ಅಕ್ಟೋಬರ್ 20ರೀಂದ ದೀಪಾವಳಿ ಆರಂಭವಾಗಲಿದೆ. ಆದರೆ, ದೀಪಾವಳಿ ಮುನ್ನವೇ ಪಟಾಕಿ ಸೇರಿದಂತೆ ಬೆಂಕಿ ಅವಘಡಗಳು ವರದಿಯಾಗುತ್ತಿವೆ. ಮನೆ ಬಾಗಿಲಿನಲ್ಲಿ ಹಚ್ಚಿದ್ದ ದೀಪದಿಂದಾಗಿ ಇಡೀ ಮನೆಯೇ ಹೊತ್ತಿ ಉರಿದು, 7 ಮಂದಿಗೆ ಗಾಯಗಳಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗದ್ದನಕೇರಿ ಕ್ರಾಸ್‌ನಲ್ಲಿರುವ ಉಮೇಶ್ ಮೇಟಿ ಎಂಬವರ ಮನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೀಪಾವಳಿ ಆಚರಣೆಗಾಗಿ ಉಮೇಶ್ ಮೇಟಿ ಅವರಿಗೆ ಸೇರಿದ ಕಟ್ಟಡದ ಮನೆಯೊಂದರಲ್ಲಿ ರಾಜೇಂದ್ರ ತಪಶೆಟ್ಟಿ ಎಂಬವರ ಕುಟುಂಬ ಬಾಡಿಗೆಗೆ ವಾಸವಾಗಿತ್ತು. ರಾಜೇಂದ್ರ ಅವರ ಕುಟುಂಬಸ್ಥರು ಮನೆ ಬಾಗಿಲಿನಲ್ಲಿ ದೀಪ ಹಚ್ಚಿಟ್ಟಿದ್ದರು. ದೀಪದ ಪಕ್ಕದಲ್ಲಿ ಬಿದ್ದಿದ್ದ ವಾಹನದ ಗ್ರೀಸ್‌ಗೆ ದೀಪದ ಬೆಂಕಿ ತಗುಲಿದ್ದು, ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಬೆಂಕಿ ವ್ಯಾಪಿಸಿದ ಪರಿಣಾಮ, ಮನೆಯ ಬಳಿಯಿದ್ದ ಎರಡು ಬೈಕ್ ಸುಟ್ಟುಹೋಗಿವೆ. ಮನೆಯೂ ಹೊತ್ತಿ ಉರಿದಿದೆ. ಮನೆಯಲ್ಲಿದ್ದ ಸಿಲಿಂಡರ್ ಕೂಡ ಸ್ಪೋಟಗೊಂಡಿದ್ದು, ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಬೆಂಕಿಹೊತ್ತಿಕೊಂಡ ಕೂಡಲೇ ಮನೆಮಂದಿ ಹೊರಗೆ ಓಡಿಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ, ಸಣ್ಣ-ಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಬೆಂಕಿ ಶಮನ ಮಾಡಿದ್ದಾರೆ.




