ʼವ್ಯವಸಾಯ ಜೂಜಾಟ ಇದ್ದಂಗೆ, ಹೋಗುತ್ತೆ ಬರುತ್ತೆʼ: ಬೆಳೆಹಾನಿ ಸಂತ್ರಸ್ತ ರೈತನ ಅಸಹಾಯಕ ನುಡಿಯಿದು!

Date:

ʼರೈತರ ಸ್ಥಿತಿ ಹೀಗೇ ಇರುತ್ತೆ ಮೇಡಂ. ಏನೂ ಮಾಡೋಕೆ ಆಗಂಗಿಲ್ಲ. ಒಂದ್ಸಲ ಅತಿವೃಷ್ಟಿ ಆಗುತ್ತೆ. ಒಂದ್ಸಲ ಅನಾವೃಷ್ಟಿ ಆಗುತ್ತೆ. ಯಾವುದೇ ಸಮಸ್ಯೆ ಇಲ್ಲದೆ ಬೆಳೆ ಚನ್ನಾಗಿ ಬಂದ್ರೆ ಸೂಕ್ತ ಬೆಲೆಯೇ ಸಿಗೋದಿಲ್ಲ. ರೈತನಿಗೆ ವ್ಯವಸಾಯದಲ್ಲಿ ಇಂಥದೆಲ್ಲ ಹೊಸದೇನೂ ಅಲ್ರೀ. ಆದರೂ ರೈತರು ಇವತ್ತು ಒಂದು ರೀತಿಯ ಅಂತಂತ್ರದ ಸ್ಥಿತಿಯಲ್ಲಿದೀವಿʼ

‘ಈ ಬಾರಿ ಮುಂಗಾರಿನಲ್ಲಿ ಉದ್ದು ಬೆಳೆ ಬಿತ್ತನೆ ಮಾಡಿದ್ದೀನಿ. ಒಂಚೂರು ಈರುಳ್ಳಿ ಬೆಳೆನೂ ಹಾಕಿದ್ದೆ. ಬರಿ ಉದ್ದು ಬೆಳೆಯೋಕೇ ಎಕರೆಗೆ 25 ಸಾವಿರ ರೂಪಾಯಿ ಖರ್ಚು ಮಾಡಿದ್ದೀನಿ. ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಆಳು-ಕಾಳು ಸೇರಿದಂತೆ ಎಲ್ಲಾದ್ಕೂ 25 ಸಾವಿರ ಖರ್ಚಾಗಿದೆ. ಸಿಕ್ಕಾಬಟ್ಟೆ ಮಳೆ ಬಿದ್ದ ಕಾರಣ ತುಂಬಾ ಲುಕ್ಸಾನಾಗಿದೆ. ನಷ್ಟ ಉಂಟಾಗಿದೆ’ ಬಾಗಲಕೋಟೆ ಜಿಲ್ಲೆಯ ಬೆಳೆಹಾನಿ ಸಂತ್ರಸ್ತ ರೈತನ ಮಾತುಗಳಿವು.

“ಒಂದು ಎಕರೆಗೆ 8 ಕ್ವಿಂಟಲ್‌ ಆಗುವಷ್ಟು ಬೆಳೆ ಬಂದಿತ್ತು. ಕಟಾವಿಗೆ ಬತಿದ್ದಂಗೆ ಬಿಟ್ಟೂಬಿಡದಂತ ಮಳೆ ಸುರಿತು. ಈಗ ಬೆಳೆ ಪೂರ್ತಿ ಹಾಳಾಗಿದೆ. ಉದ್ದಿನ ಕಾಯಿ ಬಿಡಿಸೋಕೆ ಒಂದು ಎಕರೆಗೆ 4 ಸಾವಿರ ರೂಪಾಯಿ ಕೂಲಿ ಕೊಡಬೇಕು, ಮಷಿನ್‌ಗೆ ಕೊಡಬೇಕು, ಕೊಯ್ಲು ಮಾಡಿದ್ದು ಹಸನು ಮಾಡೋಕೂ ಕೂಲಿ ಕೊಡಬೇಕು. ಅದುನ್ನ ಮಾರ್ಕೆಟ್‌ ಹೊಯ್ಯೋಕೂ ಬಾಡಿಗೆ ಬಂಕ ಅಂತ ಕೊಡಬೇಕು….” ಎಂಬುದು ರೈತನ ಅಸಹಾಯಕತೆ ಮಾತುಗಳು.

