ಸರ್ಕಾರ ಮತ್ತು ಸಂಬಂಧಪಟ್ಟ ಮಂಡಳಿ ತಕ್ಷಣವೇ ಗಮನಹರಿಸಿ ಈ ಐತಿಹಾಸಿಕ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಮೂಲಕ ಗಾಂಧೀಜಿಯವರ ಸ್ವದೇಶಿ ಮತ್ತು ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವುದು ಕಾಲದ ಅವಶ್ಯಕತೆಯಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೇರಣೆಯಿಂದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಸ್ವದೇಶಿ ಚಳವಳಿಯ ಭಾಗವಾಗಿ ಹುಟ್ಟಿಕೊಂಡ ಈ ಕೇಂದ್ರವು ಭಾರತದ ಗ್ರಾಮೀಣ ಸ್ವಾವಲಂಬನೆ ಮತ್ತು ಕೈಮಗ್ಗ ಪರಂಪರೆಯ ಸಂಕೇತವಾಗಿ ಬೆಳೆದಿತ್ತು. ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಸ್ಫೂರ್ತಿ ಪಡೆದ ಈ ಕೇಂದ್ರವು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಗಾಂಧೀಜಿಯವರು ಸ್ವತಃ 1927 ಹಾಗೂ 1932ರಲ್ಲಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದರೆಂಬುದು ಇದರ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಶತಮಾನೋತ್ಸವದ ಹೊಸ್ತಿಲಲ್ಲಿರುವ ಬದನವಾಳು ಖಾದಿ ಕೇಂದ್ರ ಇದೇ ಸಮಯದಲ್ಲಿ ನಿರ್ಲಕ್ಷ್ಯದ ಹೊರೆಗೆ ಸಿಲುಕಿ ಅವನತಿಯತ್ತ ಸಾಗುತ್ತಿರುವುದು ದುಃಖಕರ ಸಂಗತಿ.
ಭಾರತದ ಖಾದಿ ಮತ್ತು ಕೈಮಗ್ಗ ಪರಂಪರೆಯ ಕೇಂದ್ರವಾಗಿ, ಗಾಂಧೀಜಿಯವರ ಸ್ವದೇಶಿ ಮತ್ತು ಗ್ರಾಮೀಣ ಸಬಲೀಕರಣ ಆದರ್ಶಗಳ ಸ್ಫೂರ್ತಿಯಿಂದ ಸ್ಥಾಪಿತವಾಗಿ, ಇಲ್ಲಿ ನೇಯ್ದ ಖಾದಿ ಬಟ್ಟೆಗಳು ಹೆಸರುವಾಸಿಯಾಗಿದ್ದವು. ಸ್ವಾವಲಂಬನೆ ಮತ್ತು ಸುಸ್ಥಿರ ಜೀವನಕ್ಕೆ ಸಾಕ್ಷಿಯಾಗಿ, ಸದಾ ಕ್ರಿಯಾಶೀಲ ಚಟುವಟಿಕೆಯ ತಾಣವಾಗಿದ್ದ ಖಾದಿ ಕೇಂದ್ರ ನಿರ್ಲಕ್ಷ್ಯಕ್ಕೆ ಒಳಪಟ್ಟು, ಅಭಿವೃದ್ಧಿ ಕಾಣದೆ ಇತಿಹಾಸದ ಪುಟದಲ್ಲಿ ಸೇರಿಕೊಳ್ಳುವ ಸಂದರ್ಭ ಒದಗಿಬಂದಿದೆ.

