.57 PM

ಏನಿದು ಪ್ರಕರಣ?
ಈ ಪ್ರಕರಣವು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಆಶಿಕ್ ಎಂಬಾತನ ಶೋಧಕ್ಕೆಂದು ಅಕ್ಷತಾ ಪೂಜಾರಿ ಅವರ ಮನೆಗೆ ಬಂದ ಪೊಲೀಸರು, ಮನೆಮಂದಿಯ ಎದುರಲ್ಲೇ ಅಕ್ಷತಾಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾನೂನು ಪ್ರಕಾರ ಬಂಧನ ಅಥವಾ ಶೋಧ ಕಾರ್ಯಾಚರಣೆ ನಡೆಸಬೇಕಿದ್ದ ಪೊಲೀಸರು, ಕೋರ್ಟ್ ಅಮೀನರನ್ನು ಕರೆತರದೆ ಕಾನೂನು ಬಾಹಿರವಾಗಿ ದಾಳಿ ನಡೆಸಿದ್ದಾರೆ ಎಂದು ಕುಟುಂಬ ಹಾಗೂ ಸಮುದಾಯದವರು ಆರೋಪಿಸಿದ್ದರು.

ಘಟನೆಯ ಬಳಿಕ ಅಕ್ಷತಾ ಪೂಜಾರಿ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಆರಂಭದಲ್ಲಿ ಯಾವುದೇ ಎಫ್‌ಐಆರ್ ದಾಖಲಿಸದಿರುವುದು ಬಿಲ್ಲವ ಸಂಘಟನೆಗಳನ್ನು ಕೆರಳಿಸಿತು. ತಮ್ಮ ಸಮುದಾಯದ ಯುವತಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಬಿಲ್ಲವ ಮುಖಂಡರು, ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, “ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲಾಗುವುದು. ದೂರು ಸಂಬಂಧವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದ್ದರು.

ಇದಕ್ಕೂ ಮೊದಲು ಅಕ್ಷತಾ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವ ಪೊಲೀಸರ ನಡೆ ಪ್ರಶ್ನಾರ್ಹವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾನೂನು ಪ್ರಕಾರ ಆರೋಪಿಯನ್ನು ಬಂಧಿಸುವ ಬದಲಾಗಿ, ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳೆಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಅವರು ಹೇಳಿದರು.

WhatsApp Image 2025 12 17 at 7.58.38 PM

ಹೋರಾಟಕ್ಕೆ ಬಿಲ್ಲವ ಸಮಾಜ ಸಜ್ಜು
ಪ್ರಕರಣ ಬೆಳಕಿಗೆ ಬಂದ ನಂತರ ಬಿಲ್ಲವ ಸಮಾಜದ ಮುಖಂಡರು ಹಾಗೂ ಸಂಘಟನೆಗಳು ಸಭೆಗಳನ್ನು ನಡೆಸಿ, ಅಕ್ಷತಾ ಪೂಜಾರಿ ಪರ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದರು. ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಅಕ್ಷತಾ ನೀಡಿರುವ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಬೇಕು ಹಾಗೂ ಅಕ್ಷತಾ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿತ್ತು.

ಬ್ರಹ್ಮಾವರ ಘಟನೆಗೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿ ಪತ್ರಿಕಾ ಪ್ರಕಟಣೆ