ಬಾಗಲಕೋಟೆ ಜಿಲ್ಲೆಯ ರೈತ ದುಂಡಪ್ಪ ಗುಳೆಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ ತಮ್ಮ ಬೇಸಾಯದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಳೆ ಸುರಿತಲೇ ಐತೆ, ಇನ್ನೂ ಹೊಲಕ್ಕೆ ಇಳಿಯೋಕೂ ಆಗ್ತಿಲ್ಲ. ಕಾಯಿ ಬಿಡಿಸೋಕೆ ಹೋದ್ರೆ ಗಿಡದ ಸಮೇತ ಕಿತ್ತು ಬರುತ್ತೆ. ರಾಶಿ ಮಾಡಿದ್ದೀವಿ. 3 ಸಾವಿರ 4 ಸಾವಿರಕ್ಕೆ ಕೇಳ್ತಿದ್ದಾರೆ. 25 ವರ್ಷದಿಂದ ಬೇಸಾಯ ಮಾಡಿಕೊಂಡು ಬದುಕ್ತಿದಿವಿ. ಕೃಷಿಯೇ ನಮ್ಮ ಕಸುಬು…. ಎಂದು ರೈತ ದುಂಡಪ್ಪ ಹೆಮ್ಮೆಯಿಂದ ಹೇಳಿಕೊಂಡರು.

ವ್ಯವಸಾಯ ಮಾಡುವಾಗ ಏರಿಳಿತಗಳು ಆಗ್ತಿರ್ತವೆ. ಉಳ್ಳಾಗಡ್ಡಿ ಭೂಮಿಯಲ್ಲಿಯೇ ಬರ್ಸ್ಟ್‌ ಆಗಿಬಿಟ್ಟಿದೆ. ಎಲ್ಲ ಹೊಲದಲ್ಲಿಯೇ ಕೊಳೆಯುವುದಕ್ಕೆ ಶುರುವಾಗಿದೆ. ಜೂನ್‌ನಲ್ಲಿ ನಾಲ್ಕು ಎಕರೆಗೆ ಈರುಳ್ಳಿ ಬಿತ್ತನೆ ಮಾಡಿದ್ದೆ. ಸಣ್ಣ ಸಣ್ಣ ಗಡ್ಡೆಗಳಿವೆ. ಆದರೆ, ವಿಪರೀತ ಮಳೆಗೆ ಸಿಕ್ಕು ಬಿಳಿಸುಳಿ ರೋಗಕ್ಕೆ ತುತ್ತಾಗಿದೆ. ಇರುವ ಗಡ್ಡೆಗಳೂ ಕೊಳೆಯುತ್ತಿವೆ ಎಂಬುದು ದುಂಡಪ್ಪ ಗುಳೆಪ್ಪ ಅವರ ಅಸಹಾಯಕತೆಯ ನುಡಿಗಳು.

