ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲು ಆರಂಭದಲ್ಲಿಯೇ ನಾನು ಧ್ವನಿ ಎತ್ತಿದ್ದು, ಅದಕ್ಕೆ ಯಾರಿಂದಲೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಈಗ ಸೋಲೂರು ಬೇಕು ಅಂತ ಪ್ರತಿಭಟನೆ ಮಾಡಿ ಏನು ಪ್ರಯೋಜನ? ರೈಲು ಹೋದ ಮೇಲೆ ಟಿಕೆಟ್ ಕೊಂಡಂತೆ ಆಗಿದೆ ನಿಮ್ಮ ಸ್ಥಿತಿ ಎಂದು ಶಾಸಕ ಎಚ್ ಸಿ ಬಾಲಕೃಷ್ಣ ಅಸಹಾಯಕತೆ ವ್ಯಕ್ತಪಡಿಸಿದರು.
ಮಾಗಡಿ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, “ಸೋಲೂರು ಹೋಬಳಿ ಉಳಿಸಿಕೊಳ್ಳಲು ಎತ್ತಿದ ಧ್ವನಿಗೆ ಜನರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ” ಎಂದು ಅಸಮಾಧಾನ ಹೊರ ಹಾಕಿದರು.
“ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಂಡು ಸೋಲೂರನ್ನು ಮಾಗಡಿ ತಾಲೂಕಿನಲ್ಲಿಯೇ ಉಳಿಸಿಕೊಡುವಂತೆ ಮನವಿ ಮಾಡಿದ್ದೆ. ಜನರು ಬೆಂಬಲಿಸಲಿಲ್ಲ. ಬದಲಾಗಿ ಅಸಹಕಾರ ತೋರಿದರು. ಈ ವಿಚಾರದಲ್ಲಿ ತಲೆ ಹಾಕದಂತೆ ಕೆಲವರು ನೇರವಾಗಿ ಹೇಳಿದರು. ಹಾಗಾಗಿ ನಾನೂ ತಟಸ್ಥನಾದೆ” ಎಂದು ಹೇಳಿದರು.
“ಕೇವಲ ಮಾಗಡಿ ಜನ ಹೋರಾಟ ಮಾಡಿದರೆ ಪ್ರಯೋಜನವಾಗುವುದಿಲ್ಲ. ಸೋಲೂರು ಭಾಗದ ಜನರೂ ಒಗ್ಗಟ್ಟಿನಿಂದ ಪ್ರತಿಭಟನೆ ಮಾಡಬೇಕು. ಆಗ ಮಾತ್ರ ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ನವೆಂಬರ್ ತಿಂಗಳ ಮೊದಲ ಭಾನುವಾರ ಸೋಲೂರು ಪ್ರವಾಸಿ ಮಂದಿರದಲ್ಲಿ ಸೋಲೂರು ಹೋಬಳಿಯ ಕನಿಷ್ಟ ಐದು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಸಭೆ ಆಯೋಜಿಸಿ. ಅಲ್ಲಿ ಜನಗಳ ತೀರ್ಮಾನ ನೋಡಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡೋಣ” ಎಂದು ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ: ಗಣತಿದಾರರ ವಿರೋಧ
“ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲೇ ಉಳಿಸುವಂತೆ ಆಕ್ಷೇಪಣೆ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸುವ ಕೆಲಸ ಮಾಡಬೇಕು. ಇಲ್ಲವಾದರೆ ರೈತರು ಪ್ರತಿ ಕೆಲಸಕ್ಕೂ ದೊಡ್ಡಬಳ್ಳಾಪುರಕ್ಕೆ ತೆರಳುವ ಅನಿವಾರ್ಯತೆ ನಿರ್ಮಾಣವಾಗಲಿದೆ. ನಾವು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಜತೆಗೆ ನೀವೂ ನಿಲ್ಲಬೇಕು” ಎಂದು ಪ್ರಗತಿಪರ ರೈತ ಕನ್ನಡ ಕುಮಾರ್ ಮನವಿ ಮಾಡಿದರು.
ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಲ್ಲೇ ಉಳಿಸುವಂತೆ ನೂರಾರು ರೈತರು, ಸಾರ್ವಜನಿಕರು, ಶಾಸಕ ಹಾಗೂ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.