ದಿನಾಂಕ: 09/12/2025ಕ್ಕೆ ಆರೋಪಿ ಆಶಿಕ್‌ ಎನ್ನುವವರ ವಿರುಧ್ದ ಕೋರ್ಟ್‌ನಿಂದ 2014ರಲ್ಲಿ ನಡೆದ ಒಂದು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟ ಸಜೆ ಆಗಿ, ಇದರ ಬಗ್ಗೆ 20 ಲಕ್ಷ ಹಾಗೂ ಅದರ ಬಡ್ಡಿಯನ್ನು ನ್ಯಾಯಾಲಯಕ್ಕೆ ಜಮಾ ಮಾಡುವ ಕುರಿತು ನ್ಯಾಯಾಲಯದ ತೀರ್ಪು ಬಂದಿರುತ್ತದೆ. ಆರೋಪಿ ಆಶಿಕ್‌ರವರು ನ್ಯಾಯಾಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಕಟ್ಟದೇ ಇರುವುದರಿಂದ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ದಸ್ತಗಿರಿ ಮಾಡಿ PCJ & CJM ನ್ಯಾಯಾಲಯ, ಉಡುಪಿ ಇದರ ಮುಂದೆ ದಿನಾಂಕ 17/12/2025ರ ಒಳಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್‌ ಠಾಣೆಗೆ ಸೂಚನಾ ಪತ್ರ ಹೊರಡಿಸಿ ಆದೇಶ ಮಾಡಿರುತ್ತದೆ.

WhatsApp Image 2025 12 17 at 7.58.37 PM 1

ಈ ಬಗ್ಗೆ ನ್ಯಾಯಾಲಯದ ಸೂಚನಾ ಪತ್ರದಂತೆ ವಾರಂಟು ಜ್ಯಾರಿ ಮಾಡುವ ಕುರಿತು, ಮಲ್ಪೆ ಪೊಲೀಸ್‌ ಠಾಣಾ ಸಿಬ್ಬಂಧಿಯವರು ಬ್ರಹ್ಮಾವರದ ಮನೆಯಲ್ಲಿ ಜ್ಯಾರಿ ಮಾಡಲು ತೆರಳಿರುತ್ತಾರೆ. ಈ ಸಂದರ್ಭದಲ್ಲಿ ಆ ಮನೆಯಲ್ಲಿನ ಇಬ್ಬರು ಮಹಿಳೆಯು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರುಗಳು ಆ ದಿನದ ಘಟನೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದುದರಿಂದ ಸಧ್ಯಕ್ಕೆ ಈ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ಈ ಪ್ರಕರಣದ ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ವರ್ಗಾಯಿಸಿ, ಸೂಕ್ತವಾದ ತನಿಖಾಧಿಕಾರಿಗೆ ವರ್ಗಾಯಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ.

ಅದಲ್ಲದೇ ಸಂತ್ರಸ್ಥ ಮಹಿಳೆಯರು ಇಲಾಖಾ ಸಿಬ್ಬಂಧಿಗಳ ಮೇಲೆ ಮಾಡಿರುವಂತಹ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ಪಡಿಸಿ, ಲೋಪಗಳು ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ದರಿಸಿದ್ದೇನೆ. ಈ ಘಟನೆ ಸಂಬಂಧಪಟ್ಟಂತೆ ನ್ಯಾಯ ಒದಗಿಸಬೇಕಾದ ಹಿತದೃಷ್ಠಿಯಿಂದ ಈ ನಿರ್ಧಾರವನ್ನು ಕೈಗೊಂಡಿರುತ್ತೇನೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದು ಈ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿತ್ತು.

ಅಗಹಹಜ

ಅಕ್ಷತಾ ಪೂಜಾರಿಗೆ ಸಾಂತ್ವನ ಹೇಳಿದ ಮಂಜುನಾಥ ಪೂಜಾರಿ ಮುದ್ರಾಡಿ
ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಕುಮಾರಿ ಅಕ್ಷತಾ ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುವ ಹಿನ್ನೆಲೆಯಲ್ಲಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಅಕ್ಷತಾ ಅವರ ತಾಯಿಗೆ ಧೈರ್ಯ ತುಂಬಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಅಕ್ಷತಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಪ್ರಕರಣದ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ಅಧಿಕಾರ ದುರುಪಯೋಗ ಎಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಂಜುನಾಥ ಪೂಜಾರಿ ಮುದ್ರಾಡಿ ತಿಳಿಸಿದರು.