ಸರ್ಕಾರದಿಂದ ಪರಿಹಾರ ಸೇರಿದಂತೆ ಯಾವ್ಯಾವ ರೀತಿಯ ನಿರೀಕ್ಷೆ ಇದೆ ಎನ್ನುವ ಪ್ರಶ್ನೆಗೆ, “ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟಿದೆ ರೀ….. ಬೆಳೆಹಾನಿ ಪರಿಹಾರ ನೀಡಲು ತುಂಬಾ ಹಿಂದೇಟು ಹಾಕ್ತಾ ಇದೆ. ನಮಗೆ ಸರ್ಕಾರ ಕೊಡುವ ಪರಿಹಾರಕ್ಕೂ, ಬೆಳೆಗೆ ನಾವು ಖರ್ಚು ಮಾಡುವುದಕ್ಕೂ ಬಹಳ ವ್ಯತ್ಯಾಸ ಐತಿ.. 30ರಿಂದ 35 ಸಾವಿರದವರೆಗೆ ಒಂದು ಎಕರೆಗೆ ಖರ್ಚು ಮಾಡಿರ್ತಿವಿ. ಆದ್ರೆ ಸರ್ಕಾರ ಕೊಡೋದು ಎನ್‌ಡಿಆರ್‌ಎಫ್‌ ಅದು, ಇದು ಅಂತ 5 ಸಾವಿರ ಕೊಡ್ತರೋ, 6 ಸಾವಿರ ಕೊಡ್ತರೋ ಗೊತ್ತಿಲ್ಲ. ಅದನ್ನೂ ಸರಿಯಾಗಿ ಕೊಡೋಕೆ ತಯಾರಿಲ್ಲ ಅವರು. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕೂಡ ರೈತರ ಪರವಾಗಿ, ರೈತರು ನೆಮ್ಮದಿಯಿಂದ ಬದುಕುವಂತೆ ಅನುಕೂಲಗಳನ್ನು ಮಾಡುತ್ತಿಲ್ಲ. ಕೊನೆಪಕ್ಷ ಅತಿವೃಷ್ಟಿ, ಅನಾವೃಷ್ಟಿಯಂತಹ ಸಂದರ್ಭಗಳಲ್ಲಾದರೂ ರೈತರಿಗೆ ನೆರವಾಗೋದಿಲ್ಲ. ಇಂತಹ ಸರ್ಕಾರಗಳನ್ನು ನಾವು ನಂಬಿಕೊಂಡು ನಾವು ಏನು ಮಾಡೋದು ಮೇಡಂ” ಎಂದು ಪ್ರತಿಕ್ರಿಯಿಸಿದರು.

ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ, ನಿಮಗೆ ಹೇಗನ್ನಿಸ್ತಿದೆ ನಿಮಗೆ?.

ರೈತರ ಸ್ಥಿತಿ ಹೀಗೇ ಇರುತ್ತೆ ಮೇಡಂ. ಏನೂ ಮಾಡೋಕೆ ಆಗಂಗಿಲ್ಲ. ಒಂದ್ಸಲ ಅತಿವೃಷ್ಟಿ ಆಗುತ್ತೆ. ಒಂದ್ಸಲ ಅನಾವೃಷ್ಟಿ ಆಗುತ್ತೆ. ಯಾವುದೇ ಸಮಸ್ಯೆ ಇಲ್ಲದೆ ಬೆಳೆ ಚನ್ನಾಗಿ ಬಂದ್ರೆ ಸೂಕ್ತ ಬೆಲೆಯೇ ಸಿಗೋದಿಲ್ಲ. ರೈತನಿಗೆ ಇಂಥದೆಲ್ಲ ಹೊಸದೇನೂ ಅಲ್ರೀ. ಆದರೂ ರೈತರು ಇವತ್ತು ಒಂದು ರೀತಿಯ ಅಂತಂತ್ರದ ಸ್ಥಿತಿಯಲ್ಲಿದೀವಿ. ಕುಟುಂಬ, ಮನೆ-ಮಠ, ಮಕ್ಕಳು, ಸಂಸಾರ ಅಂತ ಇರ್ತೈತಿ ಅಲ್ವೇನ್ರೀ…… ನಾವು ಭೂಮೀನೇ ನಂಬಿಕೊಂಡು ಬದುಕೋ ಮಂದಿ. ಮುಂದಿನದೆಲ್ಲ ಅವಳೇ ನೋಡ್ಕೊತಳೆ ಬಿಡ್ರೀ…… ನಮ್ಮ ಕೈಯ್ಯಾಗ ಏನೈತ್ರೀ….. ಎಂಬಂತಹ ಮನಕಲಕುವ ಮಾತುಗಳನ್ನಾಡಿದರು.

ಇಷ್ಟೆಲ್ಲ ನಷ್ಟ ಅನುಭವಿಸಿದ್ರೂ ಕೂಡ ಮತ್ತೆ ಮುಂಗಾರು ಆರಂಭವಾಗುತ್ತಿದ್ದಂತೆ ಅದೇ ಸಂತಸದಲ್ಲಿ ಬಿತ್ತನೆ ಚಟುವಟಿಕೆಗಳನ್ನು ಆರಂಭಿಸ್ತೀರಾ. ಆ ಅನುಭವಕ್ಕೂ, ಬೆಳೆ ಕಳೆದುಕೊಂಡಾಗ ಆಗುವ ನೋವಿಗೂ ಏನನ್ನಿಸುತ್ತದೆ?

