ದಲಿತ ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕೆ ಪುತ್ರಿಯನ್ನೇ ಹತ್ಯೆ ಮಾಡಿರುವ ಹುಬ್ಬಳ್ಳಿ ತಾಲೂಕು ಇನಾಂವೀರಾಪುರ ಗ್ರಾಮದ ಮರ್ಯಾದೆ ಹತ್ಯೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಬಾಗಲಕೋಟೆ ಜಿಲ್ಲೆಯ ನವನಗರದ ಜಿಲ್ಲಾಡಳಿತ ಭವನ ಮುಂಭಾಗ ಪ್ರತಿಭಟನೆ ನಡೆಸಿ ಸಂಘಟನೆ ಪದಾಧಿಕಾರಿಗಳು, ದಲಿತ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾದ ಮಾನ್ಯಾಳನ್ನು ಆಕೆಯ ತಂದೆ ಪ್ರಕಾಶಗೌಡ ಪಾಟೀಲ, ಪ್ರೀತಮ್ ಗೌಡ ಪಾಟೀಲ, ಅರುಣಗೌಡ ಪಾಟೀಲ, ಈರಪ್ಪ ಹಾಗೂ ಮುದುಕಪ್ಪ ಸೇರಿ ಹತ್ಯೆ ಮಾಡಿದ್ದಾರೆ. ಆಕೆ ತುಂಬು ಗರ್ಭಿಣಿಯಾಗಿದ್ದಳು. ವಿವೇಕಾನಂದ ಅವರ ತಂದೆಯ ಮೇಲೂ ಹಲ್ಲೆ ಮಾಡಲಾಗಿದೆ. ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮರ್ಯಾದೆ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಹೊಸದಾಗಿ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಬಾಗಲಕೋಟೆ | ವಿಬಿ ಜಿ ರಾಮ್ ಜಿ ಅಂಗೀಕಾರ: ಕೇಂದ್ರದ ವಿರುದ್ಧ ಡಿ.22ರಂದು ಬೃಹತ್ ಪ್ರತಿಭಟನೆ
ವಿವೇಕಾನಂದ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ 10 ಎಕರೆ ಜಮೀನು ನೀಡಬೇಕೆಂದು ಅವರು ಒತ್ತಾಯಿಸಿದರು. ಈ ವೇಳೆ ರಾಜ್ಯ ಸಂಚಾಲಕ ಶಾಮರಾವ ಘಾಟಿಗೆ, ರಾಜ್ಯ ಸಂಘಟನಾ ಸಂಚಾಲಕ ಪ್ರಭು ಮೇಗಳಮನಿ, ಬೆಳಗಾವಿ ವಿಭಾಗ ಸಂಘಟನಾ ಸಂಚಾಲಕ ಹಣಮಂತ ಚಿಮ್ಮಲಗಿ, ಬಾಗಲಕೋಟೆ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ, ಆನಂದ ದೊಡಮನಿ, ಸಂಗಣ್ಣ ಮಡ್ಡಿ, ಕೃಷ್ಣಮೂರ್ತಿ ನಾಯಕರ, ಅರ್ಜುನ ದೊಡಮನಿ, ಲಕ್ಷ್ಮಣ ಹರಿಜನ, ನಾಗೇಶ ಗಸ್ತಿ ಮತ್ತಿತರರು ಉಪಸ್ಥಿತರಿದ್ದರು.