ಯಾರು ಈ ಆರೋಪಿ ಆಶೀಕ್‌ ?
2014ರ ಬೈಕ್ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಧೇವೇಂದ್ರ ಸುವರ್ಣರಿಗೆ, ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು 11 ವರ್ಷಗಳಾದರೂ ಆರೋಪಿಗಳು ನೀಡಿಲ್ಲ. ಮಲ್ಪೆ ಠಾಣೆ ಪ್ರಕರಣದ ಆರೋಪಿಗಳಾದ ಆಶಿಕ್ ಬಿನ್ ಅಶೋಕ್ ಮತ್ತು ವಾಹನ ಮಾಲೀಕ ಸುಬೋಧ ಶೆಟ್ಟಿ ವಿರುದ್ಧ ನ್ಯಾಯಾಲಯ ದಸ್ತಗಿರಿ ವಾರೆಂಟ್ ಜಾರಿಗೊಳಿಸಿದರೂ, ಅವರು ಪರಾರಿಯಾಗಿದ್ದು ಕುಟುಂಬಸ್ಥರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಇದೆ. ಕೋರ್ಟ್ ಅಮೀನರು, ಪೊಲೀಸರು ಹಾಗೂ ಪೀಡಿತನಿಗೆ ಬೆದರಿಕೆ, ಸುಳ್ಳು ಆರೋಪ ಮತ್ತು ಮಾನಹಾನಿ ಪ್ರಯತ್ನ ನಡೆದಿರುವುದಾಗಿ ಪೀಡಿತ ದೂರಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಗಳಿಂದ ಸಂಕಷ್ಟದಲ್ಲಿರುವ ಪೀಡಿತನಿಗೆ ತಕ್ಷಣ ನ್ಯಾಯಾಲಯ ಆದೇಶಿತ ಪರಿಹಾರ ಜಾರಿಗೊಳಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಹೆಚ್ಚಾಗಿದೆ.

WhatsApp Image 2025 12 17 at 7.58.44 PM

ಅಪಘಾತ ಪ್ರಕರಣ ನಡೆದು 11 ವರ್ಷವಾದರೂ ಪರಿಹಾರವಿಲ್ಲ : ನ್ಯಾಯ ಯಾರಿಗೆ ಸಲ್ಲಬೇಕು
ಅಪಘಾತ ನಡೆದು 11 ವರ್ಷ ಕಳೆದರೂ ಸಂತ್ರಸ್ತನಿಗೆ ನ್ಯಾಯ ಸಿಗದಿರುವ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ಯ ನ್ಯಾಯಾಲಯವು ಸುಮಾರು 20 ಲಕ್ಷ ರೂ. ಹಾಗೂ ಬಡ್ಡಿ ನೀಡುವಂತೆ ಆದೇಶಿಸಿದ್ದರೂ, ಇದುವರೆಗೂ ಪರಿಹಾರ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶ ಪಾಲಿಸಲು ತೆರಳಿದ ಪೊಲೀಸರ ಮೇಲೆ ಆರೋಪಿಯ ಮನೆಯ ಯುವತಿಯಿಂದ ಹಲ್ಲೆ ಆರೋಪ ಕೇಳಿಬಂದಿರುವುದು ಆತಂಕಕಾರಿ ಬೆಳವಣಿಗೆ. ಸಂತ್ರಸ್ತನಿಗೆ ವರ್ಷಗಳ ಕಾಲ ಪರಿಹಾರ ಸಿಗದೇ ಇರುವುದೂ, ನ್ಯಾಯಾಲಯದ ಆದೇಶ ಜಾರಿಗೊಳಿಸಲು ಹೊರಟ ಪೊಲೀಸರಿಗೆ ದೂರು ಎದುರಾಗಿರುವುದೂ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.

