ಸಾರ್ವಜನಿಕರ ಸಮಸ್ಯೆಗಳು, ಕುಂದುಕೊರತೆಗಳಿಗೆ ಪಿಡಿಒ ಸರಿಯಾಗಿ ಸ್ಪಂದಿಸುತ್ತಿಲ್ಲ. ಜನರ ಕೈಗೆ ಸಿಗುವುದೇ ಇಲ್ಲ. ಸರಿಯಾಗಿ ಕೆಲವನ್ನೂ ಮಾಡುತ್ತಿಲ್ಲ. ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿ ಗ್ರಾಮ ಪಂಚಾಯತಿ ಪಿಡಿಒ ಶಿಲ್ಪಾ ರ‍್ಯಾಕಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗೌಡ, ಪಿಡಿಒ ಶಿಲ್ಪಾ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮಸ್ಯೆ ಹೇಳಿಕೊಂಡು ಬರುವ ಸಾರ್ವಜನಿಕರಿಗೆ ಗೌರವ ಕೊಡುವುದಿಲ್ಲ. ಅವರನ್ನು ವರ್ಗಾವಣೆ ಮಾಡಬೇಕು” ಎಂದು ಆಗ್ರಹಿಸಿದರು.
ಗ್ರಾಮದ ಮುಖಂಡ ಶರಣಪ್ಪ ಗೋಪಲಪ್ಪನವರ ಮಾತನಾಡಿ, “ಗ್ರಾಮದ ಜನರಿಗೆ ಒಂದು ವರ್ಷದಿಂದ ಜಾಬ್ ಕಾರ್ಡ್ ನೀಡಲಾಗಿಲ್ಲ. ಮನರೇಗಾ ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಪಾವತಿ ಮಾಡಿಲ್ಲ. ದನದ ಕೊಟ್ಟಿಗೆ ನಿರ್ಮಿಸಿದ ರೈತರಿಗೆ ಸರಿಯಾಗಿ ಬಿಲ್ ಪಾವತಿ ಮಾಡಲಾಗಿಲ್ಲ. ರಸ್ತೆ, ಚರಂಡಿ, ಶೌಚಾಲಯ ನಿರ್ಮಾಣ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಭೇಟಿ ನೀಡಿದ್ದು, ಪ್ರತಿಭಟನಾಕಾರರೊಂದಿಗೆ ಚರ್ಚಿಸಿದ್ದಾರೆ. ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಬರವಸೆ ನೀಡಿದ್ದಾರೆ.