ಸ್ಥಳೀಯವಾಗಿ ಕುಶಲಕರ್ಮಿಗಳಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಿದೆ. ರೈತರು ಬೆಳೆದ ಹತ್ತಿಯನ್ನು ಬಳಸಿಕೊಂಡು ನೈಸರ್ಗಿಕ ಬಣ್ಣಗಳಿಂದ ಖಾದಿ ಬಟ್ಟೆಗಳನ್ನು ತಯಾರಿಸಲಾಗುತ್ತಿತ್ತು. ಈ ಕೇಂದ್ರವು ಕೇವಲ ಉದ್ಯೋಗವಕಾಶಗಳನ್ನೇ ಸೃಷ್ಟಿಸದೆ, ಸ್ವದೇಶಿ ತತ್ವ ಮತ್ತು ಸುಸ್ಥಿರ ಜೀವನದ ಸಂದೇಶವನ್ನು ಸಮಾಜಕ್ಕೆ ಸಾರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರಿಯಾದ ನಿರ್ವಹಣೆ ಮತ್ತು ಅಭಿವೃದ್ಧಿ ಕಾಣದೆ ಈ ಖಾದಿ ಕೇಂದ್ರ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ.

ಗಾಂಧೀಜಿ ಭೇಟಿ ನೀಡಿದ್ದ ಕಟ್ಟಡಕ್ಕೆ ಈಗ ಸುಮಾರು 99 ವರ್ಷಗಳು ತುಂಬಿವೆ. ಆದರೆ ಆ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಗೋಡೆಗಳಲ್ಲಿ ಬಿರುಕುಗಳು ಕಾಣಿಸುತ್ತಿವೆ. ಹಲವು ವರ್ಷಗಳಿಂದ ಸುಣ್ಣಬಣ್ಣ ಕಾಣದ ಕಟ್ಟಡಗಳು ಧೂಳು ಹಿಡಿದಿವೆ. ಅಸಡ್ಡೆಯ ನಡುವೆ ಧೂಳು ಹಿಡಿದುನಿಂತಿವೆ. ಸುತ್ತಮುತ್ತಲಿನ ಕಟ್ಟಡಗಳು ಈಗಾಗಲೇ ಪಳೆಯುಳಿಕೆಯಾಗಿ ಕುಸಿದುಬಿದ್ದಿದ್ದು, ಉಳಿದಿರುವ ಕಟ್ಟಡಗಳು ಗಿಡಗಂಟಿಗಳು, ಬಾವಲಿ, ಹಾವು-ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಈ ದಿಕ್ಕಿನಲ್ಲಿ ಸೂಕ್ತ ಗಮನ ಹರಿಸಲಾಗದಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಇಂತಹ ಐತಿಹಾಸಿಕ ಸ್ಥಳವನ್ನು ಸಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಅವಕಾಶ ಇದ್ದರೂ, ಆ ಪ್ರಯತ್ನಗಳು ನಡೆದಿಲ್ಲ. ಇದರಿಂದಾಗಿ ಖಾದಿ ಕೇಂದ್ರದ ಮಹತ್ವ ಮತ್ತು ಇತಿಹಾಸ ಮರೆಯಾಗುವ ಹಂತಕ್ಕೆ ತಲುಪಿದೆ ಇದಕ್ಕೆಲ್ಲ ಸರ್ಕಾರ, ಖಾದಿ ಮಂಡಳಿಯೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇನ್ನೊಂದು ವಿವಾದಾತ್ಮಕ ವಿಷಯವೆಂದರೆ ಖಾದಿ ಕೇಂದ್ರದ ಸುತ್ತ ಕಾಂಪೌಂಡ್ ನಿರ್ಮಾಣ. ಹಳೆಯ ಬೇಲಿಯನ್ನು ತೆಗೆದು ಸುಮಾರು 20 ರಿಂದ 30 ಅಡಿ ಜಾಗವನ್ನು ಹೊರಗಿಟ್ಟು ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕಾಗಿ ಹಳೆಯ ಮರಗಳನ್ನು ಕಡಿದು ಲಕ್ಷಾಂತರ ರೂಪಾಯಿ ವ್ಯಯಿಸಿರುವುದನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸುಮಾರು 99 ವರ್ಷಗಳ ಕಾಲ ಯಾವುದೇ ಕಾಂಪೌಂಡ್ ಅಗತ್ಯವಿರದಿದ್ದಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಹಳೇ ಬೇಲಿ ಇರುವಲ್ಲಿ ಈಗಲೂ ಮರಗಳಿದ್ದು ಅವುಗಳನ್ನು ಹೊರಗೆ ಬಿಟ್ಟು ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ಅನುಮಾನ ತರಿಸುತ್ತಿದೆ ಎನ್ನುತ್ತಾರೆ ಗಾಂಧೀವಾದಿಗಳು.