ರೈತ ಯಾರನ್ನೂ ನಂಬುವುದಿಲ್ಲ ಮೇಡಂ. ಭೂಮಿತಾಯಿಯನ್ನು ನಂಬಿ ಬಿತ್ತನೆ ಮಾಡ್ತನೆ, ಬೆಳೆಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡ್ತನೆ. ಅವುಗಳು ಕೇವಲ ಬೆಳೆ ಅನ್ನೋದು ಮಾತ್ರ ಅಲ್ಲ, ಅದರೊಟ್ಟಿಗೆ ಒಂದು ಸಂಬಂಧವನ್ನು ಬೆಳಿಸಿಕೊಳ್ತನೆ. ಯಾವುದೇ ಒಂದು ಸಸಿ ಬಾಡಿದಂತೆ ಕಂಡರೂ ಕೂಡ ಅದರ ಮುಂದೆ ಕುಳಿತು ಅದನ್ನು ಮೇಲೆತ್ತಿ ಸುತ್ತ ತಿರುಗಿಸಿ ನೋಡಿ, ಎಲೆಗಳನ್ನೆಲ್ಲ ನೋಡಿ ಯಾಕೆ ಹಿಂಗಾಗಿದೆ, ಏನಾಯ್ತು ಅಂತ ಬೇಸರ ಮಾಡಿಕೊಂಡು ಯೋಚನೆ ಮಾಡೋಕೆ ಶುರು ಮಾಡ್ತೀವಿ. ಅಯ್ಯೋ ಇದೊಂದು ಸಸಿ ಅಲ್ವ ಹೋದ್ರೆ ಹೋಗ್ಲಿ ಬಿಡು ಇನ್ನೂ ಎಷ್ಟೊಂದು ಸಸಿಗಳಿವೆ ಅನ್ನೋದಿಲ್ಲ.

“ಈಗ ಒಂದು ಮನೆಯಲ್ಲಿ ಎಷ್ಟೇ ಮಕ್ಕಳಿದ್ರೂ ಕೂಡ ಎಲ್ಲರನ್ನೂ ಒಂದೇ ತರ ನೋಡಿಕೊಳ್ತಿವಿ ಅಲ್ವಾ. ಹಾಗೆಯೇ ನಾವು ಬೆಳೆಯ ಜತೆಗೆ ಒಂದು ರೀತಿಯ ಸಂಬಂಧ ಬೆಳೆಸಿಕೊಂಡಿರ್ತಿವಿ. ಅನಿವಾರ್ಯವಾಗಿ ಸುಖ-ದುಃಖ ಎಲ್ಲವನ್ನೂ ಅನುಭವಿಸಬೇಕಾಗುತ್ತೆ, ಏನೂ ಮಾಡಕೆ ಆಗಲ್ಲ. ಆದರೂ ಮುಂಗಾರು ಆರಂಭ ಆಗ್ತಿದ್ದಂತೆ ಯಾರಿಂದನೂ ಯಾವುದೇ ಅಪೇಕ್ಷೆ ಪಡದೆ ಸಂತೋಷದಿಂದ ಭೂಮಿ ತಾಯಿಗೆ ಉಡಿ ತುಂಬುತ್ತೀವಿ(ಬಿತ್ತನೆ ಮಾಡುವುದು). ಪೋಷಣೆ ಮಾಡ್ತಿವಿ, ಕಟಾವಿಗೆ ಬರೋ ತನಕ ಮಕ್ಕಳು ಸಾಕಿದಂಗೆ ಸಾಕ್ತೀವಿ…. ಬಿತ್ತನೆ ಮಾಡುವಾಗ ಒಂಥರಾ ಹಬ್ಬ ಮಾಡ್ತಿದಿವಿ ಅನ್ನೋ ಅನುಭವ ಆಗುತ್ತೆ. ಆ ಧೈರ್ಯ, ಉತ್ಸಾಹ ಎಲ್ಲಿಂದ ಬರುತ್ತೋ ಗೊತ್ತಿಲ್ಲ. ʼಭೂಮಿತಾಯಿ ಏನು ಬಂಜೆಯೇ?ʼ ಇವತ್ತಿಲ್ಲ ನಾಳೆ ಕೊಡ್ತಳೆ….” ಎಂದು ವಿಶ್ವಾಸದ ಮಾತುಗಳನ್ನಾಡಿದರು.

