ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಕುರ್ಣೇಗಾಲ ಬಳಿಯ ಕೂಡುಗಿ ಗ್ರಾಮದ ಕಾಡಂಚಿನ ಹೊಲದಲ್ಲಿ ದನ ಮೇಯಿಸುತಿದ್ದ ದೊಡ್ಡ ನಿಂಗಯ್ಯ (65) ಅವರ ಮೇಲೆ ಹುಲಿ ದಾಳಿ ನಡೆಸಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತಾಲ್ಲೂಕಿನಲ್ಲಿ ಹುಲಿ ಹಾವಳಿ ಹೆಚ್ಚಿದ್ದು ಕಳೆದೊಂದು ತಿಂಗಳ ಅವಧಿಯಲ್ಲಿ ಬಡಗಲಪುರ, ಬೆಣ್ಣೆಗೆರೆ, ಕೂಡುಗಿ ಗ್ರಾಮಗಳಲ್ಲಿ ಹುಲಿ ದಾಳಿ ನಡೆದಿದ್ದು ಇಬ್ಬರು ಮೃತಪಟ್ಟು ಓರ್ವ ರೈತ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚಿಗಷ್ಟೇ ಬೆಣ್ಣೆಗೆರೆಯಲ್ಲಿ ದನಗಾಹಿ ರಾಜಶೇಖರ್ ಹುಲಿ ದಾಳಿಗೆ ಮೃತಪಟ್ಟಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಆತಂಕ ತರಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದರ ಹಿಂದೆ ಒಂದರಂತೆ ಹುಲಿ ದಾಳಿ ಕಂಡು ಬರುತಿದ್ದು ಗ್ರಾಮಸ್ಥರು ಹೊರಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ವನ್ಯಜೀವಿಗಳಿಗೆ ತೊಂದರೆ; ಅಂತಿಮ ಸಫಾರಿ ಕೈಬಿಡುವಂತೆ ಆದೇಶ
ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ಈಗ ಕೂಂಬಿಂಗ್ ನಡೆಸುತ್ತಿದ್ದಾರೆ. ಇಷ್ಟು ದಿನ ಹುಲಿ ಹಿಡಿಯಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹುಲಿ ಹೆಚ್ಚಳಕ್ಕೆ ಕಾರಣ. ಇದರ ಜೊತೆಗೆ ಸುತ್ತಮುತ್ತಲು ಅಕ್ರಮ ರೆಸಾರ್ಟ್, ಹೋಂ ಸ್ಟೇ ನಿರ್ಮಾಣದಿಂದಾಗಿ ಕಾಡಿಂದ ಗ್ರಾಮದ ಕಡೆಗೆ ಪ್ರಾಣಿಗಳು ವಲಸೆ ಬರುತ್ತಿವೆ. ಇದರಿಂದ ಪ್ರಾಣ ಹಾನಿ ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