ಇನ್ನೊಂದೆಡೆ, ಸುಮಾರು ಆರು ವರ್ಷಗಳ ಹಿಂದೆ ₹1.5 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. ಆದರೆ ಅದು ಇಂದಿಗೂ ಉದ್ಘಾಟನೆಯಾಗಿಲ್ಲ ಹಾಗೂ ಬಳಕೆಗೆ ಬಂದಿಲ್ಲ. ಬದಲಾಗಿ ಅದು ಕುಡುಕರ ಅನೈತಿಕ ತಾಣವಾಗಿ ಮಾರ್ಪಟ್ಟಿರುವುದು ವಿಷಾದಕರ. ಅಲ್ಲದೆ ಕಟ್ಟಡದ ಗುಣಮಟ್ಟವೂ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬಾಗಿಲು ಮತ್ತು ಕಿಟಕಿಗಳನ್ನು ಹೊರತುಪಡಿಸಿ ಕಟ್ಟಡದಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲದೆ ಹಣ ದುರುಪಯೋಗವಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಗಾಂಧೀಜಿ ಭೇಟಿ ನೀಡಿದ ಹಳೆಯ ಕಟ್ಟಡವನ್ನು ಸಂರಕ್ಷಿಸುವ ಬದಲು ಅನಗತ್ಯ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿರುವುದೂ ಪ್ರಶ್ನೆ ಎಬ್ಬಿಸಿದೆ.

ಕೇಂದ್ರದಲ್ಲಿ ಬಳಸುತ್ತಿದ್ದ ನೂಲು ನೇಯುವ ಯಂತ್ರಗಳು ತುಕ್ಕು ಹಿಡಿದು ನಿಷ್ಕ್ರಿಯವಾಗಿವೆ. ಹೊಸದಾಗಿ ತಂದ ಯಂತ್ರೋಪಕರಣಗಳಿಗೂ ಸರಿಯಾದ ಬಳಕೆ ಇಲ್ಲದೆ ಅವುಗಳೂ ಕೂಡ ಧೂಳು ಹಿಡಿಯುತ್ತಿವೆ. ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿ ಕಾಣಿಸುತ್ತದೆ. ಸಾಕಷ್ಟು ಜಾಗ ಇದ್ದರೂ ಉದ್ಯಾನವನ ಅಥವಾ ಹಸಿರು ಪರಿಸರ ನಿರ್ಮಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಪ್ರವಾಸಿಗರು ಬಂದರೆ ಕುಳಿತುಕೊಳ್ಳಲು ಸೂಕ್ತ ಸ್ಥಳ ಇಲ್ಲದಿರುವುದು ಕೇಂದ್ರದ ನಿರ್ಲಕ್ಷ್ಯವನ್ನು ತೋರಿಸುತ್ತದೆ.

ಪ್ರಸ್ತುತ ಖಾದಿ ಕೇಂದ್ರದಲ್ಲಿ ಸುಮಾರು 45ಕ್ಕೂ ಹೆಚ್ಚು ಮಹಿಳೆಯರು ನೇಯ್ಗೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಇವರಿಗೆ ನೀಡಲಾಗುತ್ತಿರುವ ಕೂಲಿ ಅತಿ ಕಡಿಮೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಲಸ ಮಾಡುವ ಮಹಿಳೆಯರು ದಿನಕ್ಕೆ ಸುಮಾರು 20ರಿಂದ 25 ನೂಲು ಕಟ್ಟುಗಳನ್ನು ತಯಾರಿಸುತ್ತಾರೆ. ಪ್ರತಿ ಕಟ್ಟಿಗೆ ಕೇವಲ ₹10 ನೀಡಲಾಗುತ್ತಿದ್ದು, ದಿನಕ್ಕೆ ₹200 ರಿಂದ ₹250 ಮಾತ್ರ ಸಂಪಾದನೆ ಆಗುತ್ತಿದೆ. ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಸೇರಿದಂತೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಿರುವುದು ಕಾರ್ಮಿಕರ ಶೋಷಣೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ತಿಂಗಳಿಗೆ ಕೇವಲ ₹5,000 ರಿಂದ ₹6,000 ಆದಾಯದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ.

ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್’ ಕನಸಿನ ಆಧಾರದ ಮೇಲೆ ಸ್ಥಾಪಿತವಾದ ಸಂಸ್ಥೆಯಲ್ಲಿ ಕಾರ್ಮಿಕರಿಗೆ ಇಂತಹ ಕಡಿಮೆ ವೇತನ ನೀಡುತ್ತಿರುವುದು ಗಾಂಧೀವಾದಿಗಳಿಗೆ ನೋವುಂಟು ಮಾಡುತ್ತಿದೆ. ಕಾರ್ಮಿಕ ನೀತಿಗಳನ್ನು ಗಾಳಿಗೆ ತೂರಿರುವ ಖಾದಿ ಮಂಡಳಿಯ ಕಾರ್ಯಕ್ಷಮತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ.

ಗಾಂಧೀವಾದಿ ಹಾಗೂ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಮಾತನಾಡಿ, “ಗಾಂಧೀಜಿ ಭೇಟಿ ನೀಡಿದ ಬದನವಾಳು ಖಾದಿ ಕೇಂದ್ರದ ಇಂದಿನ ದುಃಸ್ಥಿತಿಯನ್ನು ಕಂಡಾಗ ಗಾಂಧೀವಾದಿಗಳ ಹೃದಯವೇ ನೋವು ಕಾಣುತ್ತದೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಎಂದರೆ ಹೊಸ ಕಟ್ಟಡ ನಿರ್ಮಾಣವಲ್ಲ; ಇರುವ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವುದೇ ನಿಜವಾದ ಅಭಿವೃದ್ಧಿ. ಖಾದಿ ಕೇಂದ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆದ ಸಾಕಷ್ಟು ಪ್ರಯತ್ನಗಳು ಸೋಲುತ್ತಿವೆ. ಖಾದಿ ಕೇಂದ್ರ ಉಳಿಸಿಕೊಳ್ಳಲಾಗದ ಪರಿಸ್ಥಿತಿ ನಿಜಕ್ಕೂ ದುರಂತ” ಎಂದರು.

“ಸರ್ಕಾರ ಗಾಂಧಿ ಮಿಷನ್ ಸ್ಥಾಪಿಸಿ ಅನುದಾನ ನೀಡುವ ಮೂಲಕ ಈ ಕೇಂದ್ರವನ್ನು ಅಭಿವೃದ್ಧಿಪಡಿಸಬೇಕಿತ್ತು. ಆದರೆ, ಗಾಂಧೀಜಿಯವರ ಆಶಯಕ್ಕೆ ವಿರುದ್ಧವಾಗಿ, ಅಭಿವೃದ್ಧಿ ಹೆಸರಿನಲ್ಲಿ ಮರಗಿಡ ಕಡಿದು ವಿರೂಪಗೊಳಿಸಲಾಗಿದೆ. ಬೇಡದ ಕೆಲಸಗಳಿಗೆ ಕೈಹಾಕಿ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬುವಂತೆ ಮಾಡಿಕೊಂಡಿದ್ದಾರೆಯೇ ವಿನಃ ಖಾದಿ ಕೇಂದ್ರದ ಅಭಿವೃದ್ಧಿ ಕಾಣಲಿಲ್ಲ ಎಂದು ಕಿಡಿಕಾರಿದ ಅವರು, ಕೈಮಗ್ಗ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಮುಚ್ಚಿರುವುದು ಕೈಮಗ್ಗ ಕ್ಷೇತ್ರಕ್ಕೆ ದೊಡ್ಡ ಹೊಡೆತವಾಗಿದೆ. ಇದರಿಂದ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಕಳೆದ ಮೂರು ವರ್ಷಗಳ ಹಿಂದೆ ಮಖ್ಯಮಂತ್ರಿಗಳು ತಮ್ಮ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದ್ದ ಮಹಾತ್ಮ ಗಾಂಧಿ ಗೃಹೋದ್ಯಮ ಅನುಷ್ಠಾನ ನೆನೆಗುದಿಗೆ ಬಿದ್ದಿದೆ. ಖಾದಿ ಉದ್ಯಮ ನೆನೆಗುದಿಗೆ ಬೀಳುವಂತೆ ಮಾಡಿ ಜವಳಿ ಉದ್ಯಮಕ್ಕೆ ಉತ್ತೇಜನ ನೀಡುತ್ತಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಸರ್ಕಾರ ಇಂತಹ ವಿರೋಧಿ ನಡೆ ಅನುಸರಿಸಿದರೆ ಗಾಂಧೀವಾದಿಗಳು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

