ಮೈಸೂರು ಗ್ರಾಮಾಂತರ ಇಲವಾಲದಲ್ಲಿ ಮಂಗಳವಾರ ನಡೆದ ಜಿಲ್ಲಾ ಬೃಹತ್ ರೈತ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳು, ರೈತರನ್ನು ಗುಲಾಮಗಿರಿಗೆ ದೂಡುತ್ತವೆ’ ಎಂದು ಕಿಡಿಕಾರಿದರು.
“ಮಾತು ತಪ್ಪಿದ ಕೇಂದ್ರ ಸರ್ಕಾರ. ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆದರೇ, ಇದುವರೆಗೆ ಹೇಳಿದಂತೆ ನಡೆದುಕೊಂಡಿಲ್ಲ. ಅಂಬಾನಿ, ಅದಾನಿ ಸರ್ಕಾರ ರಚಿಸಲು ಪರೋಕ್ಷವಾಗಿ ನೆರವಾದರು, ಅವರುಗಳ ಹಿತಕ್ಕಾಗಿ ರೈತ ವಿರೋಧಿ ಕಾಯ್ದೆಗಳನ್ನು ತರುವುದರ ಮೂಲಕ ಕಾರ್ಪೋರೇಟ್ ಕುಳಗಳಿಗೆ ದಾರಿ ಮಾಡಿಕೊಟ್ಟು, ರೈತರನ್ನು ಗುಲಾಮಗಿರಿಗೆ ದೂಡುವ ಪರಿಸ್ಥಿತಿಗೆ” ತಂದು ನಿಲ್ಲಿಸಿದೆ.

ಕೇಂದ್ರ, ರಾಜ್ಯ ಯಾವುದೇ ಸರ್ಕಾರ ಆಗಲಿ ಬದ್ಧತೆಯಿಲ್ಲ. ರೈತ ವಿರೋಧಿ ನಿಲುವುಗಳು. ಕೇಂದ್ರ ಸರ್ಕಾರ ನೇರವಾಗಿ ದಾಳಿ ನಡೆಸಿದರೆ, ರಾಜ್ಯ ಸರ್ಕಾರ ಗೊತ್ತಿದ್ದರು, ಗೊತ್ತಿರದ ರೀತಿಯಲ್ಲಿ ಹೇರಿಕೆ ಮಾಡುತ್ತಿದೆ. ಅದನ್ನೇ ಮುಂದುವರಿಕೆ ಮಾಡಿಕೊಂಡು ಬರುತ್ತಿದೆ. ಕಾಯ್ದೆ ವಾಪಸ್ ಪಡೆಯಲು ಎಷ್ಟೇ ಮನವಿ ಮಾಡಿದರು ಸ್ಪಂದನೆ ಇಲ್ಲವೇ ಇಲ್ಲ. ಇನ್ನ ಪ್ರತಿಪಕ್ಷಗಳು ಈ ವಿಚಾರದಲ್ಲಿ ಸತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರೈತ ವಿರೋಧಿ ನೀತಿಗಳು ಹೈನುಗಾರಿಕೆ, ಮೀನುಗಾರಿಕೆ, ಹತ್ತಿ, ತಂಬಾಕು ಬೆಳೆಗಳ ಮೇಲೆ ಪರಿಣಾಮ ಬೀರಲಿವೆ. ಪ್ರಧಾನಿ ನರೇಂದ್ರ ಮೋದಿ 11 ವರ್ಷಗಳಿಂದ ಕಾಲಹರಣ ಮಾಡುತಿದ್ದಾರೆ ಹೊರತು, ಕೊಟ್ಟ ಭರವಸೆ ಕಡೆಗೆ ಗಮನ ಹರಿಸಿಲ್ಲ. ಹಸಿರು, ಕೆಂಪು, ನೀಲಿ ಬಾವುಟಗಳು ವಿಧಾನಸೌಧಕ್ಕೆ ಪ್ರವೇಶ ಮಾಡಬೇಕು. ಆಗಲೇ, ರೈತ, ದಲಿತ, ಶೋಷಿತ, ಕಾರ್ಮಿಕ ವರ್ಗಕ್ಕೆ ನ್ಯಾಯ ಸಿಗಲು ಸಾಧ್ಯ. ಇಂತಹ ನಿಟ್ಟಿನಲ್ಲಿ ಯುವ ಜನತೆ ಎಚ್ಚತ್ತುಕೊಳ್ಳಬೇಕು, ಹೋರಾಟದ ಮೂಲಕ ರಾಜಕೀಯ ಅಧಿಕಾರವನ್ನು ಗಳಿಸುವಂತ ಸಾಮರ್ಥ್ಯ ಬೆಳೆಸಿಕೊಳ್ಳಬೇಕು” ಎಂದರು.

