ಅಂಕೋಲಾ: ತಾಲೂಕಿನ ಅಗಸೂರು ಗ್ರಾಮದ ಕಂಚಿನಬಾಗಿಲ (ಬೊಗ್ರಿಬೈಲ್ ನವಗದ್ದೆ) ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರಾಸಾಯನಿಕ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿದ್ದು, ಸಂಭಾವ್ಯ ಅವಘಡ ತಡೆಯಲು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಘಟನಾ ಸ್ಥಳದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಗುಜರಾತ್‌ನ ಕಲೋಲ್‌ನಿಂದ ಉಡುಪಿಯ ಹೆಬ್ರಿ (ವಿಶ್ವಾಸ ನಗರ) ಕಡೆಗೆ ಮಿಥೆನಾಲ್ (Methanol) ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್, ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಉರುಳಿದೆ. ಈ ಟ್ಯಾಂಕರ್‌ನಲ್ಲಿದ್ದ ರಾಸಾಯನಿಕ ಸೋರಿಕೆಯಾಗುತ್ತಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಪಾಯಕಾರಿ ಮಿಥೇನ್/ಮಿಥೆನಾಲ್ ಅನಿಲ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜಿಲ್ಲಾಧಿಕಾರಿಗಳು ತುರ್ತು ಆದೇಶ ಹೊರಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಟ್ಯಾಂಕರ್ ತೆರವುಗೊಳಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿಗೆ ಜಿಲ್ಲೆಯಾದ್ಯಂತ 116 ಆಕ್ಷೇಪಣೆ ಅರ್ಜಿಗಳು ಸಲ್ಲಿಕೆ
ಸೋರಿಕೆಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆಗೆ ನೆರವಾಗಲು ಎನ್‌ಡಿಆರ್‌ಎಫ್ (NDRF) ತಂಡವನ್ನು ಸಹ ರವಾನಿಸಲಾಗಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕ ಅರುಣ್ ಶೇಖ್ (57) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಾಹನ ಸವಾರರಿಗೆ ಅಂಕೋಲಾ ಹಿಲ್ಲೂರು-ವಾಸರೆ ಕುದ್ರಿಗೆ ಮಾರ್ಗ ಮತ್ತು ಅಂಕೋಲಾದಿಂದ ಮಾದನಗೇರಿ ಹೆದ್ದಾರಿ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.