“ಜವಳಿ ಉದ್ಯಮ ಬೃಹತ್ ಉದ್ಯಮವಾಗಿ ನಗರ ಸೀಮಿತ ಉದ್ಯೋಗಾವಸ್ತೆ ಹೊಂದಿದೆಯೇ ಹೊರತು, ಗ್ರಾಮೀಣ ಉದ್ಯೋಗ ಉತ್ತೇಜನ ಆಸಕ್ತಿ ಹೊಂದಿರುವುದಿಲ್ಲ. ಇದರಿಂದಾಗಿ ಸಾವಿರಾರು ಕೋಟಿ ರೂಪಾಯಿ ಹಣ ವ್ಯರ್ಥವಾಗುತ್ತಿದೆ. ಈಗಲಾದರೂ ಜವಳಿ ಸಚಿವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂಬುದು ಗಾಂಧೀವಾದಿಗಳ ಆಶಯ. ಗಾಂಧಿ ಕೇಂದ್ರದ ಪುನಶ್ಚೇತನ ಕಾರ್ಯಕ್ಕೆ ಅಧಿಕಾರಿಗಳ ಧಾವಂತ ಅಡ್ಡಿಪಡಿಸಿದಂತಾಗಿದೆ. ಖಾದಿ ಕೇಂದ್ರದಲ್ಲಿ ಇತ್ತೀಚಿಗೆ ನಡೆದ ಸ್ವಚ್ಛತಾ ಕಾರ್ಯ, ಶ್ರಮದಾನ, ಗ್ರಾಮ ಸಭೆಗಳಿಗೆ ಮಹತ್ವ ಸಿಗದೆ ವ್ಯರ್ಥ ಪ್ರಯತ್ನ ನಡೆಸಿದಂತಾಗಿದೆ. ಖಾದಿ ಕೇಂದ್ರ ಪುನಶ್ಚೇತನಕ್ಕೆ ವರದಿ ಸಿದ್ದಪಡಿಸಿ ಮುಖ್ಯಮಂತ್ರಿಗಳಿಗೆ ನೀಡಿದ್ದು, ಇಚ್ಛಾಶಕ್ತಿ ತೋರಬೇಕಿದೆ. ಇಲ್ಲವಾದಲ್ಲಿ ಅಹಿಂಸಾ ಮಾರ್ಗದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಸಿದ್ದ. ಖಾದಿ ಕೇಂದ್ರದ ಮುಂದಿರುವ ರೈಲು ನಿಲ್ದಾಣಕ್ಕೆ ‘ಖಾದಿ ರೈಲ್ವೇ ನಿಲ್ದಾಣ’ವೆಂದು ಮರುನಾಮಕರಣ ಮಾಡಬೇಕು” ಎಂದು ಒತ್ತಾಯಿಸಿದರು.
ದೀನಬಂಧು ಸಂಸ್ಥೆಯ ಪ್ರೊ. ಜಯದೇವ್ ಅವರು ಮಾತನಾಡಿ, “ಖಾದಿ ಗ್ರಾಮೋದ್ಯೋಗದ ಮೇಲೆ ಅವಲಂಬಿತರಾಗಿರುವ ಸ್ಥಳೀಯ ಮಹಿಳೆಯರ ಜೀವನ ಸುಧಾರಿಸಬೇಕು. ಸಬರಮತಿ ಆಶ್ರಮದ ಮಾದರಿಯಲ್ಲಿ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲು ಗ್ರಾಮಸಭೆ ನಡೆಸಿ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ಬಂದಿಲ್ಲ” ಎಂದು ಹೇಳಿದ್ದಾರೆ.

