ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ರಾಕೇಶ ಕಿಶೋರ್ ಎಂಬ ವಕೀಲರೊಬ್ಬರು ಶೂ ಎಸೆದಿರುವ ಘಟನೆಯನ್ನು ಖಂಡಿಸಿ ಔರಾದ್ ಪಟ್ಟಣದಲ್ಲಿ ಸೋಮವಾರ ನಾಗರಿಕ ಹೋರಾಟ ಸಮಿತಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಸೋಮವಾರ ಪಟ್ಟಣದ ಎಪಿಎಂಸಿ ಸಮೀಪದ ಕನ್ನಡಾಂಬೆ ವೃತ್ತದಿಂದ ವಕೀಲ್ ರಾಕೋಶ ಕಿಶೋರ್ ವಿರುದ್ಧ ಘೋಷಣೆ ಕೂಗುತ್ತ ಕೈಯಲ್ಲಿ ʼಸಿಜೆಐ ಗವಾಯಿ ಅವರನ್ನು ಅವಮಾನಿಸಿದ ರಾಕೇಶ ಕಿಶೋರ್‌ಗೆ ಗಲ್ಲುಶಿಕ್ಷೆ ವಿಧಿಸಿʼ ʼವಕೀಲ ರಾಕೇಶ ಕಿಶೋರ್ ನಾಲಾಯಕನಿಗೆ ಗಡಿಪಾರು ಮಾಡಿʼ, ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದ ವಕೀಲ ರಾಕೇಶಗೆ ದಿಕ್ಕಾರʼ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಬಸವೇಶ್ವರ ವೃತ್ತದವರೆಗೆ ತೆರಳಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ ಪಾಟೀಲ್ ಅವರಿಗೆ ರಾಷ್ಟ್ರಪತಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ನಾಗರಿಕ ಹೋರಾಟ ಸಮಿತಿ ಮುಖಂಡರು ಮಾತನಾಡಿ, ʼಸಂವಿಧಾನಾತ್ಮಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಜೆಐ ಗವಾಯಿ ಅವರ ಮೇಲೆ ರಾಕೇಶ ಕಿಶೋರ್ ಎಂಬ ನಾಲಾಯಕ ವಕೀಲ್ ಶೂ ಎಸೆಯುವುದು ಅತ್ಯಂತ ಹೇಯ ಮತ್ತು ರಾಷ್ಟ್ರವಿರೋಧಿ ಕೃತ್ಯವಾಗಿದೆ. ಇದರಿಂದ ಸಿಜೆಐ ಅವರಿಗೆ ಅಷ್ಟೇ ಅಲ್ಲದೆ ಇಡೀ ದೇಶದ ನಾಗರಿಕರಿಗೆ ಆಗಿರುವ ಅಪಮಾನ. ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ರಾಷ್ಟ್ರವಿರೋಧ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕುʼ ಎಂದು ಆಗ್ರಹಿಸಿದರು.

ʼಭಗವಾನ್ ಬುದ್ಧ ಹಾಗೂ ಡಾ.ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರೂ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಮನುವಾದಿಗಳ ಮನಸ್ಸಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆʼ ಎಂದರು.
ಸಿಜೆಐ ಬಿ.ಆರ್.ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕಿವೆ. ಈ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಈ ಘಟನೆಯನ್ನು ಖಂಡಿಸಬೇಕು. ವಕೀಲ ರಾಕೇಶ ವಿರುದ್ಧ ದೇಶದ್ರೋಹ, ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕು. ವಕೀಲರ ಸಂಘದ ಸದಸ್ಯತ್ವ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ :ಬೀದರ್ | ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಹೊಳಪು ತಂದುಕೊಟ್ಟ ಬೇಂದ್ರೆ : ಅನಂತ ಕೃಷ್ಣ ದೇಶಪಾಂಡೆ
ಪ್ರತಿಭಟನೆಯಲ್ಲಿ ಮುಖಂಡರಾದ ಭೀಮಶೇನ್‌ರಾವ್ ಸಿಂಧೆ, ಶಂಕರರಾವ್ ದೊಡ್ಡಿ, ಶಿವಮೂರ್ತಿ ಬಳತ್, ವೈಜಿನಾಥ ಒಡೆಯಾರ್, ಅಶೋಕ ದರಬಾರೆ, ರಾಮಣ್ಣಾ ಒಡೆಯಾರ್, ಸೋಪನರಾವ ಡೊಂಗ್ರೆ, ತಾನಾಜಿ ಮೇತ್ರೆ, ಲಕ್ಷ್ಮಮ ಡೊಂಗ್ರೆ, ಸಂತೋಷ ಸಿಂಧೆ, ಪ್ರಲ್ಹಾದ್ , ಧನರಾಜ್ ಮುಸ್ತಾಪುರ, ಪ್ರಕಾಶ ಜಾಧವ್ ಎಕಂಬಾ, ಉತ್ತಮ ಮಾಂಜ್ರೆಕರ್, ದಯಾಸಾಗರ ಬೆಂಡೆ, ವೈಜಿನಾಥ ಸಿಂಧೆ, ಸುನೀಲ ಮಿತ್ರಾ, ನಾಗನಾಥ ವಾಕೋಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.





