2024ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಬಾಗಲಕೋಟೆ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಅಂಕಿತಾ ಬಸಪ್ಪ ಕೊನ್ನೂರು ಅವರು ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಅಂಕಿತಾ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಫಲಿತಾಂಶದ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ಅಂಕಿತಾ, ಶೇ.100ರಷ್ಟು ಅಂಕ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿರುವುದಾಗಿ ತಿಳಿಸಿದ್ದಾರೆ.
“ಹೆಚ್ಚು ಅಂಕ ಪಡೆಯುವಂತೆ ನನಗೆ ಮನೆಯಲ್ಲಿ ಯಾವುದೇ ಒತ್ತಡ ಇರಲಿಲ್ಲ. ನಾನು ಪ್ರತಿ ನಿತ್ಯ 2-3 ಗಂಟೆ ಮಾತ್ರ ಓದುತ್ತಿದ್ದೆ. ಶಾಲೆಯಲ್ಲಿ ಮಾಡಿದ ಪಾಠವನ್ನು ಅಂದೇ ಓದುವುದು ಮುಖ್ಯ. ಜನವರಿ- ಫೆಬ್ರವರಿ ವೇಳೆಗೆ ಎಲ್ಲ ಪಾಠ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಬಂದಾಗ ಅರ್ಥಮಾಡಿಕೊಳ್ಳಲು ಆಗಲ್ಲ. ಶಾಲೆಯಲ್ಲಿ ಎಲ್ಲದಕ್ಕೂ ಬೆಂಬಲ ಕೊಡುತ್ತಿದ್ದರು. ಸ್ಮಾರ್ಟ್ ಕ್ಲಾಸ್ ಮೂಲಕ ಶಿಕ್ಷಕರು ಅರ್ಥ ಮಾಡಿಸುತ್ತಿದ್ದರು” ಎಂದು ಅಂಕಿತಾ ಹೇಳಿದ್ದಾರೆ.
“ನನ್ನ ಫಲಿತಾಂಶದಿಂದ ಅಪ್ಪ-ಅಮ್ಮ ಖುಷಿಯಾಗಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಖುಷಿಯಾಗಿದ್ದಾರೆ. ಮುಂದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಂದುವರಿಯುತ್ತೇನೆ. ಮೊದಲಿನಿಂದ ಸೈನ್ಸ್ ಹಾಗೂ ಗಣಿತದ ಬಗ್ಗೆ ಒಲುವು ಇತ್ತು. ಐಎಎಸ್ ಅಧಿಕಾರಿ ಆಗಬೇಕು ಎನ್ನುವ ಆಸೆಯಿದೆ” ಎಂದು ಎಸ್‍ಎಸ್‍ಎಲ್‍ಸಿ ಟಾಪರ್ ಅಂಕಿತಾ ಹೇಳಿದ್ದಾರೆ.
“ನಮ್ಮ ಹಾಸ್ಟೆಲ್‍ನಲ್ಲಿ ಫೋನ್ ಇರಲಿಲ್ಲ. ನನ್ನ ಶಿಕ್ಷಣಕ್ಕೆ ಬೇಕಾದ ವಿಷಯವನ್ನು ಕಂಪ್ಯೂಟರ್‌ನಲ್ಲಿ ಯೂಟ್ಯೂಬ್‍ನಲ್ಲಿ ನೋಡುತ್ತಿದ್ದೆ. ಜತೆಗೆ ಸೋಶಿಯಲ್ ಮೀಡಿಯಾ ಬಳಕೆ ಕಡಿಮೆ ಮಾಡಬೇಕು” ಎಂದು ಹೇಳಿದ್ದಾರೆ.





