ಶೋಷಿತ ಸಮುದಾಯಗಳ ಹಿರಿಯ ನಾಯಕ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರನ್ನು ಪುನಃ ಮಂತ್ರಿ ಮಂಡಲಕ್ಕೆ ಸೇರಿಸಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಬಾಗಲಕೋಟೆ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಅವರು ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ಬಾಗಲಕೋಟೆ ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, ತೀವ್ರವಾಗಿ ಖಂಡಿಸಿದ್ದು, “ರಾಜಣ್ಣ ಅವರು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದರು. ಅಂತಹವರನ್ನು ಸಂಪುಟದಿಂದ ವಜಾಗೊಳಿಸಿದ್ದು ವಾಲ್ಮೀಕಿ ಸಮುದಾಯಕ್ಕೆ ಮಾಡಿದಂತಹ ದೊಡ್ಡ ಅನ್ಯಾಯವಾಗಿದೆ. ಸುಮಾರು 50 ವರ್ಷಗಳಿಗೂ ಅಧಿಕ ಕಾಲ ರಾಜಕೀಯ ಜೀವನ ನಡೆಸುತ್ತ ಬಂದಿದ್ದಾರೆ. ಅಂತಹವರನ್ನು ಪಕ್ಷವು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ” ಎಂದು ಹೇಳಿದರು.
“ಎಸ್‌ಟಿ ಸಮುದಾಯದವರ ಧ್ವನಿಯಾಗಿ ಹಾಗೂ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತ ಕೆಲಸಗಾರರಾಗಿದ್ದು, ಇಂದಿರಾ ಗಾಂಧಿಯವರನ್ನು ಬಂಧಿಸಿದಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡು ಲಾಠಿ ಪ್ರಹಾರವನ್ನು ಎದುರಿಸಿದ್ದಾರೆ ತುಮಕೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಯಾಗಿ ಶ್ರಮಿಸಿ ಕಳೆದ 25 ವರ್ಷಗಳ ನಂತರ ಹಾಸನ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಪಕ್ಷವು ಪಡೆಯಲು ರಾಜಣ್ಣ ಅವರು ಕಾರಣಿಕರ್ತರಾಗಿದ್ದಾರೆ. ಇಂತಹ ವ್ಯಕ್ತಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದು ಎಷ್ಟು ಸರಿ? ಕಾಂಗ್ರೆಸ್ ಹೈಕಮಾಂಡ್ ಕೂಡಲೇ ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದುದಿದ್ದೀರಾ? ಕೋಲಾರ ತಾಲೂಕಿನ 30 ಕೆರೆ ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಸಮಾಜದ ಮುಖಂಡ ಪ್ರಕಾಶ್ ನಾಯ್ಕರ್ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ರಾಜಣ್ಣನವರೇ ಕಾರಣ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ವಾಲ್ಮೀಕಿ ಜನಾಂಗವನ್ನು ತುಳಿಯುತ್ತಿದ್ದು ಸಮಾಜವು ಎಚ್ಚೆತ್ತುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಕೂಡಲೇ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು” ಎಂದು ಆಗ್ರಹಿಸಿದರು.
“ಮಂತ್ರಿ ಮಂಡಲಕ್ಕೆ ಸೇರಿಸಲು ಆಗ್ರಹಿಸಿ ಜಿಲ್ಲೆಯಿಂದ ರಾಹುಲ್ ಗಾಂಧಿಯವರಿಗೆ ಒಂದು ಸಾವಿರ ಪತ್ರಗಳ ಚಳವಳಿ ಮುಖಾಂತರ ಮನವಿ ಮಾಡಿಕೊಳ್ಳಲಾಗುವುದು” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಮಾಲಗಿ, ಬಸವರಾಜ್ ತಳವಾರ, ಹೇಮಂತ ಚೂರಿ, ಮಂಜುನಾಥ್ ದಳವಾಯಿ ಇದ್ದರು.





