ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಿರ್ಮಾಣವಾಗಿರುವ ಪಟ್ಟಣ ಪಂಚಾಯತ್ ಸರ್ಕಾರಿ ವಾಣಿಜ್ಯ ಮಳಿಗೆಗಳನ್ನು ಬಹಿರಂಗವಾಗಿ ಹರಾಜು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಿಂದಗಿ ತಾಲೂಕು ಘಟಕದಿಂದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಶಿವಕುಮಾರ ಮೇಲಿನಮನಿ ಮನವಿ ಸಲ್ಲಿಸಿ ಮಾತನಾಡಿ, “ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡುವ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರ ಸಭೆ ಕರೆದು ಎಲ್ಲರ ಒಪ್ಪಿಗೆ ಪಡೆದುಕೊಳ್ಳಬೇಕು. ಕಾನೂನಿನ ರೀತಿ ಸಾರ್ವಜನಿಕ ಮಾಹಿತಿಗಾಗಿ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸುವುದು ಮತ್ತು ಕರಪತ್ರಗಳನ್ನು ಹಂಚುವುದು, ಡಂಗೂರ ಸಾರುವ ಮೂಲಕ ಪ್ರಚಾರ ಮಾಡಿ ಹರಾಜು ಮಾಡಬೇಕು” ಎಂದು ಆಗ್ರಹಿಸಿದರು.
“ಒಟ್ಟು 21 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಬೇಕಿದ್ದು, ಅವುಗಳಲ್ಲಿ 17 ಕಟ್ಟಡಗಳು ಮಾತ್ರ ನಿರ್ಮಾಣವಾಗಿವೆ. ಕಾಮಗಾರಿ ಪೂರ್ಣಗೊಳಿಸದೆ ಆತುರದಲ್ಲಿ ಹರಾಜು ಮಾಡಲು ಮುಂದಾಗಿದ್ದಾರೆ. ಆಲಮೇಲ ಪಟ್ಟಣ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಇತಿಹಾಸದ ಪುಟ ಸೇರಿದ ʼಅಂಬೇಡ್ಕರ್ ಗೀತೆʼಗಳು: ಪ್ರಶಂಸೆ ಗಳಿಸಿದ ಟೈಗರ್ ನಾಗ್
“ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಪ್ರತಿವರ್ಷ 7.45 ಲಕ್ಷ ತೆರಿಗೆ ಹಣ, ಪಟ್ಟಣದ ತರಕಾರಿ ಮಾರುಕಟ್ಟೆಯಿಂದ 5.40 ಲಕ್ಷ ರೂ. ಸೇರಿದಂತೆ ಪಂಚಾಯತಿಗೆ ಬರುವ ಆದಾಯದಲ್ಲಿ ಅವ್ಯವಹಾರ ಮಾಡಲಾಗಿದೆ. ಲೋಕಾಯುಕ್ತರು ಸ್ವಯಂ ಪ್ರೇರಣೆಯಿಂದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಶಶಿಧರ ನಾಯ್ಕೋಡಿ, ರಾಜು ಮೇತ್ರಿ, ಅನಿಲ ನಾಯ್ಕೋಡಿ, ಶರಣು ಬೇವಿನಗಿಡ ಇದ್ದರು.





