ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರ ಅಂಕೋಲಾ ತಾಲೂಕಿನ ಸುಂಕಸಾಳ ಸಮೀಪ ಗುರುವಾರ ಬೆಳಿಗ್ಗೆ ಲಾರಿ ಹಾಗೂ ಎರಡು ಖಾಸಗಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 12 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 28 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಎಂಟು ವಿದೇಶಿ ಪ್ರಜೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಪಘಾತದ ವಿವರ: ಹುಬ್ಬಳ್ಳಿಯತ್ತ ತೆರಳುತ್ತಿದ್ದ ಲಾರಿ ಮತ್ತು ಹಂಪಿಯಿಂದ ಗೋವಾಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ನಡುವೆ ಮೊದಲು ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದ ಬೆನ್ನಲ್ಲೇ ಬಸ್‌ನ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್ ಕೂಡ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಮೂರೂ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಬಸ್‌ಗಳ ಮುಂಭಾಗ ನುಜ್ಜುಗುಜ್ಜಾಗಿದೆ. ಇಬ್ಬರು ಬಸ್ ಚಾಲಕರು ಕ್ಯಾಬಿನ್‌ನೊಳಗೆ ಸಿಲುಕಿಕೊಂಡಿದ್ದು, ಅವರ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಹೆಗಡೆಕಟ್ಟಾ ಯುವಕನ ಅಪ್ರತಿಮ ಸಾಧನೆ: 25ರ ಹರೆಯದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಸುಮಂತ್ ಆಯ್ಕೆ
ಘಟನೆ ನಡೆದ ತಕ್ಷಣ ಸ್ಥಳೀಯ ಸಾರ್ವಜನಿಕರು ಹಾಗೂ ಅಂಕೋಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ವಾಹನದೊಳಗೆ ಸಿಲುಕಿದ್ದ ಚಾಲಕರು ಹಾಗೂ ಗಾಯಾಳುಗಳನ್ನು ಹರಸಾಹಸಪಟ್ಟು ಹೊರತೆಗೆಯಲಾಯಿತು.
ಮೊದಲು ಎಲ್ಲರನ್ನೂ ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರನ್ನು ತಕ್ಷಣವೇ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಹೆದ್ದಾರಿಯ ಮಧ್ಯಭಾಗದಲ್ಲೇ ಅಪಘಾತ ಸಂಭವಿಸಿದ್ದರಿಂದ ಸುಮಾರು ಐದು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಅರಬೈಲ್ ಘಟ್ಟ ಪ್ರದೇಶದವರೆಗೆ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ನಂತರ ಸುಂಕಸಾಳ ಹೊರಠಾಣೆ ಸಿಬ್ಬಂದಿ ಹಾಗೂ ಅಂಕೋಲಾ ಪೊಲೀಸರು ಕ್ರೇನ್ ಮೂಲಕ ವಾಹನಗಳನ್ನು ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು. ಈ ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.