ರಾಜ್ಯದಲ್ಲಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲಿಯೂ ಭೂಗಳ್ಳರು ಇದ್ದಾರೆ. ಹೀಗಾಗಿಯೇ, ಭೂ ಸುಧಾರಣೆ ಕಾಯ್ದೆ ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಬೇಳೆ ಬೇಯಿಸಿಕೊಳ್ಳಲು ಕಾಯ್ದೆಯ ಅಗತ್ಯತೆ ಇದೆಯೆಂದು ಲೇವಡಿ ಮಾಡಿದರು. ಇಂತಹ ರೈತ ವಿರೋಧಿ ಧೋರಣೆಗಳನ್ನು ಅರ್ಥ ಮಾಡಿಕೊಂಡು ಹೋರಾಟದ ಮೂಲಕ ನ್ಯಾಯ ಪಡೆಯಬೇಕಿದೆ. ಈ ದೃಷ್ಟಿಯಿಂದ ಸಂಘಟಿತರಾಗುವುದು ಅತ್ಯಗತ್ಯ ಎಂದರು.
ಇಲವಾಲದಲ್ಲಿ ರೈತ ಕಣ್ಮಣಿ ಕೆ ಎಸ್ ಪುಟ್ಟಣ್ಣಯ್ಯ ಅವರ ಪ್ರತಿಮೆ ಅನಾವರಣ ಮಾಡಬೇಕಿತ್ತು. ಅದಕ್ಕಾಗಿಯೇ, ತಾಲ್ಲೂಕು ಆಡಳಿತ, ಗ್ರಾಮ ಪಂಚಾಯತಿ ವತಿಯಿಂದೆಲ್ಲ ಸಹಕಾರ ಕೋರಿದ್ದೆವು. ರಾತ್ರೋರಾತ್ರಿ ಪ್ರತಿಮೆ ಕಳುವು ಮಾಡಿ, ಅದನ್ನೂ ಒಂದೆಡೆ ಇರಿಸಿದ್ದರು. ಇನ್ನೇನು ಪ್ರತಿಮೆ ಅನಾವರಣಕ್ಕೆ ಸಜ್ಜಾಗಬೇಕು ಎನ್ನುವಾಗ ಕೆಲವು ಕಿಡಿಗೇಡಿಗಳ ಕುಮ್ಮಕ್ಕಿನಿಂದ ಸಾಧ್ಯವಾಗಿಲ್ಲ. ಆದರೇ, ಅತಿ ಶೀಘ್ರದಲ್ಲಿಯೇ ಪ್ರತಿಮೆ ಅನವಾರಣ ಮಾಡಿಯೇ ತೀರುತ್ತೇವೆ ಎಂದು ಕರೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ ಮಾತನಾಡಿ, “ರೈತ ವಿರೋಧಿ ನಿಲುವಗಳನ್ನು ಖಂಡಿಸುವದರ ಮೂಲಕ ಪುಟ್ಟಣ್ಣಯ್ಯನವರನ್ನು ಸ್ಮರಿಸಬೇಕಿದೆ. ರೈತರ ಬದುಕಿಗೆ ಘನತೆ, ಗೌರವ ತಂದುಕೊಟ್ಟವರು. ರೈತರ ಪರವಾಗಿ ಸದಾ ಸದನದಲ್ಲಿ ಹೋರಾಟ ಮಾಡಿದ್ದು ಇತಿಹಾಸ. 90ರ ದಶಕದಿಂದ ಹೋರಾಟದ ಒಡನಾಡಿಯಾಗಿ ಹತ್ತಿರದಿಂದ ಕಂಡಿದ್ದೇನೆ. ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಚಳವಳಿ ಕಟ್ಟಲು ಪ್ರಯತ್ನಿಸಿದರು. ಸಮಸಮಾಜದ ಕನಸನ್ನು ಬಿತ್ತುವ ಮೂಲಕ ಪುಟ್ಟಣ್ಣಯ್ಯ ಮಾದರಿಯಾಗಿದ್ದಾರೆ” ಎಂದು ಹೇಳಿದರು.

ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್ ಗೌಡ ಮಾತನಾಡಿ, “ಪುಟ್ಟಣ್ಣಯ್ಯ ಆವರು ರೈತ ಸಿದ್ಧಾಂತಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಎಂತಲೇ ಸಂಘಟಯಲ್ಲಿ ಸಕ್ರಿಯರಾಗಿದ್ದರು. ರಾಜ್ಯದ ಮಟ್ಟಿಗೆ ಯಾವುದೇ ಹೋರಾಟ ಆಗಲಿ ಸದಾ ಮುಂದು. ಒಂದೇ ಒಂದು ಕರೆಗೆ ಓಗೊಟ್ಟು ಬರುತ್ತಿದ್ದ ರೈತ ನಾಯಕ. ಕೃಷಿ ಮಂತ್ರಿಯಾಗುವ ಅವಕಾಶ ಬಂದಾಗ, ತಿರಸ್ಕರಿಸಿ ಸಾಮಾನ್ಯ ಸಂಘಟನೆಯ ಕಾರ್ಯಕರ್ತನಾಗಿ ದುಡಿದರು. ನೈಸರ್ಗಿಕ ಕೃಷಿಗೆ ಒತ್ತುಕೊಟ್ಟು, ದೇಶದಲ್ಲಿ ಹೆಚ್ಚಿನ ಮಟ್ಟದಲ್ಲಿ ಚಾಲನೆಯಾಗಲು ಕಾರಣರಾದರು. ಅದಕ್ಕಾಗಿಯೇ, ಇಂದಿಗೂ ಪುಟ್ಟಣ್ಣಯ್ಯ ಅವರ ವಿಚಾರಧಾರೆ ಪ್ರಸ್ತುತವಾಗಿದೆ”.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಳುವ ಸರ್ಕಾರಗಳಿಗೆ ರೈತರ ಬದುಕಿನ ಅರಿವಿಲ್ಲ: ಚಾಮರಸ ಮಾಲಿ ಪಾಟೀಲ್
ವಿಚಾರಗಳನ್ನೇ ತಿರುಚುವ ಕಾಲಘಟ್ಟದಲ್ಲಿ, ಅದನ್ನೇ ಅಸ್ತ್ರವನ್ನಾಗಿಸಿ, ಆಳುವ ಸರ್ಕಾರಗಳು ಒಡೆದಾಳುತ್ತಿವೆ. ಇದನ್ನೆಲ್ಲಾ ತಡೆಯುವ ಶಕ್ತಿ, ಸಾಮರ್ಥ್ಯವಿರುವುದು ರೈತ, ದಲಿತ, ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ. ರೈತ ಆಶಯಗಳಿಗೆ ಯುವಕರು ಬದ್ಧರಾಗುವಂತೆ ಮಾಡಬೇಕಿದೆ. ಹೋರಾಟ ಕಟ್ಟಲು ನಿಮ್ಮಗಳ ಕೊಡುಗೆ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಲೈವ್ ವೀಕ್ಷಿಸಿ:https://www.youtube.com/live/hifeyI5LgFw?si=4aB0XnxzvKd98kF3

ಸಮಾವೇಶದಲ್ಲಿ ರೈತ ವಿರೋಧಿ ಕಾಯ್ದೆಗಳ ಪ್ರತಿಯನ್ನು ಸುಡುವುದರ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು. ಸಮಾವೇಶ ನಿರ್ಣಯಿಸಿದ ಮನವಿ ಪತ್ರವನ್ನು ಉಪ ವಿಭಾಗಧಿಕಾರಿ ನರಸಪ್ಪ ಅವರಿಗೆ ಸಲ್ಲಿಸಿ, ಮುಖ್ಯಮಂತ್ರಿಗಳಿಗೆ ಕಳಿಸಿಕೋಡುವಂತೆ ತಿಳಿಸಿದರು.
ಈ ವಿಶೇಷ ಬರಹ ಓದಿದ್ದೀರಾ? ‘ನಿಮ್ಮೊಂದಿಗೆ ನಾವಿದ್ದೇವೆ; ಆತ್ಮಹತ್ಯೆ ಬೇಡ, ಆತ್ಮವಿಶ್ವಾಸವಿರಲಿ’: ರೈತ ಕಣ್ಮಣಿ ಪುಟ್ಟಣ್ಣಯ್ಯ ನೆನಪು
ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ರಾಜ್ಯ ಕಾರ್ಯದರ್ಶಿ ನೇತ್ರಾವತಿ, ದಸಂಸ ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ, ಒಡನಾಡಿ ಸ್ಟ್ಯಾನ್ಲಿ, ಮಂಜುಳಾ ಹಕ್ಕಿ, ರಾಜ್ಯ ಉಪಾಧ್ಯಕ್ಷರಾದ ಮಹೇಶ್ ಪ್ರಭು, ರವಿ ಕಿರಣ್ ಪೂಣಚ್ಚ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.





