ಅಂಕೋಲಾ: ತಮ್ಮ ಮನೆಯ ಸಮೀಪದ ತೋಟದಲ್ಲಿ ಹೂವಿನ ಗಿಡಗಳನ್ನು ನೋಡಲೆಂದು ಹೋಗಿದ್ದ ಮಹಿಳೆಯೊಬ್ಬರು ವಿಷಕಾರಿ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಹೃದಯ ಕಲಕುವ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿಯ ಕಂಡ್ರಮನೆಯಲ್ಲಿ ನಡೆದಿದೆ.
ಕಂಡ್ರಮನೆ ಗ್ರಾಮದ ಶೇಖರ ವೈದ್ಯ ಅವರ ಪತ್ನಿ ಯಶೋಧಾ ವೈದ್ಯ (39) ಮೃತ ದುರ್ದೈವಿ.
ಘಟನೆ ವಿವರ: ಯಶೋಧಾ ವೈದ್ಯ ಅವರು ತಮ್ಮ ಪತಿಯೊಂದಿಗೆ ತೋಟಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರ ಎಡಗಾಲಿನ ಪಾದದ ಮೇಲ್ಭಾಗಕ್ಕೆ ವಿಷದ ಹಾವು ಕಚ್ಚಿದೆ. ತಕ್ಷಣಕ್ಕೆ ಎಚ್ಚೆತ್ತ ಕುಟುಂಬದವರು, ಯಶೋಧಾ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಗುಳ್ಳಾಪುರಕ್ಕೆ ಕರೆದೊಯ್ದರು.
ಆದರೆ, ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಾ ಬಂದಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಆಂಬುಲೆನ್ಸ್ ಮೂಲಕ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಯಶೋಧಾ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಯಲ್ಲಾಪುರ ತಾಲೂಕು ಆಸ್ಪತ್ರೆ ತಲುಪಿದ ನಂತರ ವೈದ್ಯರು ಪರೀಕ್ಷಿಸಿದಾಗ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತ ಯಶೋಧಾ ವೈದ್ಯ ಅವರು ಪತಿ, ಶಾಲೆಗೆ ಹೋಗುವ ಇಬ್ಬರು ಮಕ್ಕಳು (ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಈ ದುರ್ಘಟನೆಯಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ಉಂಟಾಗಿದ್ದು, ಕುಟುಂಬದವರ ಆಕ್ರಂದನ ಮನ ಕಲಕುವಂತಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಆತಂಕ ಸೃಷ್ಟಿಸಿದ ಇ-ಮೇಲ್ ಬಾಂಬ್ ಬೆದರಿಕೆಗಳು: ಭಟ್ಕಳ, ಕಾರವಾರ ತಹಶೀಲ್ದಾರ್ ಕಚೇರಿಗಳಲ್ಲಿ ತಪಾಸಣೆ
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ತನಿಖೆ ಮುಂದುವರೆಸಿದ್ದಾರೆ. ಮಳೆಗಾಲ ಶುರುವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಾವುಗಳ ಓಡಾಟ ಹೆಚ್ಚಿರುವುದರಿಂದ, ತೋಟ ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವಾಗ ಹಾಗೂ ಸಂಚರಿಸುವಾಗ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.