“ಇದರಲ್ಲಿ ಭೂಮ್ತಾಯಿದು ಏನೂ ಮೋಸ ಇಲ್ಲ. ಆಕೆ ತನ್ನ ಮಕ್ಕಳಿಗೆ ಕೊಡಬೇಕಾದದ್ದನ್ನು ಕೊಡ್ತಳೆ. ಆದ್ರೆ ಹವಾಮಾನ ಬದಲಾವಣೆ, ಸರ್ಕಾರದ‌ ದುರಾಡಳಿತ, ಆಡಳಿತಗಾರರ ಮೊಂಡತನಗಳಿಂದ ರೈತರಿಗೆ ಅನ್ಯಾಯ ಆಗುತ್ತೆ….. ಆ ಭೂಮ್ತಾಯಿ ತನ್ನ ಮಕ್ಕಳನ್ನು ಯಾವತ್ತೂ ಕೈ ಬಿಡೋದಿಲ್ಲ. ವ್ಯವಸಾಯ ಜೂಜಾಟ ಇದ್ದಂಗೆ, ಹೋಗುತ್ತೆ ಬರುತ್ತೆ. ಬಂದಾಗ ಸಂಭ್ರಮಪಟ್ಟು, ಬೆಳೆ ಹಾಳಾದಾಗ ದೂರಿದ್ರೆ ಆಗುತ್ತಾ….. ʼಎಣ್ಣೆ ಹಚ್ಕೊಂಡು ಮಣ್ಣಿಗೆ ಬಿದ್ರೆ, ಎಷ್ಟು ಹತ್ತಬೇಕೋ ಅಷ್ಟೇ ಅತ್ತೋದುʼ ಬಂದಿದ್ದೆಲ್ಲ ನಮಗೇ ಬೇಕು ಅಂದ್ರೆ ಎಂಗಾಯ್ತದೆ?” ಎಂಬುದು ರೈತ ದುಂಡಪ್ಪ ಅವರ ಧಾರಾಳತನಕ್ಕೆ ಸಾಕ್ಷಿಯಾಗಿದೆ.

“ವ್ಯವಸಾಯಕ್ಕೆ ʼಆರಂಭʼ ಅಂತಲೂ ಹೇಳ್ತೀವಿ. ಅದಕ್ಕೆ ಅಂತ್ಯ ಅನ್ನೋದಿಲ್ಲ, ಯಾವಾಗಲೂ ಆರಂಭ ಮಾಡೋದು ಅಷ್ಟೇ ನಮ್ಮ ಕೆಲಸ. ಹಾಗಾಗಿ ನಾವು ಮುಂಗಾರಿನಲ್ಲಿ ಬಿತ್ತನೆ ಮಾಡುವಾಗ ಸಂತೋಷವಾಗಿ ಬಿತ್ತನೆ ಮಾಡ್ತೀವಿ, ಭೂಮ್ತಾಯಿ ಮಡಿಲಿಗೆ ಹಾಕ್ತೀವಿ. ಇವತ್ತಿಲ್ಲ ನಾಳೆ ಕೊಟ್ಟೇ ಕೊಡ್ತಳೆ ಅನ್ನೋ ನಂಬಿಕೆ ಮೇಲೆ ನಾವು ವ್ಯವಸಾಯವನ್ನು ಮಾಡ್ತಲೇ ಇದ್ದೀವಿ. ಸಿರಿ ಬಂದಾಗ ಹಿಗ್ಗಿಲ್ಲ, ನಷ್ಟ ಆಗ್ತಿದೆ ಅಂತ ಕುಗ್ಗಿ ಯಾವುದನ್ನೂ ಕೈಬಿಟ್ಟಿಲ್ಲ….” ಎನ್ನುವಂತಹ ನಂಬಿಕೆ ಮತ್ತು ಭರಸೆಯ ಮಾತುಗಳನ್ನಾಡಿದರು.