ಪ್ರಕರಣವನ್ನು ರಾಜಕೀಯ ಅಥವಾ ಸಂಘಟನೆಗಳ ದೃಷ್ಟಿಯಿಂದ ನೋಡದೆ, ಕೂಲಂಕುಶ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ಧ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಅಪಘಾತ ಸಂತ್ರಸ್ತನಿಗೂ ಹಾಗೂ ಅನ್ಯಾಯಕ್ಕೊಳಗಾದ ಯುವತಿಗೂ ನ್ಯಾಯ ಸಿಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಹರಿರಾಮ್ ಶಂಕರ್, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ, ಪ್ರಕರಣದ ಸಮಗ್ರ ತನಿಖೆಗೆ ಭರವಸೆ ನೀಡಿದ್ದು, ಪೊಲೀಸ್ ಇಲಾಖೆಗೆ ಗೌರವ ನೀಡಿ ನ್ಯಾಯಸಮ್ಮತ ತನಿಖೆಗೆ ಅವಕಾಶ ನೀಡಬೇಕು ಎಂದು ಅರುಣ್ ಕುಂದರ್ ಕಲ್ಗದ್ದೆ ಮನವಿ ಮಾಡಿದ್ದಾರೆ.

11 ವರ್ಷಗಳ ಅಪಘಾತ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮನವಿ
ಸುಮಾರು 11 ವರ್ಷಗಳಿಂದ ನಡೆಯುತ್ತಿರುವ ಅಪಘಾತ ಪ್ರಕರಣದಲ್ಲಿ ಆರೋಪಿ ಆಶಿಕ್‌ನನ್ನು ಬಂಧಿಸಲು ಪೊಲೀಸರು ಬೆಳಗಿನ ಜಾವ ಮನೆಗೆ ತೆರಳಿದ್ದು ತಪ್ಪಲ್ಲ ಎಂದು ಸಾಮಾಜಿಕ ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್ ಅಭಿಪ್ರಾಯಪಟ್ಟಿದ್ದಾರೆ. ದೇವೇಂದ್ರ ಸುವರ್ಣ ಅವರ ಮಾಹಿತಿ ಪ್ರಕಾರ ಆರೋಪಿಯ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ತೆರಳಿದ್ದು, ಕೋರ್ಟ್ ಅಮೀನ್ ಸಹ ಹಾಜರಿದ್ದು ನ್ಯಾಯಾಲಯದ ಆದೇಶ ಪಾಲನೆಯ ಭಾಗವಾಗಿಯೇ ಕ್ರಮ ಕೈಗೊಳ್ಳಲಾಗಿದೆ ಎಂದರು. ಆರೋಪಿಯನ್ನು ರಕ್ಷಿಸುವ ಪ್ರಯತ್ನ ತಪ್ಪು ಎಂದೂ ಅವರು ಹೇಳಿದರು.

ಇನ್ನು ಅಕ್ಷತಾ ಪೂಜಾರಿ ಮೇಲೆ ಪೊಲೀಸರ ಹಲ್ಲೆ ನಡೆದಿದೆ ಎನ್ನುವ ಆರೋಪವನ್ನು ಅವರು ಖಂಡಿಸಿದ್ದು, ಈ ಬಗ್ಗೆ ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಸೂಚಿಸಿದಂತೆ ದಕ್ಷ ಅಧಿಕಾರಿಗೆ ಪ್ರಕರಣ ವರ್ಗಾಯಿಸಿ ಅಕ್ಷತಾ ಪೂಜಾರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ 11 ವರ್ಷಗಳಿಂದ ಅಪಘಾತದ ಪರಿಣಾಮ ಕಷ್ಟ ಅನುಭವಿಸುತ್ತಿರುವ ದೇವೇಂದ್ರ ಸುವರ್ಣ ಮತ್ತು ಅವರ ಮಕ್ಕಳ ಭವಿಷ್ಯಕ್ಕೆ ನ್ಯಾಯ ಸಿಗುವಂತೆ ಹೋರಾಟಗಾರರು ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದ್ದಾರೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...