ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ನೂತನ ಪ್ರತಿಮೆ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಬಸವಕಲ್ಯಾಣ ಮಹಾಮನೆ ಟ್ರಸ್ಟ್‌ನ ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, ʼಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಡಿಯಲ್ಲಿ ನಾವೆಲ್ಲರೂ ಬದುಕಬೇಕಿದೆ. ನಮಗೆ ಸಂವಿಧಾನವೇ ಶ್ರೇಷ್ಟ ಗ್ರಂಥವಾಗಿದೆ. ದೇಶದಲ್ಲಿ ಎಲ್ಲಾ ಜಾತಿ,ಧರ್ಮದವರು ಸೌಹಾರ್ದತೆಯಿಂದ ಜೀವಿಸಲು ಸಂವಿಧಾನವೇ ಕಾರಣವಾಗಿದೆʼ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯರಿಗೆ ನೀಡಿದ ಶಿಕ್ಷಣ, ಸಂಘಟನೆ, ಹೋರಾಟದಂತಹ ಮೂರು ಸೂತ್ರಗಳು ನಾವು ಅನುಸರಿಸಬೇಕು. ನಾವೆಲ್ಲರೂ, ಅದರಲ್ಲೂ ಇಂದಿನ ಯುವ ಸಮೂಹ ಬಾಬಾ ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆʼ ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಪ್ರತಿಮೆ ಅನಾವರಣ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದನ್ನೂ ಓದಿ : ಔರಾದ್ | ಸೋಯಾ ಬಣವಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು : ₹1 ಲಕ್ಷ ಮೌಲ್ಯದ ಸೋಯಾ ನಾಶ
ಕಾರ್ಯಕ್ರಮದಲ್ಲಿ ಆಣದೂರಿನ ಭಂತೆ ಧಮ್ಮಾನಂದ, ಭಂತೆ ಸಂಗ ರಕ್ಷಿತ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಹಿರಿಯ ಕಾಂಗ್ರೆಸ್ ಮುಖಂಡ ಭೀಮಸೇನರಾವ ಸಿಂಧೆ, ಭಾರತೀಯ ಬೌದ್ಧ ಮಹಾಸಭಾದ ರಾಜಪ್ಪ ಗುನಳ್ಳಿ, ಮುಖಂಡ ತರುಣ ಸೂರ್ಯಕಾಂತ ನಾಗಮಾರಪಳ್ಳಿ, ಧನರಾಜ ಮುಸ್ತಾಪೂರ, ಪಿಎಸ್ಐ ಚಂದ್ರಶೇಖರ್, ಶಾಮಸುಂದರ ಖಾನಪೂರ, ಸೂರ್ಯಕಾಂತ ಸಿಂಗೆ ನಂದಾದೀಪ ಬೋರಾಳ, ಸುಭಾಷ ಲಾಧಾ, ಗಣಪತಿ ವಾಸುದೇವ, ಸತೀಶ್ ವಗ್ಗೆ ಸೇರಿದಂತೆ ಚಿಂತಾಕಿ ಗ್ರಾಮಸ್ಥರು, ಮತ್ತಿತರರು ಪಾಲ್ಗೊಂಡರು.





