ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ಲಾಭಕೋರ ಸಂಸ್ಕೃತಿಯ ಕಾಲಘಟ್ಟದಲ್ಲಿ ಮಾನವೀಯತೆಯು ಅವನತಿ ಹೊಂದುತ್ತಿರುವ ದುಗುಡವನ್ನು ಮಹಾಂತೇಶ ಪಾಟೀಲ ಅವರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಬಸವಕಲ್ಯಾಣದ ಸಾಹಿತಿ ಭೀಮಾಶಂಕರ ಬಿರಾದಾರ ಅಭಿಪ್ರಾಯಪಟ್ಟರು.
ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯು ಮುಧೋಳನ ಬಿವಿವಿಎಸ್ ಸಂಸ್ಥೆಯ ಎಸ್ ಆರ್ ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಯುವ ಸಾಹಿತಿ- ಸಾಹಿತ್ಯಾನುಸಂಧಾನ’ ಸಮಾರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಲೇಖಕ ಮಹಾಂತೇಶ ಪಾಟೀಲ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಂಸ್ಕೃತಿಕ ಯಜಮಾನಿಕೆ ಪ್ರಶ್ನಿಸುವ, ಅಧಿಕಾರದ ಹಲವು ಮುಖಗಳನ್ನು ಸೂಕ್ಷ್ಮವಾಗಿ ಅರಿಯಲು ಸಾಹಿತ್ಯದ ಗಂಭೀರ ಅನುಸಂಧಾನ ಅಗತ್ಯ ಎಂದು ಹೇಳಿದರು.
“ಜಾಗತೀಕರಣ, ಮುಕ್ತ ಮಾರುಕಟ್ಟೆ, ಬಂಡವಾಳಶಾಹಿ ಸೇರಿದಂತೆ ಹಲವು ಪ್ರಭುತ್ವಗಳು ಜನ ಬದುಕನ್ನು ಹೇಗೆ ನಿಯಂತ್ರಿಸುತ್ತವೆ. ಎಷ್ಟೆಲ್ಲ ಸಂದಿಗ್ಧತೆಗೆ ಕಾರಣವಾಗಿವೆ ಎಂಬುದನ್ನು ಮಹಾಂತೇಶ ಪಾಟೀಲ ಅವರ ಕವಿತೆಗಳು ಧ್ವನಿಸುತ್ತವೆ. ಜನಮುಖಿಯಾಗದ ಯೋಜನೆಗಳು, ರಾಜಕಾರಣದ ಹಲವು ತಂತ್ರಗಳು, ಲೋಕೋದ್ಧಾರದ ಸೂತ್ರಗಳೆಂಬ ಕಣ್ಕಟ್ಟುಗಳು ಹೇಗೆ ಜನರ ಬದುಕಿನ ಸೂತ್ರ ತಪ್ಪಿಸುತ್ತದೆ ಎಂಬುದುರ ಕುರಿತು ಪಾಟೀಲರ ಕಾವ್ಯ ಮಾತನಾಡಿದೆ” ಎಂದರು.
“ಆಧುನಿಕೋತ್ತರ ಚಿಂತನೆಗಳು, ಪರಿಸರವಾದಿ ತತ್ವಗಳು ತಮ್ಮ ವಿಮರ್ಶೆಗೆ ಪರಿಕರಗಳಾಗಿ ಹಳಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಪಠ್ಯಗಳನ್ನು ವಿಮರ್ಶಿಸುವಾಗ ಬಳಸಿದ್ದಾರೆ. ‘ಬೆಳಕು ಬೆಳೆಯುವ ಹೊತ್ತು’ ಕೃತಿಯ ಮೂಲಕ ಕನ್ನಡಕ್ಕೆ ಮಹಾಂತೇಶ ಪಾಟೀಲ ಅವರು ಭರವಸೆಯ ವಿಮರ್ಶೆಕರಾಗಿ ಸಿಕ್ಕಿದ್ದಾರೆ” ಎಂದರು.
ಇದನ್ನೂ ಓದಿ: ಬಾಗಲಕೋಟೆ | ರೈಲು ಸೇವೆ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರಿನ ಸಾಹಿತಿ ಸಂಗಮೇಶ ಗಣಿ, ಚೇತನ್ ನಾಗರಾಳ, ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಕವಿ-ವಿಮರ್ಶಕ ಮಹಾಂತೇಶ ಪಾಟೀಲ, ಪ್ರಾಂಶುಪಾಲ ಪ್ರೊ. ಎಂ ಆರ್
ಜರಗುಂಟಿ, ಡಾ. ಮಹಾಂತೇಶ ಪಾಟೀಲ, ಪ್ರೊ. ಎಸ್ ಎಸ್ ಬಿರಾದಾರ, ಡಾ. ಪ್ರಹ್ಲಾದ ಕೆ, ಪ್ರೊ. ಆರ್ ಆರ್ ಮಾಲಿಪಾಟೀಲ, ಪ್ರೊ. ಡಿ ಬಿ ಕುಂಬಾರ, ಪ್ರೊ. ವಿ ಎಮ್ ಕಿತ್ತೂರ ಹಾಗೂ ಇತರರು ಉಪಸ್ಥಿತರಿದ್ದರು.





