ಭಾರತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ ಶೂ ಎಸೆದ ಘಟನೆಯನ್ನು ವಿರೋಧಿಸಿ ಬಾಗಲಕೋಟೆಯಲ್ಲಿ ವಿವಿಧ ದಲಿತ ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಅಕ್ಟೋಬರ್ 17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಪರಶುರಾಮ ಮಹಾರಾಜನವರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವುದು ಬರೀ ವ್ಯಕ್ತಿಯ ವಿರುದ್ಧವಲ್ಲ, ಅದು ಈ ದೇಶದ ನ್ಯಾಯಾಂಗ, ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ವಕೀಲ ನಡೆಸಿರುವ ದಾಳಿಯಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತರವೇ ಅಡಗಿದೆ. ನ್ಯಾಯಮೂರ್ತಿ ಗವಾಯಿ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸಂವಿಧಾನದ ಆಧಾರದ ಮೇಲೆ ನೀಡಿರುವ ಕೆಲವು ಪ್ರಕರಣಗಳಲ್ಲಿ ನೀಡಿರುವ ಐತಿಹಾಸಿಕ ತೀರ್ಪು ಅವುಗಳಿಂದ ಯಾರಿಗೆ ಹಿನ್ನಡೆ ಆಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಅವರ ಮೇಲೆ ಗೊತ್ತಾಗುತ್ತದೆ” ಎಂದು ಹೇಳಿದರು.
“ಈ ದೇಶದ ಸಂವಿಧಾನವನ್ನು ಒಪ್ಪದ ಮನಸ್ಥಿತಿಯಲ್ಲಿ ಇರುವ ಮನುಸ್ಮೃತಿಯನ್ನು ಶಾಸನವಾಗಿ ಮರು ಪ್ರತಿಷ್ಠಾಪಿಸುವ ಹುನ್ನಾರ ಇದರಲ್ಲಿ ಅಡಗಿದೆ. ಯಾವುದೇ ದೇಶದಲ್ಲಿ ನಡೆಯುವ ಚುನಾವಣೆಗಳ ಬಗ್ಗೆ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿ ಶೂ ಎಸೆದ ಘಟನೆ ನಡೆದ ಒಂಬತ್ತು ಗಂಟೆಗಳ ಬಳಿಕ ಕಾಟಾಚಾರಕ್ಕೆ ಎಂಬಂತೆ ಟ್ವೀಟ್ ಮಾಡಿದ್ದಾರೆ. ಇನ್ನೂ ಘಟನೆಯನ್ನು ದೇಶದ ಬಿಜೆಪಿ ಮುಖಂಡರು ಗಟ್ಟಿ ಧ್ವನಿಯಲ್ಲಿ ಖಂಡಿಸಲಿಲ್ಲ” ಎಂದು ಟೀಕಿಸಿದರು.
“ಎಲ್ಲವನ್ನು ತಿಳಿದುಕೊಂಡಿರುವ ವಕೀಲ ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ನಡೆಸಿದ್ದಾನೆ. ಇದರಿಂದ ಪ್ರಪಂಚದ ಮುಂದೆ ಭಾರತ ತಲೆತಗ್ಗಿಸುವಂಥ ಆಗಿದೆ. ಸೆ.16ರಂದು ಗಾವಾಯಿ ಅವರು ಹೇಳಿಕೆ ನೀಡಿದ್ದರು. ಅದಾದ 20 ದಿನಗಳ ಬಳಿಕ ವಕೀಲ ಶೂ ಎಸೆಯುತ್ತಾನೆ. ಆದರೂ ನ್ಯಾಯಮೂರ್ತಿಗಳು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಕರುಣೆ ತೋರಿಸಿದ್ದಾರೆ. ಆದರೆ, ಅದನ್ನು ನಾವು ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಹುನ್ನಾರ ಇದೆ. ದಲಿತ ನ್ಯಾಯಮೂರ್ತಿಗಳಿಗೆ ಮಾಡಿರುವ ದಾಳಿ ಇದಾಗಿದೆ. ಇದನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸುತ್ತೇವೆ” ಎಂದರು.
ಇದನ್ನೂ ಓದಿ: ಬಾಗಲಕೋಟೆ | ಭಾರೀ ಮಳೆಯಿಂದ ಈರುಳ್ಳಿ ಬೆಳೆನಾಶ; ಪರಿಹಾರಕ್ಕೆ ಕಿಸಾನ್ ಸಂಘ ಆಗ್ರಹ
ದಲಿತ ಮುಖಂಡ ಪೀರಪ್ಪ ಮ್ಯಾಗೇರಿ ಮಾತನಾಡಿ, “ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಲಯದಲ್ಲಿ ದಲಿತ ನ್ಯಾಯಮೂರ್ತಿ ಮೇಲೆ ಶೋ ಎಸೆದಿರುವುದನ್ನು ದೇಶದ ಜನರು ಬಲವಾಗಿ ಖಂಡಿಸುತ್ತಾರೆ ಅಲ್ಲದೆ ಆರೋಪಿ ವಕೀಲನೆಗೆ ಗಲ್ಲು ಶಿಕ್ಷೆ ವಿಧಿಸಬೇಕು. ದಲಿತರು ಹಿಂದುಗಳಲ್ಲವೇ? ದೇಶದಲ್ಲಿ ದಲಿತರನ್ನು ಹತ್ತಿಕ್ಕುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಅಂಬೇಡ್ಕರ್ ಅವರು ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸ್ವೀಕರಿಸಿದ್ದು” ಎಂದು ಹೇಳಿದರು.
ಯಮರಾಜ ಬಂಡಿ ಮಾತನಾಡಿ, “ಅ.17ರಂದು ನಗರಸಭೆಯಿಂದ ಆರಂಭವಾಗಿ ಎಲ್ಐಸಿ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟ ಮೆರವಣಿಗೆ ನಡೆಯುತ್ತದೆ. ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತದೆ” ಎಂದು ವಿವರಿಸಿದರು.





