ಅಂಕೋಲಾ: ಇಲ್ಲಿನ ಪುರಸಭೆಯ ಇತ್ತೀಚಿನ ಬೆಳವಣಿಗೆಗಳು ಹೊಸ ತಿರುವು ಪಡೆದಿದ್ದು, ಅಮಾನತ್ತು ಆಗಿರುವ ಹಿಂದಿನ ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರನ್ನು ಪುನಃ ನೇಮಕ ಮಾಡುವ ಯತ್ನ ನಡೆದರೆ, ಪುರಸಭೆಯ ಆಡಳಿತ ಮಂಡಳಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ಈ ಸಂಬಂಧ ಸದಸ್ಯರು ಜಿಲ್ಲಾಧಿಕಾರಿಗಳಿಗೆ ನೀಡಿರುವ ಪತ್ರದ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಪೌರಾಡಳಿತ ಇಲಾಖೆಯ ಸಚಿವರು, ನಿರ್ದೇಶಕರು, ಜಂಟಿ ನಿರ್ದೇಶಕರು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಈ ಮೇಲ್ ಮುಖಾಂತರ ಕಳುಹಿಸಿಕೊಟ್ಟಿದ್ದಾರೆ.
ಸದಸ್ಯರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಹಿಂದಿನ ಮುಖ್ಯಾಧಿಕಾರಿ ಎಚ್. ಅಕ್ಷತಾ ಮತ್ತು ಜೆಇ ಶೆಲ್ಜಾ ನಾಯ್ಕ ಅವರು ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಿರ್ವಹಿಸಿದ್ದು, ಹಲವಾರು ಬಾರಿ ತನಿಖೆಗೆ ಒಳಗಾಗಿದ್ದಾರೆ. ಅವರ ವಿರುದ್ಧ ಕರ್ತವ್ಯಲೋಪ ಹಾಗೂ ಸಹಕಾರದ ಕೊರತೆಯ ಬಗ್ಗೆ ಹಿಂದೆ ಹಲವು ಬಾರಿ ಉಲ್ಲೇಖಗೊಂಡಿದ್ದು, ಕಾರಣ ಕೇಳಿ ನೋಟಿಸ್ ನೀಡಿದ ನಂತರ ಕಾನೂನು ಪ್ರಕಾರ ಅವರನ್ನು ಅಮಾನತ್ತು ಮಾಡಲಾಗಿತ್ತು. ಯಾವುದೇ ಅಧಿಕಾರಿಯನ್ನೂ ಅಮಾನತ್ತು ಮಾಡಿದ ನಂತರ ಅದೇ ಸ್ಥಳದಲ್ಲಿ ಮುಂದುವರಿಸಿದರೆ ಸಾಕ್ಷ್ಯ ನಾಶ ಮಾಡುವ ಅಥವಾ ತನಿಖೆಗೆ ಪ್ರಭಾವ ಬೀರುವ ಸಾಧ್ಯತೆ ಇದ್ದುದರಿಂದ, ಆಡಳಿತ ಹಿತಾಸಕ್ತಿ ಕಾಪಾಡಲು ಅವರನ್ನು ಅಮಾನತ್ ಮಾಡಲಾಗಿತ್ತು ಎಂದು ಸದಸ್ಯರು ಹೇಳಿದ್ದಾರೆ.

ಆದರೆ, ಅಮಾನತ್ ಆದ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿ ತಾತ್ಕಾಲಿಕ ತಡೆ ಆದೇಶ ಪಡೆದಿದ್ದಾರೆ. ಇದನ್ನೇ ನೆಪವಾಗಿ ಮಾಡಿಕೊಂಡು ಅದೇ ಸ್ಥಳದಲ್ಲಿ ಮರುನಿಯೋಜನೆ ಮಾಡುವ ಬಗ್ಗೆ ಪ್ರಸ್ತಾಪಗಳು ಕೇಳಿಬಂದಿರುವುದರಿಂದ ಪುರಸಭಾ ಸದಸ್ಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅವರು ಪತ್ರದಲ್ಲಿ “ಈ ಆದೇಶ ಕೇವಲ ಮಧ್ಯಂತರವಾಗಿದೆ, ಈಗಾಗಲೇ ಪ್ರಭಾರಿ ಮುಖ್ಯಾಧಿಕಾರಿ ನಿಯೋಜನೆಗೊಂಡಿದ್ದು, ಪುರಸಭೆಯ ಆಡಳಿತ ಸುಗಮವಾಗಿ ನಡೆಯುತ್ತಿದೆ. ಹೀಗಿದ್ದರೂ ಹಿಂದಿನ ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರನ್ನು ಮತ್ತೆ ಮುಂದುವರೆಸಿದರೆ ಕಚೇರಿ ದಾಖಲೆಗಳೊಂದಿಗೆ ಸಂಬಂಧಿಸಿದ ಸಾಕ್ಷ್ಯ ನಾಶವಾಗುವ ಅಪಾಯವಿದೆ. ಇದು ಸರ್ಕಾರದ ಮತ್ತು ಸಾರ್ವಜನಿಕ ಹಣದ ದುರುಪಯೋಗಕ್ಕೆ ದಾರಿ ಮಾಡಿಕೊಡಬಹುದು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ
ಇದೇ ವೇಳೆ ಎಚ್. ಅಕ್ಷತಾ ಅವರು ಕೋರ್ಟ್ ಮೊರೆ ಹೋಗಿರುವ ಪ್ರಕರಣದಲ್ಲಿ ಪೌರಾಡಳಿತ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತ ಮತ್ತು ಅಂಕೋಲಾ ಪುರಸಭೆ ಸಹ ಪ್ರತಿವಾದಿಗಳಾಗಿದ್ದಾರೆ. “ಅವರು ಇದೇ ಸ್ಥಾನದಲ್ಲಿ ಮುಂದುವರೆದರೆ, ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ತಾವೇ ವಾದ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಇದು ನ್ಯಾಯಾಂಗದ ಘನತೆಗೆ ಧಕ್ಕೆಯಾಗುವಂತೆ ಮಾಡುತ್ತದೆ” ಎಂದು ಸದಸ್ಯರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. “ಅಂಕೋಲಾ ಹೊರತುಪಡಿಸಿ ಅವರಿಗೆ ಬೇರೆಡೆ ಅವಕಾಶ ನೀಡಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ” ಎಂದು ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಪುರಸಭಾ ಸದಸ್ಯರ ಈ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ಜಿಲ್ಲೆಯ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಂಕೋಲಾ ಪುರಸಭೆಯ ರಾಜಕೀಯ ಮತ್ತು ಆಡಳಿತಾತ್ಮಕ ಪರಿಸ್ಥಿತಿ ಹೊಸ ತಿರುವು ಪಡೆಯುವ ಲಕ್ಷಣಗಳು ಕಂಡು ಬಂದಿವೆ.