ಇದನ್ನೂ ಓದಿದ್ದೀರಾ? ʼಬೆಳೆ ಎಷ್ಟೇ ಹಾಳಾದ್ರೂ ಭೂಮ್ತಾಯಿಗೆ ಉಡಿ ತುಂಬ್ತೀವಿ’: ಬೆಳೆಹಾನಿಗೆ ತುತ್ತಾದ ರೈತರ ನುಡಿ

ರೈತ ಬೆಳೆಹಾನಿಯಿಂದ ಎಷ್ಟೇ ನೋವನುಭವಿಸಿದರೂ ಕೂಡ ಪ್ರಕೃತಿ ಮತ್ತು ಭೂಮಿಯನ್ನು ಆರಾಧಿಸದೇ ಇರಲಾರ. ಭೂಮಿಯನ್ನು, ತಾನು ನಂಬಿರು ಜಮೀನನ್ನು ತನ್ನ ತಾಯಿಗೆ ಹೋಲಿಕೆ ಮಾಡಿಕೊಂಡು ಅದೇ ತನ್ನ ಸರ್ವಸ್ವವೆಂದು ಇಡೀ ಬದುಕನ್ನು ಹೊಲಜಮೀನುಗಳಲ್ಲಿಯೇ ಸವೆಸುವುದನ್ನು ದುಂಡಪ್ಪ ಅವರ ಮಾತುಗಳಲ್ಲಿ ಕಾಣಬಹುದು. ಆದರೆ, ತನ್ನ ಬದುಕನ್ನು ಶ್ರಮದಲ್ಲಿಯೇ ಕಳೆಯುವ ರೈತರಿಗೆ ಆಡಳಿತ ಹಾಗೂ ಸರ್ಕಾರಗಳು ಸೂಕ್ತ ಪ್ರತಿಫಲವನ್ನು ನೀಡಲೇಬೇಕು. ರೈತ ಹೇಳಿದಂತೆ ಭೂಮಿತಾಯಿ ಎಂದಿಗೂ ಮೋಸ ಮಾಡುವುದಿಲ್ಲ ಎಂಬುದು ಅಕ್ಷರಶಃ ಸತ್ಯ. ಯಾಕಂದರೆ ಕಳಪೆ ಬಿತ್ತನೆಬೀಜ ವಿತರಣೆ, ರಸಗೊಬ್ಬರ ಪೂರೈಕೆಯಲ್ಲಿ ವಿಳಂಬ ಮತ್ತು ವಿಫಲ, ಅತಿವೃಷ್ಟಿ, ಅನಾವೃಷ್ಟಿ, ಸರ್ಕಾರದ ಅಸಹಕಾರ ಇಂತಹ ಅಂಶಗಳಿಂದ ರೈತ ಇವತ್ತೂ ಕೂಡ ನೋವನ್ನು ಅನುಭವಿಸುವಂತಾಗಿದೆ…..

ರೈತ ದೇಶದ ಬೆನ್ನೆಲುಬು ಎಂದು ಘೋಷಣೆಗಳನ್ನು ಹೇಳುವ ನಾವುಗಳೇ ರೈತನ ಬೆನ್ನೆಲುಬು ಪೋಷಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೆವೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕು. ರೈತ ತನ್ನ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಬೆಲೆದುಬ್ಬರ, ಆರ್ಥಿಕ ಬಿಕ್ಕಟ್ಟು ಸಂಭವಿಸುವುದು ದೂರದಲ್ಲಿಲ್ಲ. ಹಾಗಾಗಿ ಸರ್ಕಾರಗಳು, ಸಂಬಂಧಪಟ್ಟ ಇಲಾಖೆಗಳು ರೈತರ ನೆರವಿಗೆ ಧಾವಿಸಬೇಕು. ಬೆಳೆಹಾನಿಯಾದಾಗ ಸೂಕ್ತ ಬೆಳೆಪರಿಹಾರ, ಬಂದ ಬೆಳೆಗೆ ಬೆಲೆ ಇಲ್ಲದಂತಾದಾಗ ನಿಗದಿ ಬೆಲೆ ನೀಡುವ ಮೂಲಕ ರೈತರನ್ನು ಕಾಪಾಡಿಕೊಳ್ಳಬಹುದು…. ಈ ಮೂಲಕ ದೇಶದ ಬೆನ್ನೆಲುಬನ್ನು ಆರೋಗ್ಯವಾಗಿ ನೋಡಿಕೊಳ್ಳಬಹುದು…

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...