“ಕಳೆದ ಬಜೆಟ್‌ನಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಅಭಿವೃದ್ಧಿಗೆ ₹40 ಕೋಟಿ ಅನುದಾನ ಘೋಷಿಸಲಾಗಿದ್ದರೂ ಅದು ಸಮರ್ಪಕವಾಗಿ ಬಳಸಲ್ಪಟ್ಟಿಲ್ಲ ಎಂಬ ಆರೋಪ ಇದೆ. ಕ್ಲಸ್ಟರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕಿದ್ದ ಯೋಜನೆಗಳು ಇನ್ನೂ ನೆನೆಗುದಿಗೆ ಬಿದ್ದಿವೆ. ಅನಗತ್ಯ ಕಟ್ಟಡ, ಕಾಂಪೌಂಡ್ ನಿರ್ಮಾಣದ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ” ಎಂದು ಆರೋಪಿಸಿದರು.
“ನೂಲು ನೇಯುವ ಮಹಿಳೆಯರಿಗೆ ಸೂಕ್ತವಾದ ಭತ್ಯೆ ಸಿಗುತ್ತಿಲ್ಲ. ಒಂದು ತಿಂಗಳು ಸಿಕ್ಕರೆ ಮತ್ತೊಂದು ತಿಂಗಳು ಸಿಗದ ಪರಿಸ್ಥಿತಿ ಇದೆ. ಉತ್ತಮ ವೇತನ ಇಲ್ಲದೆ ಅತ್ಯಂತ ಕಡಿಮೆ ಹಣಕ್ಕೆ ದುಡಿಯುತ್ತಿದ್ದಾರೆ. ಶ್ರಮಸಹಿತ ಸರಳ ಜೀವನ ಹಾಗೂ ಗ್ರಾಮೋದ್ಯೋಗಕ್ಕೆ ಒತ್ತು ನೀಡಬೇಕಿತ್ತು. ಆ ನಿಟ್ಟಿನಲ್ಲಿ ಮುಂದಾಗಿಲ್ಲ. ಖಾದಿ ಕೇಂದ್ರದಲ್ಲಿ ಸಿದ್ದವಾಗುವ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸಿಲ್ಲ, ಹಾಗೆಯೇ ಕೊಳ್ಳುವವರೂ ಇಲ್ಲದಿರುವುದು ಶೋಚನಿಯ” ಎಂದರು.

“ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಇಲ್ಲಿ ಭೇಟಿ ನೀಡಿದ್ದ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾದಿ ಕೇಂದ್ರ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಆದರೆ ಇತ್ತೀಚಿನ ಪರಿಸ್ಥಿತಿ ನೋಡಿದರೆ ಆ ಭರವಸೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತೈಲ ಖರೀದಿಯಲ್ಲಿ ವಿಶ್ವಗುರುವಿಗೆ ದೊಣ್ಣೆ ನಾಯಕನ ಅಪ್ಪಣೆ ಯಾಕೆ?
ಒಟ್ಟಿನಲ್ಲಿ, ಶತಮಾನೋತ್ಸವದ ಹಂತದಲ್ಲಿರುವ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವು ತನ್ನ ಐತಿಹಾಸಿಕ ಮಹತ್ವವನ್ನು ಕಾಪಾಡಿಕೊಳ್ಳುವ ಬದಲು ನಿರ್ಲಕ್ಷ್ಯದಿಂದ ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ. ಸರ್ಕಾರ ಮತ್ತು ಸಂಬಂಧಪಟ್ಟ ಮಂಡಳಿ ತಕ್ಷಣವೇ ಗಮನಹರಿಸಿ ಈ ಐತಿಹಾಸಿಕ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಮೂಲಕ ಗಾಂಧೀಜಿಯವರ ಸ್ವದೇಶಿ ಮತ್ತು ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವುದು ಕಾಲದ ಅವಶ್ಯಕತೆಯಾಗಿದೆ.





